Advertisement

ದಶಕದ ನಂತರ ಮಾರಿಕಾಂಬಾ ಜಾತ್ರೆ

07:30 AM Jan 28, 2019 | Team Udayavani |

ಮಾಯಕೊಂಡ: ಗ್ರಾಮದಲ್ಲಿ ಜ. 29ರಿಂದ‌ ಫೆ.1ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿರುವ ಜಾತ್ರೆಯ ಸಂಭ್ರಮ ಮನೆ ಮಾಡಿದೆ. ಕಳೆದ ಬಾರಿ 2008ರಲ್ಲಿ ನಡೆದಿದ್ದ ಮಾರಿಕಾಂಬಾ ಜಾತ್ರೆ ಈಗ 11 ವರ್ಷಗಳ ಬಳಿಕ ನಡೆಯುತ್ತಿದೆ.

Advertisement

ಮನೆಗಳಿಗೆ ಸುಣ್ಣ-ಬಣ್ಣ, ಮಕ್ಕಳಿಗೆ ಹೊಸ ಬಟ್ಟೆ, ಮನೆ ಎದುರು ಶಾಮಿಯಾನಾ, ಬಾಡೂಟ ಸಿದ್ಧತೆ ಎಂದು ಪ್ರತಿ ಕುಟುಂಬ ಸುಮಾರು 50 ಸಾವಿರದಿಂದ 1 ಲಕ್ಷ ರೂ. ಖರ್ಚು ಮಾಡಿವೆ. 1 ಸಾವಿರಕ್ಕೂ ಹೆಚ್ಚು ಮನೆಯಿರುವ ಗ್ರಾಮದಲ್ಲಿ 5ರಿಂದ 6 ಕೋಟಿ ರೂ. ವೆಚ್ಚವಾಗುವ ನಿರೀಕ್ಷೆಯಿದೆ. ದೂರದ ಊರುಗಳಲ್ಲಿರುವ ಸಂಬಂಧಿಕರು ಗ್ರಾಮದತ್ತ ಮುಖ ಮಾಡಿದ್ದು, ಜಾತ್ರೆಗೆ ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿದೆ.

ದೇವಸ್ಥಾನ ಕಮೀಟಿ ಮತ್ತು ಗ್ರಾಮ ಪಂಚಾಯಿತಿಯವರು ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಈಗಗಾಲೇ ಗ್ರಾಮದಲ್ಲಿ ಸ್ವಚ್ಛತೆ, ಬೀದಿ ದೀಪ, ಕುಡಿಯುವ ನೀರು ಮೊದಲಾದ ಮೂಲಭೂತ ಸೌಕರ್ಯ ವ್ಯವಸ್ಥೆ ಮಾಡಿದ್ದಾರೆ. ಬಿಗಿ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಗ್ರಾಮದ ಎಲ್ಲ ದೇವಸ್ಥಾನ ಮತ್ತು ಪ್ರಮುಖ ಬೀದಿಗಳಿಗೆ ವಿದ್ಯುತ್‌ ಅಲಂಕಾರ ಮಾಡಲಾಗಿದೆ.

ಬಾಡೂಟವೇ ಪ್ರಮುಖ ಇಲ್ಲಿ: ಮಾರಮ್ಮನಿಗೆ ಹರಕೆ ಒಪ್ಪಿಸೋದು, ಉರುಳು ಸೇವೆ ಮಾಡೋದು ಹೀಗೆ ವಿವಿಧ ರೀತಿ ಭಕ್ತಿ ಸಮರ್ಪಣೆ ಒಂದು ಭಾಗವಾದರೆ, ಜಾತ್ರೆಯ ಪ್ರಮುಖ ಭಾಗ ಬಾಡೂಟ.

