ಖಗೋಳ ವಿದ್ಯಮಾನಗಳು ಎಂದ ತತ್‌ಕ್ಷಣ ಅದು ರಾತ್ರಿ ಆಕಾಶಕ್ಕೆ ಮಾತ್ರ ಸೀಮಿತವಲ್ಲ, ಕೆಲವೊಂದು ವಿದ್ಯಮಾನಗಳನ್ನು ಹಗಲಿನ ಸಮಯದಲ್ಲಿ ಕೂಡ ನೋಡಿ ಆನಂದಿಸಬಹುದು. ಅಂತಹ ಒಂದು ವಿಶೇಷ ವಿದ್ಯಮಾನ ವಸಂತ ವಿಷುವ (ವಿಷುವತ್ ಸಂಕ್ರಾಂತಿ). ಪ್ರತೀ ವರ್ಷ ನಡೆಯುವ, ಭೂಮಿ-ಸೂರ್ಯನ ಬಂಧನದಿಂದ ಸಂಭವಿಸುವ ಈ ವಿದ್ಯಮಾನ, ಈ ವರ್ಷ ಮಾರ್ಚ್ 20ರಂದು ಘಟಿಸಲಿದೆ.
ವಿಷುವತ್ ಸಂಕ್ರಾಂತಿಯು ಒಂದು ವಿಶೇಷ ಖಗೋಳ ವಿದ್ಯಮಾನವಾಗಿದ್ದು , ಈ ದಿನ ಭೂಮಿಯ ಮೇಲೆ ಹಗಲು ಮತ್ತು ರಾತ್ರಿಯ ಅವಧಿ ಸಮನಾಗಿರುತ್ತದೆ. ವರ್ಷಕ್ಕೆ ಎರಡು ಬಾರಿ ಅಂದರೆ ಮಾರ್ಚ್ ಮತ್ತು ಸೆಪ್ಟಂಬರ್ ತಿಂಗಳಲ್ಲಿ ವಿಷುವತ್ ಸಂಕ್ರಾಂತಿ ವಿದ್ಯಮಾನವು ಘಟಿಸುತ್ತದೆ. ಈ ವರ್ಷದ ವಿಷುವತ್ ಸಂಕ್ರಾಂತಿಯಂದು ಸೂರ್ಯನು ನಿಖರವಾಗಿ ಪೂರ್ವ ದಿಕ್ಕಿನಲ್ಲಿ ಉದಯಿಸಿ, ಪಶ್ಚಿಮ ದಿಕ್ಕಿನಲ್ಲಿ ಅಸ್ತವಾಗುತ್ತಾನೆ ಮತ್ತು ಈ ದಿನ ಸೂರ್ಯನ ಬೆಳಕು ಭೂಮಿಯ ಸಮಭಾಜಕ ವೃತ್ತದ ಮೇಲೆ ನೇರವಾಗಿ ಬೀಳುತ್ತದೆ.
ವಸಂತ ವಿಷುವತ್ ಸಂಕ್ರಾಂತಿಯ ದಿನ ದಂದು, ಸೂರ್ಯನು ಉತ್ತರ ದಿಕ್ಕಿನಿಂದ ದಕ್ಷಿಣ ದಿಕ್ಕಿನೆಡೆಗೆ ಚಲಿಸಲು ಪ್ರಾರಂಭಿಸುವುದರಿಂದ, ಉತ್ತರ ಗೋಳಾರ್ಧದಲ್ಲಿ ವಸಂತ ಋತು ಆರಂಭವಾಗುತ್ತದೆ.
ಅಲ್ಲದೆ ಈ ದಿನ, ಸೂರ್ಯನ ಕೇಂದ್ರ ಬಿಂದುವು ದಿಗಂತದ ಮೇಲೆ 12 ಗಂಟೆಗಳ ಕಾಲ ಮತ್ತು ದಿಗಂತದ ಕೆಳಗೆ 12 ಗಂಟೆಗಳ ಕಾಲ ಇರುತ್ತದೆ. ಆದರೆ ವಿಷುವತ್ ಸಂಕ್ರಾತಿಯ ದಿನದಂದು ಸಮಭಾಜಕ ವೃತ್ತದಲ್ಲಿ, ಹಗಲು ಮತ್ತು ರಾತ್ರಿಯ ಸಮಯವು ಸಮಾನವಾಗಿರದೆ ಹಗಲಿನ ಅವಧಿಯು ರಾತ್ರಿಯ ಸಮಯಕ್ಕಿಂತ ಸ್ವಲ್ಪ ದೀರ್ಘವಾಗಿರುತ್ತದೆ. ಏಕೆಂದರೆ ದಿನದ ಅವಧಿಯು, ಸೂರ್ಯನ ವೃತ್ತದ ಮೇಲು¤ದಿಯ ಉದಯ ಹಾಗೂ ಅಸ್ತದ ನಡುವಿನ ಅವಧಿಯಾಗಿರುತ್ತದೆ.
