Advertisement

ರೋಜರ್ ಟೆನಿಸ್‌ ಕಪ್‌ ಶರಪೋವಾಗೆ ವೈಲ್ಡ್‌ ಕಾರ್ಡ್‌

12:06 PM May 25, 2017 | Team Udayavani |

ಟೊರೊಂಟೊ: ದ್ರವ್ಯ ನಿಷೇಧದ ಬಳಿಕ ಟೆನಿಸ್‌ಗೆ ಮರಳಿರುವ ಮರಿಯಾ ಶರಪೋವಾ ಆಗಸ್ಟ್‌ನಲ್ಲಿ ನಡೆಯಲಿರುವ ರೋಜರ್ ಕಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟೊರೊಂಟೊದಲ್ಲಿ ನಡೆಯಲಿರುವ ಈ ಕೂಟಕ್ಕೆ ಸಂಘಟಕರು ಶರಪೋವಾ ಅವರಿಗೆ ವೈಲ್ಡ್‌ ಕಾರ್ಡ್‌ ನೀಡಿರುವುದನ್ನು ದೃಢಪಡಿಸಿದ್ದಾರೆ.

Advertisement

ಕಳೆದ ವರ್ಷದ ಆಸ್ಟ್ರೇಲಿಯನ್‌ ಓಪನ್‌ ವೇಳೆ ನಿಷೇಧಿತ ದ್ರವ್ಯ ಸೇವಿಸಿ ಸಿಕ್ಕಿ ಬಿದ್ದಿದ್ದ ಶರಪೋವಾ ಅವರಿಗೆ 15 ತಿಂಗಳ ನಿಷೇಧ ಹೇರಲಾಗಿತ್ತು. ಒಂದು ತಿಂಗಳ ಹಿಂದೆಯಷ್ಟೇ ಅವರು ಟೆನಿಸ್‌ಗೆ ಮರಳಿದ್ದು ಇಷ್ಟರವರೆಗೆ ಮೂರು ಡಬ್ಲ್ಯುಟಿಎ ಕೂಟಗಳಲ್ಲಿ ಅವರಿಗೆ ವೈಲ್ಡ್‌ಕಾರ್ಡ್‌ ನೀಡಲಾಗಿತ್ತು.

ಸ್ಟಟ್‌ಗರ್ಟ್‌ನಲ್ಲಿ ನಡೆದ ಮೊದಲ ಕೂಟದಲ್ಲಿ ರಶ್ಯನ್‌ ತಾರೆ ಸೆಮಿಫೈನಲ್‌ ತಲುಪಿದ್ದರು. ಆದರೆ ಆಶ್ಚರ್ಯವೆಂಬಂತೆ ಶರಪೋವಾ ಅವರಿಗೆ ಫ್ರೆಂಚ್‌ ಓಪನ್‌ ಸಂಘಟಕರು ವೈಲ್ಡ್‌ಕಾರ್ಡ್‌ ನೀಡಲು ನಿರಾಕರಿಸಿದ್ದಾರೆ. ಶರಪೋವಾ ಎರಡು ಬಾರಿ ಫ್ರೆಂಚ್‌ ಓಪನ್‌ ಜಯಿಸಿದ್ದರು.

ಟೆನಿಸ್‌ನ ಖ್ಯಾತ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಡುವ ಶರಪೋವಾ ಜುಲೈಯಲ್ಲಿ ನಡೆಯಲಿರುವ ವಿಂಬಲ್ಡನ್‌ ಕೂಟಕ್ಕೆ ಅರ್ಹತೆ ಗಳಿಸಲು ಪ್ರಯತ್ನಿಸುತ್ತಿದ್ದಾರೆ. ಯುಎಸ್‌ ಓಪನ್‌ ಕೂಟಕ್ಕೆ ಮುಂಚಿತವಾಗಿ ನಡೆಯುವ ಅಭ್ಯಾಸ ಕೂಟಗಳಲ್ಲಿ ಒಂದಾದ ರೋಜರ್ ಕಪ್‌ನಲ್ಲಿ ಆಡಲು ಇದೀಗ ಶರಪೋವಾಗೆ ಆಹ್ವಾನ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next