Advertisement

ದಾಹ ತಣಿಸಿದ ಆದರ್ಶಮಯ ಗ್ರಾಮದ ಕಥೆ

04:35 PM Aug 27, 2017 | Team Udayavani |

ಚಿತ್ರ: ಮಾರ್ಚ್‌ 22 ನಿರ್ಮಾಣ: ಹರೀಶ್‌ ಶೇರಿಗಾರ್‌ ಮತ್ತು ಶರ್ಮಿಳಾ ಶೇರಿಗಾರ್‌  ನಿರ್ದೇಶನ: ಕೋಡ್ಲು ರಾಮಕೃಷ್ಣ,  ತಾರಾಗಣ: ಅನಂತ್‌ನಾಗ್‌, ಶರತ್‌ ಲೋಹಿತಾಶ್ವ, ಆಶೀಶ್‌ ವಿದ್ಯಾರ್ಥಿ, ವಿನಯಾ ಪ್ರಸಾದ್‌, ಜೈ ಜಗದೀಶ್‌, ರವಿಕಾಳೆ ಇತರರು.

Advertisement

ಐದು ವರ್ಷಗಳಿಂದ ಬರಗಾಲ! ಎಲ್ಲೆಲ್ಲೂ ಸುಡುಬಿಸಿಲು, ಒಣಗಿದ ನೆಲ, ನೀರಿಗೆ ಹಾಹಾಕಾರ …. ಸರಿ ಊರಲ್ಲೆಲ್ಲಾದರೂ ನೀರಿನ ಸೆಲೆ ಇರಬಹುದಾ ಎಂದು ಆ ಹಳ್ಳಿಯ ಗ್ರಾಮಸ್ಥರು ದೂರದ ಜೈಪುರದಲ್ಲಿರುವ ಭೂ ವಿಜಾnನಿಯೊಬ್ಬರನ್ನು ತಮ್ಮ ಹಳ್ಳಿಗೆ ಕರೆ ತರುತ್ತಾರೆ. ಆ ವಿಜಾnನಿ ಅನೇಕ ದಿನಗಳ ಕಾಲ ಹುಡುಕಿ, ಹುಡುಕಿ ಕೊನೆಗೂ ನೀರನ್ನು ಪತ್ತೆ ಮಾಡುತ್ತಾರೆ.

ಆ ನೀರಿನ ಸೆಲೆ ಇರುವುದೆಲ್ಲಿ ಗೊತ್ತಾ? ಒಂದು ಮಸೀದಿಯ ಕೆಳಗೆ. ಅದು ಬರೀ ಒಂದು ಗ್ರಾಮಕ್ಕೆ ಸಾಕಾಗುವ ನೀರಲ್ಲ. ಸುತ್ತಮುತ್ತಲ್ಲಿನ ಹಲವು ಗ್ರಾಮಗಳಿಗೂ ಸಾಕಾಗುವಂತಹ ನೀರು ಅಲ್ಲಿದೆ. ಆ ನೀರು ತೆಗೆಯುವುದಕ್ಕೆ ಮಸೀದಿ ಒಡೆಯಬೇಕು. ಮಸೀದಿ ಇದ್ದ ಹಾಗೆಯೇ ನೀರು ತೆಗೆಯುವ ಪ್ರಯತ್ನ ಮಾಡಿದರೆ, ಕಟ್ಟಡಕ್ಕೆ ಹಾನಿ ಆಗಬಹುದು. ಹಾಗಾಗಿ ಮಸೀದಿ ಒಡೆಯುವುದು ಅನಿವಾರ್ಯ. ಆದರೆ, ಮಸೀದಿ ಒಡೆಯುವುದಕ್ಕೆ ಧರ್ಮ ಬಿಡುತ್ತದಾ? ಜನ ಒಪ್ಪುತ್ತಾರಾ? ಮಸೀದಿ ಒಡೆಯದಿದ್ದರೆ, ನೀರಿಲ್ಲ. ಹಾಗಾದರೆ, ಈ ಸಮಸ್ಯೆಗೆ ಪರಿಹಾರವೇನು? ಹಲವು ವರ್ಷಗಳ ಹಿಂದೆ ಇಂಥದ್ದೊಂದು ಕಥೆ ಹೇಳಿದ್ದರು ನಿರ್ದೇಶಕ ಕೋಡ್ಲು ರಾಮಕೃಷ್ಣ. ಆದರೆ, ಕಾರಣಾಂತರಗಳಿಂದ ಈ ಚಿತ್ರ ಮಾಡುವುದಕ್ಕೆ ಅವರಿಗೆ ಆಗಿರಲಿಲ್ಲ. ಈಗ ಕೊನೆಗೂ ಅವರು ಅದೇ ಕಥೆಯನ್ನಿಟ್ಟುಕೊಂಡು ಚಿತ್ರ ಮಾಡಿದ್ದಾರೆ.

