ಆ ದಿನಗಳು’ ಖ್ಯಾತಿಯ ನಟ ಚೇತನ್ ಅಭಿನಯದ ಹೊಸಚಿತ್ರ “ಮಾರ್ಗ’ದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆರವೇರಿತು. ಚಿತ್ರದ ಮೊದಲ ದೃಶ್ಯಕ್ಕೆ ನಟ ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಕ್ಲಾಪ್ ಮಾಡಿ ಚಾಲನೆ ನೀಡಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. ಕಳೆದ ಮೂರ್‍ನಾಲ್ಕು ತಿಂಗಳಿನಿಂದ ಚಿತ್ರದ ತೆರೆಮರೆಯ ಕೆಲಸಗಳಲ್ಲಿ ನಿರತವಾಗಿದ್ದ ಚಿತ್ರತಂಡ, ಇದೀಗ “ಮಾರ್ಗ’ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದು, ಸೆಪ್ಟೆಂಬರ್ ಎರಡನೇ ವಾರದಿಂದ ಚಿತ್ರದ ಚಿತ್ರೀಕರಣ ಶುರುವಾಗಲಿದೆ.
ಕ್ರೈಂ – ಥ್ರಿಲ್ಲರ್ ಕಥಾಹಂದರ ಹೊಂದಿರುವ “ಮಾರ್ಗ’ ಚಿತ್ರಕ್ಕೆ ನವ ನಿರ್ದೇಶಕ ಮೋಹನ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಸುಮಾರು 8 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗಿ ಹಲವು ಚಿತ್ರಗಳಿಗೆ ಕೆಲಸ ಮಾಡಿದ ಅನುಭವವಿರುವ ಮೋಹನ್ “ಮಾರ್ಗ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.
ಮುಹೂರ್ತದ ವೇಳೆ ಚಿತ್ರದ ಬಗ್ಗೆ ಮಾತನಾಡಿದ ಮೋಹನ್, “ಸುಮಾರು 3-4 ತಿಂಗಳ ಹಿಂದೆ ಲಾಕ್‌ಡೌನ್ ವೇಳೆಯಲ್ಲಿ ಹುಟ್ಟಿದ ಕಥೆ ಇದು. ಚೇತನ್ ಕಥೆ ಕೇಳಿದ ಕೂಡಲೇ ಖುಷಿಯಿಂದ ಈ ಸಿನಿಮಾ ಮಾಡಲು ಒಪ್ಪಿಕೊಂಡರು. ಇದೊಂದು ಕ್ರೈಂ-ಥ್ರಿಲ್ಲರ್ ಸಬೆjಕ್ಟ್ ಸಿನಿಮಾ. ಅದರ ಜೊತೆ ಸೆಂಟಿಮೆಂಟ್, ಲವ್, ಆ್ಯಕ್ಷನ್ ಕೂಡ ಇರಲಿದೆ. ಕಂಪ್ಲೀಟ್ ಎಂಟರ್‌ಟೈನ್ಮೆಂಟ್ ಪ್ಯಾಕೇಜ್ ಈ ಸಿನಿಮಾದಲ್ಲಿರುತ್ತದೆ. ಮೇಕಿಂಗ್, ಗ್ರಾμಕ್ಸ್, ಸೌಂಡ್ಸ್ ಹೀಗೆ ಟೆಕ್ನಿಕಲ್ ವರ್ಕ್‌ಗೆ ಇದರಲ್ಲಿ ತುಂಬಾ ಪ್ರಾಮುಖ್ಯತೆಯಿದೆ. ಮುಂದಿನ ವರ್ಷದ ಆರಂಭದಲ್ಲಿ ಸಿನಿಮಾವನ್ನು ತೆರೆಗೆ ತರುವ ಪ್ಲಾನ್ ಇದೆ’ ಎಂದರು.
