ಹೇಗಾದರೂ ಮಾಡಿ ಶ್ರೀಮಂತರಾಗಬೇಕು, ಕೈ ತುಂಬಾ ಕಾಸು ಮಾಡಿ ಸೆಟ್ಲ ಆಗಬೇಕು… ಹೀಗೊಂದು ಕನಸು ಕಂಡ ಗ್ಯಾಂಗ್ ಕೊನೆಗೂ ದೊಡ್ಡ ಡೀಲ್‌ಗೆ ಕೈ ಹಾಕುತ್ತದೆ. ಆ ಹಾದಿಯಲ್ಲಿ ಯಶಸ್ವಿಯಾಗುತ್ತಾ, ಆಸೆ ಈಡೇರುತ್ತಾ ಅಥವಾ “ಜೈಲೂಟ’ವೇ ಗತಿಯಾಗುತ್ತಾ ಎಂಬ ಕುತೂಹಲವಿದ್ದರೆ ನೀವು “ಮಾರಿಗೋಲ್ಡ್’ ಸಿನಿಮಾ ನೋಡಬೇಕು.
ಈ ವಾರ ತೆರೆಕಂಡಿರುವ “ಮಾರಿಗೋಲ್ಡ್’ ಒಂದು ಸಸ್ಪೆನ್ಸ್-ಥ್ರಿಲ್ಲರ್ ಚಿತ್ರ. ನಿರ್ದೇಶಕ ರಾಘವೇಂದ್ರ ನಾಯಕ್ ತಮ್ಮ ಚೊಚ್ಚಲ ಚಿತ್ರದಲ್ಲಿ ಭರವಸೆ ಮೂಡಿಸಿದ್ದಾರೆ. ಮುಖ್ಯವಾಗಿ ಸಿನಿಮಾದ ಕುತೂಹಲದ ಅಂಶಗಳನ್ನು ಕೊನೆವರೆಗೂ ಕಾಯ್ದಿರಿಸುತ್ತಾ ಹೋಗಿರುವುದು ಸಿನಿಮಾದ ಪ್ಲಸ್ ಪಾಯಿಂಟ್. ಥ್ರಿಲ್ಲರ್ ಸಿನಿಮಾವಾದರೂ ಸಂಭಾಷಣೆಯ ಮೂಲಕ ಅಲ್ಲಲ್ಲಿ ನಗೆ ಉಕ್ಕಿಸುವ ಪ್ರಯತ್ನವನ್ನು ಮಾಡಲಾಗಿದೆ.
ಚಿತ್ರದಲ್ಲಿ ಬರುವ ವಿಭಿನ್ನ ಮನಸ್ಥಿತಿಯ ಪಾತ್ರಗಳು, ಅವರ ಲೆಕ್ಕಾಚಾರ, ಮುಂದಿನ ನಡೆ ಮೂಲಕ ಸಾಗುವ ಸಿನಿಮಾ ಕೆಲವು ಕಡೆ ಸಿದ್ಧಸೂತ್ರಗಳಿಗೆ ಅಂಟಿಕೊಂಡಿದೆ ಎನಿಸದೇ ಇರದು. ಒಂದಷ್ಟು ದೃಶ್ಯಗಳನ್ನು ಮತ್ತಷ್ಟು ಗಂಭೀರವಾಗಿ, ಡೀಟೇಲಿಂಗ್‌ನಿಂದ ತೋರಿಸಬಹುದಿತ್ತು. ಆದರೆ, ಚಿತ್ರದ ಕ್ಲೈಮ್ಯಾಕ್ಸ್ ಮಾತ್ರ ಪ್ರೇಕ್ಷಕರ ಊಹೆಗೆ ನಿಲುಕದಂತೆ ಮಾಡಿರುವುದು ಚಿತ್ರದ ಪ್ಲಸ್ ಗಳಲ್ಲಿ ಒಂದು.
ನಾಯಕ ದಿಗಂತ್ ಅವರ ಈ ಹಿಂದಿನ ಪಾತ್ರಗಳಿಗೆ ಹೋಲಿಸಿದರೆ ಅವರ ನಟನೆ, ಮ್ಯಾನರಿಸಂ ಎಲ್ಲವೂ ಭಿನ್ನವಾಗಿದೆ. ಹೊಸ ಇಮೇಜ್‌ಗೆ ದಿಗಂತ್ ಪ್ರಯತ್ನಿಸಿರುವುದು ಎದ್ದು ಕಾಣುತ್ತದೆ.
ನಾಯಕಿ ಸಂಗೀತಾ ಶೃಂಗೇರಿ ಬಾರ್ ಡ್ಯಾನ್ಸರ್ ಆಗಿ, ಪ್ರೀತಿಯ ಬಗ್ಗೆ ತಮ್ಮದೇ ಆದ ಕಲ್ಪನೆ ಹೊಂದಿರುವ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ನೆಗೆಟಿವ್ ಶೇಡ್‌ನಲ್ಲಿ ವಜ್ರಾಂಗ್ ಶೆಟ್ಟಿ ಮತ್ತೂಮ್ಮೆ ಮಿಂಚಿದ್ದಾರೆ.
ನಟ ಸಂಪತ್ ಕುಮಾರ್ ತಮ್ಮ ನಟನೆಯ ಮೂಲಕ ಮತ್ತೂಮ್ಮೆ ಗಮನ ಸೆಳೆದಿದ್ದಾರೆ. ರಘು ನಿಡುವಳ್ಳಿ ಒಂದಷ್ಟು ಪಂಚಿಂಗ್ ಡೈಲಾಗ್‌ಗಳ ಜೊತೆಗೆ ಪಡ್ಡೆಗಳನ್ನು ಗಮನದಲ್ಲಿಟ್ಟುಕೊಂಡು ಡೈಲಾಗ್ ಬರೆದಂತಿದೆ. ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ ನೀಡಿದ್ದಾರೆ.
ಆರ್.ಪಿ