ಮೇಲೆ ಹೇಳಿರುವ ಸಮಸ್ಯೆಗೆ, ಅವರು ಕಂಡುಕೊಂಡಿರುವ ಪರಿಹಾರವೇನು ಎಂದು ಕೇಳಬೇಡಿ. ಆ ಉತ್ತರ ಬೇಕಿದ್ದರೆ, “ಮಾರ್ಚ್‌ 22′ ನೋಡಬೇಕು. ಈ ಸಮಸ್ಯೆಗೆ ಕೋಡ್ಲು ಸೂಚಿಸಿರುವ ಪರಿಹಾರವೇನು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಹಾಗೆ ನೋಡಿದರೆ, ಇಲ್ಲಿ ಮಸೀದಿ ಒಡೆಯುವುದು ಎನ್ನುವುದನ್ನು ಒಂದು ರೂಪಕವನ್ನಾಗಿ ಬಳಸಿಕೊಂಡಿದ್ದಾರೆ ಕೋಡ್ಲು.

ಮಸೀದಿ ಒಡೆಯದಿದ್ದರೆ ಹೇಗೆ ಮತ್ತು ಒಡೆದರೆ ಹೇಗಾಗುತ್ತದೆ ಎಂಬುದನ್ನು ಹೇಳುವ ಪ್ರಯತ್ನವನ್ನು ಅವರು ಮಾಡಿದ್ದಾರೆ. ಇಲ್ಲಿ ನೀರು ಮತ್ತು ಮಸೀದಿಗಿಂತ ಹೆಚ್ಚಾಗಿ, ಇತ್ತೀಚೆಗೆ ಹೆಚ್ಚುತ್ತಿರುವ ಹಿಂದು-ಮುಸ್ಲಿಂ ವೈಷಮ್ಯದ ಕುರಿತು ಚಿತ್ರ ಬೆಳಕು ಚೆಲ್ಲುತ್ತದೆ.

Advertisement

ಯಾರೋ ಕೆಲವರು ಮಾಡುವ ತಪ್ಪುಗಳಿಂದ, ಯಾರೋ ಕೆಲವರು ತೆಗೆದುಕೊಳ್ಳುವ ನಿರ್ಧಾರದಿಂದಾಗಿ ಎರಡೂ ಕೋಮಿನ ಜನ ಹೇಗೆ ಸಮಸ್ಯೆಗಳನ್ನು ಅನುಭವಿಸುತ್ತಾರೆ ಮತ್ತು ಕಷ್ಟಕ್ಕೆ ಸಿಲುಕುತ್ತಾರೆ ಎಂಬುದನ್ನು ಅವರು ಹೇಳುವ ಪ್ರಯತ್ನ ಮಾಡಿದ್ದಾರೆ. ಜಾತಿ-ಧರ್ಮಕ್ಕಿಂತ ಹೆಚ್ಚಾಗಿ ಜನರಿಗೆ ಬದುಕು ಮುಖ್ಯ ಎಂದು ಚಿತ್ರ ಪ್ರತಿಪಾದಿಸುತ್ತದೆ. ಇಂಥದ್ದೊಂದು ಕಥೆ, ಇವತ್ತಿನ ಕಾಲಕ್ಕೆ ಹೇಳಿ ಮಾಡಿಸಿದಂತಿದೆ. ಎರಡು ಕೋಮುಗಳ ನಡುವೆ ದಳ್ಳುರಿ ಹಚ್ಚುತ್ತಿರುವವರು ಈ ಚಿತ್ರವನ್ನು ತಪ್ಪದೇ ಚಿತ್ರ ನೋಡಬೇಕು ಎಂಬಂತೆ ಚಿತ್ರ ಮೂಡಿ ಬಂದಿದೆ.

ಕಮರ್ಷಿಯಲ್‌ ಮತ್ತು ಮನರಂಜನೆಯ ಚಿತ್ರಗಳೇ ಹೆಚ್ಚುತ್ತಿರುವ ದಿನಗಳಲ್ಲಿ ಇಂಥದ್ದೊಂದು ಪ್ರಯತ್ನ ಮತ್ತು ಪ್ರಯೋಗ ನಿಜಕ್ಕೂ ಗಮನಸೆಳೆಯುತ್ತದೆ. ಹಾಗೆ ನೋಡಿದರೆ, ಚಿತ್ರದ ಅಸಲಿ ಕಥೆ ಶುರುವಾಗುವುದು ಮಸೀದಿಯಲ್ಲಿ ನೀರಿದೆ ಎಂದು ಭೂ ವಿಜಾnನಿ ತಿಳಿಸಿದ ನಂತರ. ಅದಕ್ಕೂ ಮುನ್ನ ಹಳ್ಳಿ ಮತ್ತು ಪಾತ್ರಗಳ ಪರಿಚಯಕ್ಕೆ ಸಮಯ ಸೀಮಿತವಾಗುತ್ತದೆ.