ವಿಷುವತ್ ದಿನದಂದು, ನಾವಿರುವ ಸ್ಥಳದ ಅಕ್ಷಾಂಶವನ್ನು (ಲ್ಯಾಟಿಟ್ಯೂಡ್ Latitude) ಕಂಡು ಹಿಡಿಯಬಹುದು. ಈ ಪ್ರಯೋಗವನ್ನು ವಿದ್ಯಾರ್ಥಿಗಳು ಸುಲಭವಾಗಿ ಮಾಡಬಹುದಾಗಿದೆ. ಮೇಲಿನಿಂದ ಕೆಳಕ್ಕೆ ಸಮಾನ ಗಾತ್ರವನ್ನು ಹೊಂದಿರುವ ವಸ್ತುವನ್ನು ನೆಲದ ಮೇಲೆ ನೇರವಾಗಿ ಇರಿಸಿ, ಆ ವಸ್ತುವಿನ (ಉದಾ: ಮೇಣದ ಬತ್ತಿ/ಕೋಲು) ಅತೀ ಸಣ್ಣ ನೆರಳಿನ ಉದ್ದವನ್ನು ಅಳೆಯುವ ಮೂಲಕ ನಮ್ಮ ನೆರಳನ್ನೂ ಅಳೆಯಬಹುದು. ವಸ್ತು ಹಾಗೂ ಅದರ ನೆರಳಿನಿಂದ ಉಂಟಾಗುವ ಲಂಬಕೋನ ತ್ರಿಭುಜದಲ್ಲಿ (Right Angled Triangle), ವಸ್ತುವು ತ್ರಿಭುಜದ ಅಡಿಪಾಯ (Adjacent side)
ಎಂದು ಪರಿಗಣಿಸಿದರೆ, ಅದರ ನೆರಳು ತ್ರಿಭುಜದ ಅಭಿಮುಖ (opposite side) ಬಾಹು ಆಗಿರುತ್ತದೆ. ಈ ಎರಡು ಬಾಹುಗಳಿಂದಾದ ಕೋನವು (Angle), ಸ್ಥಳದ ಅಕ್ಷಾಂಶವನ್ನು ನೀಡುತ್ತದೆ.
ಖಗೋಳ ಸಮಭಾಜಕವೃತ್ತವನ್ನು (ವಿಷುವದ್ವೃತ್ತ Celestial Equator), ಕ್ರಾಂತಿವೃತ್ತವು (ಎಕ್ಲಿಪ್ಟಿಕ್ ಉclಜಿಟಠಿಜಿc) ಎರಡು ಬಿಂದುಗಳಲ್ಲಿ ಛೇದಿಸುತ್ತದೆ. ಈ ಬಿಂದುಗಳೇ ವಿಷುವದ್ಬಿಂದುಗಳು. ಸೂರ್ಯನು ಈ ಬಿಂದುವನ್ನು ಸಂಕ್ರಮಿಸಿ, ಪ್ರತೀ ದಿನ ಆಕಾಶದಲ್ಲಿ ಉತ್ತರದ ಕಡೆ ಚಲಿಸುವುದನ್ನು ನೋಡಬಹುದು (ಉತ್ತರ ಅಯನ).
ವಿಶ್ವಾದ್ಯಂತ ವಿಷುವತ್ ಸಂಕ್ರಾಂತಿಯನ್ನು ಮಾರ್ಚ್ ಈಕ್ವಿನಾಕ್ಸ್ (March Equinox) ಎಂದು ಕರೆಯುತ್ತಾರೆ. ಭೂಗೋಳಾರ್ಧದ ಮೇಲ್ಭಾಗದವರು ಈ ದಿನವನ್ನು ವರ್ನಲ್ ಈಕ್ವಿನಾಕ್ಸ್ (Vernal Equinox) ಎಂದು ಕೂಡ ಕರೆಯುತ್ತಾರೆ.
-ಅತುಲ್ ಭಟ್, ಉಡುಪಿ