Advertisement

ಮಾ.26ಕ್ಕೆ ಮೌಲ್ಯಮಾಪನ ಬಹಿಷ್ಕಾರ ತೀರ್ಮಾನ?

11:36 AM Mar 19, 2017 | Team Udayavani |

ಬೆಂಗಳೂರು: ಮೌಲ್ಯಮಾಪನಕ್ಕೆ ಗೈರು ಹಾಜರಾದರೆ 6 ತಿಂಗಳು ಜೈಲುಶಿಕ್ಷೆ ಅಥವಾ 1 ಲಕ್ಷ ರೂ. ದಂಡ ವಿಧಿಸುವ ಕರ್ನಾಟಕ ಶಿಕ್ಷಣ ತಿದ್ದುಪಡಿ ಕಾಯ್ದೆ ಸಾಧಕ-ಬಾಧಕ ಹಾಗೂ ಪಿಯುಸಿ ಮೌಲ್ಯಮಾಪನ ಬಹಿಷ್ಕಾರ ಕುರಿತು ಚರ್ಚಿಸಲು ಮಾರ್ಚ್‌ 26 ರಂದು ಸಭೆ ನಿಗದಿಯಾಗಿದೆ.

Advertisement

ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಬೇಡಿಕೆ ಈಡೇರಿಕೆ ಸಂಬಂಧ ಸರ್ಕಾರದ ಮೇಲೆ ಒತ್ತಡ ಹೇರಲು ಮಾರ್ಚ್‌ 26 ರಂದು ಸಭೆ ನಿಗದಿಪಡಿಸಲಾಗಿದ್ದು, ಅಲ್ಲಿ ಮೌಲ್ಯಮಾಪನ ಬಹಿಷ್ಕಾರ ಹಾಗೂ ಕರ್ನಾಟಕ ಶಿಕ್ಷಣ ತಿದ್ದುಪಡಿ ಕಾಯ್ದೆ ಕುರಿತು ಚರ್ಚಿಸಲಾಗುವುದು ಎಂದು ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರೆಲ ತಿಳಿಸಿದ್ದಾರೆ.

ದ್ವಿತೀಯ ಪಿಯುಸಿ ಉಪನ್ಯಾಸಕರಿಗೆ ವೇತನದ ವ್ಯತ್ಯಾಸ ಸರಿಪಡಿಸಿಕೊಳ್ಳಲು 2 ಹೆಚ್ಚುವರಿ ಬಡ್ತಿ ನೀಡುವಂತೆ 2010ರಿಂದ ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದೇವೆ. ಕಳೆದ ವರ್ಷ ಹೆಚ್ಚುವರಿ ಬಡ್ತಿ ನೀಡುತ್ತೇವೆ ಎಂದು ಮುಖ್ಯಮಂತ್ರಿ ಆಶ್ವಾಸನೆ ನೀಡಿದ ನಂತರ ಮುಷ್ಕರ ಕೈಬಿಟ್ಟಿದ್ದೆವು. ಆದರೆ, ಕೇವಲ 1 ಬಡ್ತಿ ಮಾತ್ರ ನೀಡಿದ್ದು, ಸರ್ಕಾರ ಮಾತಿಗೆ ತಪ್ಪಿದೆ ಎಂದು ದೂರಿದರು.

ಮೌಲ್ಯಮಾಪನ ಬಹಿಷ್ಕರಿಸುವ ಉಪನ್ಯಾಸಕರನ್ನು ಜೈಲಿಗೆ ಕಳುಹಿಸುವ ವಿಧೇಯಕ ಮೂಲಕ ಹೋರಾಟ ಹತ್ತಿಕ್ಕಲು ಸರ್ಕಾರ
ಮುಂದಾಗಿದೆ. ಇದಕ್ಕೆ ಹೆದರುವ ಪ್ರಶ್ನೆಯೇ ಇಲ್ಲ . ಈಗಾಗಲೇ ಕಳೆದ ಡಿಸೆಂಬರ್‌ನಲ್ಲಿಯೇ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 5 ಹಂತದಲ್ಲಿ ಹೋರಾಟ ಹಮ್ಮಿಕೊಂಡಿದ್ದೆವು.