ಇದೇ ವೇಳೆ ಮಾತನಾಡಿದ ನಾಯಕ ನಟ ಚೇತನ್, “ನವ ನಿರ್ದೇಶಕ ಮೋಹನ್ ನನಗೆ ಸುಮಾರು ಆರೇಳು ವರ್ಷಗಳಿಂದ ಪರಿಚಯ. ಅವರು ಹೇಳಿದ ಕಥೆ ಮತ್ತು ಅದರ ಪ್ರಸೆಂಟೇಷನ್ ಇಷ್ಟವಾಯ್ತು. ಹಾಗಾಗಿ ಈ ಸಿನಿಮಾ ಒಪ್ಪಿಕೊಂಡೆ. ಆಕಾಶ್ ಅನ್ನೋದು ಇದರಲ್ಲಿ ನನ್ನ ಕ್ಯಾರೆಕ್ಟರ್ ಹೆಸರು. ಈ ಕ್ಯಾರೆಕ್ಟರ್‌ಗೆ ಬೇರೆ ಬೇರೆ ಶೇಡ್ಸ್ ಇದೆ. ಸಿನಿಮಾದ ಟೈಟಲ್ “ಮಾರ್ಗ’ ಅಂತಿದ್ದರೂ, ಇದು ರೋಡ್ ಕಾನ್ಸೆಪ್ಟ್ ಸಿನಿಮಾವಲ್ಲ. ಲೈಫ್ ಜರ್ನಿಯಲ್ಲಿ ಯಾರು, ಯಾವ ಮಾರ್ಗ ಹಿಡಿದರೆ ಏನೇನು ಆಗ್ತಾರೆ ಅನ್ನೋದೆ ಸಿನಿಮಾದ ಒನ್‌ಲೈನ್ ಸ್ಟೋರಿ’ ಎಂದು ಚಿತ್ರದ ಕಥೆಯ ಎಳೆಯನ್ನು ಬಿಟ್ಟುಕೊಟ್ಟರು. ಇನ್ನು “ಮಾರ್ಗ’ ಚಿತ್ರದಲ್ಲಿ ಚೇತನ್ ಅವರಿಗೆ “ದಿಯಾ’ ಖುಷಿ ರವಿ ಮತ್ತು “ಏಕ್ ಲವ್ ಯಾ’ ಚಿತ್ರದ ಖ್ಯಾತಿಯ ರೀಷ್ಮಾ ನಾಣಯ್ಯ ನಾಯಕಿಯರಾಗಿ ಜೋಡಿಯಾಗುತ್ತಿದ್ದಾರೆ. ಖುಷಿ ಆಶ್ರಮದಲ್ಲಿ ಬೆಳೆದ ಸಿಂಪಲ್ ಹುಡುಗಿಯಾಗಿ ಕಾಣಿಸಿಕೊಂಡರೆ, ರೀಷ್ಮಾ ಲವೆಬಲ್ ಗರ್ಲ್ ಆಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಉಳಿದಂತೆ ಚಿತ್ರದ ಇತರ ಪಾತ್ರಗಳಿಗೆ ಕಲಾವಿದರ ಆಯ್ಕೆ ನಡೆಯುತ್ತಿದ್ದು, ಈ ತಿಂಗಳಾಂತ್ಯಕ್ಕೆ ಎಲ್ಲವೂ ಅಂತಿಮವಾಗಲಿದೆ ಎಂದಿದೆ ಚಿತ್ರತಂಡ.
“ಮಂಗಳ ಮೂರುತಿ ಪ್ರೊಡಕ್ಷನ್ಸ್’ ಬ್ಯಾನರ್ ನಡಿಯಲ್ಲಿ ಮೈಸೂರು ಮೂಲದ ಉದ್ಯಮಿ ಗೌತಂ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಎಸ್.ಕೆ ರಾವ್ ಛಾಯಾಗ್ರಹಣವಿದೆ. ಚಿತ್ರದ 3 ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತವಿದೆ. ಇದೇ ಸೆ. 15 ರಿಂದ “ಮಾರ್ಗ’ ಚಿತ್ರದ ಮೊದಲ ಹಂತದ ಶೂಟಿಂಗ್ ಆರಂಭವಾಗಲಿದ್ದು, ಶೇಕಡಾ 90ರಷ್ಟು ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದರೆ, ಉಳಿದ ಭಾಗ ಚಿಕ್ಕಮಗಳೂರಿನಲ್ಲಿ ನಡೆಯಲಿದೆಯಂತೆ. ಸುಮಾರು 50 ದಿನಗಳ ಶೂಟಿಂಗ್‌ಗೆ ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.
– ಜಿ. ಎಸ್. ಕಾರ್ತಿಕ ಸುಧನ್