ದಾವಣಗೆರೆ: ಗಾಂಜಾ ಮತ್ತು ಮಾದಕ ದ್ರವ್ಯ ಮಾರಾಟ ಆರೋಪದಡಿ ವೈದ್ಯಕೀಯ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಕೇರಳದ ತಿರುವನಂತಪುರ ಜಿಲ್ಲೆ ವರ್ತಲ ಪಟ್ಟಣದ ಪುನ್ನಮೂಚ್ ರಸ್ತೆ ನಿವಾಸಿ, ದಾವಣಗೆರೆಯ ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿ ಸಾಜನ್ ರಾಜ (28) ಬಂಧಿತ ಆರೋಪಿ.
ಸಾಜನ್ ರಾಜ ವೈದ್ಯಕೀಯ ಕೋರ್ಸ್ ಓದುತ್ತಿರುವ ಇತರೆ ವಿದ್ಯಾರ್ಥಿಗಳಿಗೆ ಗಾಂಜಾ ಸೊಪ್ಪಿನ ಜೊತೆಗೆ ಮಾದಕ ದ್ರವ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಮಾಹಿತಿ ಹಿನ್ನೆಲೆಯಲ್ಲಿ ಸಿಇಎನ್ ಪೊಲೀಸ್ ಇನ್ಸ್‌ಪೆಕ್ಟರ್ ಟಿ.ವಿ. ದೇವರಾಜ್ ನೇತೃತ್ವದ ಪ್ರಕಾಶ್‌ರಾವ್, ರವಿ, ಮಂಜುನಾಥ್, ಲೋಹಿತ್, ರಮೇಶ್, ವೀರಭದ್ರಪ್ಪ, ನಾಗರಾಜ್, ಮಾರುತಿ, ಈಶ್ವರಪ್ಪ, ಸಚಿನ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ, ಆತನನ್ನು ಬಂಧಿಸಿ, 45 ಸಾವಿರ ರೂಪಾಯಿ ಮೌಲ್ಯದ 1.1 ಕೆಜಿ ಗಾಂಜಾ ಸೊಪ್ಪು, 0.10 ಗ್ರಾಂ ತೂಕದ LSD(Lysergicacid Diethylamide), 1.79 ತೂಕದ MDMA transparent 7 ಟ್ಯಾಬ್ಲೆಟ್, 1.56 ಗ್ರಾಂ ತೂಕದ ಎಂಡಿಎಂಎ ಹಾಗೂ ಮಾದಕ ದ್ರವ್ಯ ಸೇವನೆಗೆ ಬಳಸುತ್ತಿದ್ದ ಪರಿಕರ ವಶಪಡಿಸಿಕೊಂಡಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಆರ್. ಚೇತನ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಳೆದ ಹಲವಾರು ದಿನಗಳಿಂದ ಆಜಾದ್ ನಗರ, ಸಿದ್ದವೀರಪ್ಪ ಬಡಾವಣೆ, ಹರಿಹರ ಇತರೆಡೆ ಗಾಂಜಾ ಸೊಪ್ಪಿನ ಜಾಲ ಪತ್ತೆ ಹಚ್ಚುತ್ತಿರುವ ತಂಡ ಇದೇ ಮೊದಲ ಬಾರಿಗೆ ಎಲ್‌ಎಸ್‌ಡಿಯಂತಹ ಮಾದಕ ದ್ರವ್ಯ ಮಾರಾಟದ ಪತ್ತೆ ಹಚ್ಚಿದೆ. 0.1 ಗ್ರಾಂ ಎಲ್‌ಎಸ್‌ಡಿ ವಶಪಡಿಸಿಕೊಂಡಿದೆ. 0.002 ಗ್ರಾಂನಷ್ಟು ಎಲ್‌ಎಸ್‌ಡಿ ಭಾರೀ ಪರಿಣಾಮ ಉಂಟು ಮಾಡುವಂತಹ ಮಾದಕ ದ್ರವ್ಯ ಎಂದು ಎಸ್‌ಪಿ ತಿಳಿಸಿದರು. ಬಂಧಿತ ಸಾಜನ್ ರಾಜ 2010ರಲ್ಲಿ ವೈದ್ಯಕೀಯ ಕೋರ್ಸ್ ಸೇರಿದ್ದು, ಈಗ ಅಂತಿಮ ವರ್ಷದಲ್ಲಿದ್ದೇನೆ ಎಂದು ಹೇಳುತ್ತಿದ್ದಾನೆ. ಅದೇನು ನಿಜವಾ ಅಥವಾ ಸುಳ್ಳಾ. ಈ ಜಾಲದಲ್ಲಿ ಅವನೊಬ್ಬನೇ ಇದ್ದನಾ ಅಥವಾ ಬೇರೆಯವರೂ ಇದ್ದಾರಾ ಎಂಬ ಬಗ್ಗೆ ತನಿಖೆ ನಡೆಸಲಾಗುವುದು. ಮಾದಕ ದ್ರವ್ಯ ಬಳಸಿದರೆ 1 ವರ್ಷ, ಮಾರಾಟ ಮಾಡುವುದಕ್ಕೆ 10 ವರ್ಷದ ಶಿಕ್ಷೆ ಇದೆ. ಸಾಜನ್ ರಾಜ ವಿರುದ್ಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಆ್ಯಕ್ಟ್ 1985 ಯು/ಎಸ್ 20(ಬಿ) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.