ಮೊದಲ ದಿನ ಮಂಗಳವಾರ ಹೋಳಿಗೆ ಸಿಹಿಯೂಟದ ನಂತರ ಬುಧವಾರದಿಂದ ಪ್ರಾರಂಭವಾಗುವ ಬಾಡೂಟ ಎರಡು- ಮೂರು ದಿನಗಳವರೆಗೆ ನಿರಂತರವಾಗಿ ನಡೆಯುತ್ತದೆ. ಮಾರಮ್ಮನಿಗೆ ಹರಕೆ ಸಲ್ಲಿಸಿದ ನಂತರ ಮರುದಿನ ಅಂದರೆ ಬುಧವಾರ ಬೆಳಗಿನ ಜಾವದಿಂದ ಹಬ್ಬದ ಸಂಭ್ರಮ ಕಳೆಗಟ್ಟುತ್ತದೆ.

Advertisement

ಕುರಿಗಳ ಖರೀದಿ ಜೋರು: ಮಾರಮ್ಮನ ಜಾತ್ರೆಗಾಗಿ ಚಿತ್ರದುರ್ಗ, ರಾಣೆಬೇನ್ನೂರು, ಹರಿಹರ, ದಾವಣಗೆರೆ ಸಂತೆಗಳಿಂದ ಮತ್ತು ಅಕ್ಕ ಪಕ್ಕದ ಗ್ರಾಮಗಳಿಗೆ ತೆರಳಿ ಖರೀದಿ ಮಾಡಿಕೊಂಡು ಬಂದಿದ್ದಾರೆ. ಬುಧವಾರದ ಬಾಡೂಟಕ್ಕೆ ಅನುಕೂಲವಾಗುವಂತೆ ಜನ ಮನೆಯ ಖಾಲಿ ಜಾಗದಲ್ಲಿ ಶಾಮಿಯಾನ, ಇನ್ನು ಇತರೆ ದುರಸ್ತಿ ಕಾರ್ಯಗಳನ್ನು ಮಾಡಿಕೊಂಡಿದ್ದಾರೆ. ಬಾಡೂಟಕ್ಕಾಗಿ ಬೇಕಾದ ಮಸಾಲೆ, ತರಕಾರಿ, ಖರೀದಿ ಜೋರಾಗಿ ನಡೆದಿದೆ.

ಬಯಲು ಜಂಗಿ ಕುಸ್ತಿ ಪ್ರಮುಖ ಆಕರ್ಷಣೆ: ಸಂಪ್ರದಾಯದಂತೆ ಮಾರಿಕಾಂಬಾ ದೇವಿಗೆ ಮಂಗಳವಾರ ಮದುವಣಗಿತ್ತಿ ಶಾಸ್ತ್ರ, ಆಸಾದಿ ನಡೆಯುತ್ತದೆ. ಬುಧವಾರ ಬೇಟೆ, ಗಾವು ನಡೆಯಲಿವೆ. ಗುರುವಾರ ಮತ್ತು ಶುಕ್ರವಾರ ಬಯಲು ಜಂಗಿ ಕುಸ್ತಿಗಳನ್ನು ಆಯೋಜಿಸಲಾಗಿದೆ. ರಾಜ್ಯದ ನಾನಾ ಮೂಲೆಗಳಿಂದ ಹೆಸರಾಂತ ಪೈಲ್ವಾನರು ಆಗಮಿಸಲಿದ್ದಾರೆ. ವಿಜೇತರಿಗೆ ಬೆಳ್ಳಿಗಧೆ ಮತ್ತು ನಗದು ಬಹುಮಾನ ನೀಡಲಾಗುವುದು ಎಂದು ಜಾತ್ರಾ ಸಮಿತಿ ತಿಳಿಸಿದೆ.ಮೌಡ್ಯತೆಯ ಹೆಸರಿನಲ್ಲಿ ಪ್ರಾಣಿ ಬಲಿ, ಬೇವಿನ ಉಡುಗೆ ಹರಕೆ ಮೊದಲಾದವುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಪಿಎಸ್‌ಐ ಸಣಿಂಗಣ್ಣನವರ ತಿಳಿಸಿದ್ದಾರೆ.

ಶಶಿಧರ್‌ ಶೇಷಗಿರಿ

Advertisement

Udayavani is now on Telegram. Click here to join our channel and stay updated with the latest news.

Next