ಮೊದಲ ಹಂತದಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದೆವು. ನಂತರ ಪ್ರಥಮ ಪಿಯುಸಿ ಪರೀಕ್ಷೆಗಳಲ್ಲಿ ಕಪ್ಪುಪಟ್ಟಿ ಧರಿಸಿ ಉಪನ್ಯಾಸಕರು ಪರೀಕ್ಷೆಗೆ ಹಾಜರಾಗಿ ಕರ್ತವ್ಯ ನಿರ್ವಹಿಸಿದ್ದರು. ಮೂರನೇ ಹಂತವಾಗಿ ಮಾ.4ರಂದು ಆನಂದರಾವ್‌ ವೃತ್ತ ಸಮೀಪದ ಗಾಂಧಿ ಪ್ರತಿಮೆ ಎದುರು ಒಂದು ದಿನ ಸಾಂಕೇತಿಕ ಧರಣಿ ನಡೆಸಲಾಗಿತ್ತು.

Advertisement

4ನೇ ಹಂತದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬಹಿಷ್ಕರಿಸಬೇಕೆಂಬುದಾಗಿ ಉಪನ್ಯಾಸಕರೆಲ್ಲರೂ ನಿರ್ಧಾರ ಕೈಗೊಂಡಿದ್ದರು. ಆದರೆ, ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದೆನ್ನುವ ಕಾರಣಕ್ಕೆ ಪ್ರಸ್ತುತ ನಡೆಯುತ್ತಿರುವ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಕಪ್ಪುಪಟ್ಟಿ ಧರಿಸಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು. 

ಮಾ.26ರಂದು ಬೆಳಗ್ಗೆ 11ಕ್ಕೆ ಶಾಸಕರ ಭವನದಲ್ಲಿ ಉಪನ್ಯಾಸಕರ ಸಭೆ ಕರೆಯಲಾಗಿದೆ. ಅಲ್ಲಿ ಮೌಲ್ಯಮಾಪನ ಬಹಿಷ್ಕಾರ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಕರ್ನಾಟಕ ಶಿಕ್ಷಣ ತಿದ್ದುಪಡಿ ಕಾಯ್ದೆಯಲ್ಲಿ ಉಪನ್ಯಾಸಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಕವಾಗಿರುವ ನಿಯಮದ ಬಗ್ಗೆಯೂ
ಚರ್ಚಿಸಲಿದ್ದು, ಮುಂದೆ ಏನು ಮಾಡಬೇಕು ಎಂಬುದರ ರೂಪುರೇಷೆ ಸಿದ್ಧಪಡಿಸಲಾಗುವುದು. ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. 

ಶಿಕ್ಷಕರ ವಿರುದ್ಧ ಕ್ರಮಕ್ಕೆ ಆಕ್ಷೇಪ
ಈ ಮಧ್ಯೆ, ಉತ್ತರ ಪತ್ರಿಕೆ ಮೌಲ್ಯ ಮಾಪನ ಬಹಿಷ್ಕರಿಸುವ ಶಿಕ್ಷಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ಅಖೀಲ ಭಾರತ ಶಿಕ್ಷಣ ಸಂಸ್ಥೆಗಳ ಒಕ್ಕೂಟ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ನಗರದಲ್ಲಿ ಶನಿವಾರ ನಡೆದ 65ನೇ ರಾಷ್ಟ್ರೀಯ ಶೈಕ್ಷಣಿಕ ಸಮಾವೇಶದಲ್ಲಿ ಮಾತನಾಡಿದ ಒಕ್ಕೂಟದ ವಿಭಾಗೀಯ ಜಂಟಿ ಕಾರ್ಯದರ್ಶಿ ಎಚ್‌.ಕೆ.ಮಂಜುನಾಥ್‌ , ಮೌಲ್ಯಮಾಪನ ಬಹಿಷ್ಕರಿಸುವ ಶಿಕ್ಷಕರ ವಿರುದ್ಧ ಕ್ರಮಕೈಗೊಳ್ಳುವ ಬದಲು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೇಡಿಕೆ ಆಲಿಸಿ ಸಮಸ್ಯೆ ಪರಿಹರಿಸಬೇಕೇ ಹೊರತು ಕಾನೂನು ಕ್ರಮ ಸರಿಯಲ್ಲ. ಏಕರೂಪ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ, ವೇತನ ತಾರತಮ್ಯ ನಿವಾರಣೆ ಹಾಗೂ ಪಠ್ಯಪುಸ್ತಕ ರಾಷ್ಟ್ರೀಕರಣಗೊಳಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next