ಗಾಂಜಾ ಸೊಪ್ಪಿನ ಜೊತೆಗೆ ಮಾದಕ ದ್ರವ್ಯ ಮಾರಾಟ ಮಾಡಲಾಗುತ್ತಿದೆ ಎಂದು ಸಿಕ್ಕ ಮಾಹಿತಿ ಆಧಾರದಲ್ಲಿ ಚುರುಕಿನ ತನಿಖೆ ಕೈಗೊಂಡಾಗ ಸಾಜನ್ ರಾಜ ಸಿಕ್ಕಿ ಬಿದ್ದಿದ್ದಾನೆ. ದಾವಣಗೆರೆಯ ಕೆಲವು ಕಾಲೇಜು, ಹಾಸ್ಟೆಲ್‌ಗಳು, ಪಾರ್ಕ್ ಭಾಗದಲ್ಲಿ ಗಾಂಜಾ ಸೊಪ್ಪು ಇತರೆ ಮಾದಕ ಪದಾರ್ಥಗಳ ಮಾರಾಟ ನಡೆಯುತ್ತಿದೆ ಎಂಬ ಮಾಹಿತಿ ಇದೆ. ಅಂತಹ ಪ್ರದೇಶದಲ್ಲಿ ಕಾಲೇಜು, ಹಾಸ್ಟೆಲ್‌ಗಳ ಹಳೆಯ ವಿದ್ಯಾರ್ಥಿಗಳ ಚಲನವಲನದ ಬಗ್ಗೆ ತೀವ್ರ ನಿಗಾ ಇಡಲಾಗಿದೆ ಎಂದು ತಿಳಿಸಿದರು.
ಡಿಸಿಆರ್‌ಬಿ ಡಿವೈಎಸ್ಪಿ ಗೋಪಾಲಕೃಷ್ಣಗೌಡ, ಸಿಇಎನ್ ಪೊಲೀಸ್ ಇನ್ಸ್‌ಪೆಕ್ಟರ್ ಟಿ.ವಿ. ದೇವರಾಜ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ಬಿಲ್ಡಪ್ ಬಾಯ್…
ಗಾಂಜಾ ಮತ್ತು ಮಾದಕ ದ್ರವ್ಯ ಮಾರಾಟ ಮಾಡಿ ಸಿಕ್ಕಿ ಬಿದ್ದಿರುವ ಸಾಜನ್ ರಾಜ ತನ್ನಲ್ಲಿರುವ ಗಾಂಜಾ, ಮಾದಕ ದ್ರವ್ಯಗಳ ಬಗ್ಗೆ ಫೋಟೋ ತೆಗೆಯುತ್ತಿದ್ದಲ್ಲದೆ ಕೆಲವರ ಮುಂದೆ ಬಿಲ್ಡಪ್ ಕೊಡುತ್ತಿದ್ದ. ಸಿದ್ದವೀರಪ್ಪ ಬಡಾವಣೆಯ ಮನೆಯೊಂದರಲ್ಲಿ ಬಾಡಿಗೆ ಇದ್ದ ಆತ, ಇಂಟರ್ನ್ಶಿಪ್ ಮುಗಿಸಿ, ಕೇರಳದಲ್ಲಿ ಸೆಟ್ಲ ಆಗಲು ಯೋಚನೆ ಮಾಡಿದ್ದ. ಅವನೇ ಗಾಂಜಾ ಮತ್ತಿತರ ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದ. ಇತರರಿಗೆ ಕೇಳಿದಾಗ ಹಣ ಪಡೆದು ಕೊಡುತ್ತಿದ್ದ. ಹಣ ಕೈ ಸೇರುವುದು ಹೆಚ್ಚಾಗುತ್ತಿದ್ದಂತೆ ಪಾರ್ಟ್‌ಟೈಮ್ ಬಿಸಿನೆಸ್ ಮಾಡಿಕೊಂಡಿದ್ದ. ಮನೆಯ ಶೋ ಕೇಸ್‌ನಲ್ಲಿ ಬಹಳ ಅಂದ ಚೆಂದವಾಗಿ ಗಾಂಜಾ, ಮಾದಕ ದ್ರವ್ಯದ ಪ್ಯಾಕೆಟ್ ಇಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.