ಈ ಮಧ್ಯೆ ಮೂರು ಹಾಡುಗಳು ಬಂದು ಹೋಗುತ್ತದೆ. ಇಂಟರ್‌ವೆಲ್‌ ನಂತರ ಚಿತ್ರವು ಗಂಭೀರವಾಗುತ್ತಾ ಹೋಗುತ್ತದೆ. ಅದರಲ್ಲೂ ಕೊನೆಯ ಅರ್ಧ ಗಂಟೆ ಚಿತ್ರದ ಹೈಲೈಟ್‌ ಎಂದರೆ ತಪ್ಪಿಲ್ಲ. ಚಿತ್ರಕ್ಕೆ ಇನ್ನೂ ಒಂದಷ್ಟು ಕತ್ತರಿ ಪ್ರಯೋಗ ಮಾಡಬಹುದಿತ್ತು. ಇನ್ನಷ್ಟು ಟ್ರಿಮ್‌ ಮಾಡುವ ಸಾಧ್ಯತೆ ಇತ್ತು. ಏಳು ಗಂಟೆ ಇದ್ದ ಚಿತ್ರವನ್ನು ಎರಡೂವರೆ ಗಂಟೆ ಇಳಿಸಿರುವುದು ಬಸವರಾಜ್‌ ಅರಸ್‌ ಅವರ ದೊಡ್ಡ ಸಾಧನೆಯೇ. ಆದರೂ ಅಷ್ಟು ಹೊತ್ತು ಕೂರುವುದಕ್ಕೆ ಪ್ರೇಕ್ಷಕ ಒಪ್ಪುತ್ತಾನೋ ಇಲ್ಲವೋ ಗೊತ್ತಿಲ್ಲ. ಅದಕ್ಕೆ ಕಾರಣ ಕ್ಲೀಷೆ ಎನ್ನುವ ಭಾಷೆ ಮತ್ತು ಅಭಿನಯ. ಚಿತ್ರದಲ್ಲಿ ಸಾಕಷ್ಟು ಪ್ರತಿಭಾವಂತ ಕಲಾವಿದರಿದ್ದಾರೆ. ಅವರಿಂದ ನೈಜವಾಗಿ ಅಭಿನಯ ತೆಗೆಸುವ ಸಾಧ್ಯತೆ ಇತ್ತು. ಆದರೆ, ಅಭಿನಯದಲ್ಲಿ ಕೃತಕತೆ ಎದ್ದು ಕಾಣುತ್ತದೆ. ಕೆಲವೊಮ್ಮೆ ಅತೀ ನಾಟಕೀಯತೆ ಎನಿಸುತ್ತದೆ.

ಕೆಲವೊಮ್ಮೆಯಂತೂ ಕಂಪನಿ ನಾಟಕ ನೋಡಿದಂತೆ ಅನುಭವವಾಗುತ್ತದೆ. ಇನ್ನು ಚಿತ್ರದಲ್ಲಿನ ಉತ್ತರ ಕರ್ನಾಟಕ ಭಾಷೆ ಖುಷಿ ಕೊಡುತ್ತಾದರೂ, ಮುಸಲ್ಮಾನರು ಮಾತುಗಳು ಬಹಳ ಕ್ಲೀಷೆ ಎನಿಸುತ್ತದೆ. ಈ ವಿಷಯದಲ್ಲಿ ಕೋಡ್ಲು ಅವರು ಇನ್ನಷ್ಟು ಅಪ್‌ಡೇಟ್‌ ಆಗುವ ಸಾಧ್ಯತೆ ಇತ್ತು. ಬರೀ ಮಾತು ಅಥವಾ ಅಭಿನಯವಷ್ಟೇ ಅಲ್ಲ, ಇಡೀ ಚಿತ್ರವನ್ನು ಇನ್ನಷ್ಟು ಸೂಕ್ಷ್ಮವಾಗಿ ಮತ್ತು ಗಂಭೀರವಾಗಿ ಕಟ್ಟಿಕೊಡುವ ಸಾಧ್ಯತೆ ಇತ್ತು. ಆದರೂ ಅವರ ಇತ್ತೀಚಿನ ಚಿತ್ರಗಳಿಗೆ ಹೋಲಿಸಿದರೆ, ಕೋಡ್ಲು ಒಂದು ವಿಭಿನ್ನವಾದ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಅನಂತ್‌ನಾಗ್‌ ಅವರಿಲ್ಲಿ ಭೂ ವಿಜಾnನಿಯಾಗಿ ಕಾಣಿಸಿಕೊಂಡಿದ್ದಾರೆ. ಪಾತ್ರ ಚಿಕ್ಕದಾದರೂ ಅನಂತ್‌ನಾಗ್‌ ಅವರು ತಮ್ಮ ಎಂದಿನ ಪ್ರೌಢಿಮೆ ಮೆರೆದಿದ್ದಾರೆ. ಶರತ್‌ ಲೋಹಿತಾಶ್ವ ಮತ್ತು ವಿನಯಾ ಪ್ರಸಾದ್‌ ಅಭಿನಯದಲ್ಲಿ ಸ್ವಲ್ಪ ನಾಟಕೀಯತೆ ಜಾಸ್ತಿ ಆಯಿತು ಎನಿಸಿದರೂ, ಇಡೀ ಚಿತ್ರದಲ್ಲಿ ತಮ್ಮ ಅಭಿನಯದಿಂದ ಗಮನಸೆಳೆಯುವುದು ಅವರಿಬ್ಬರೇ. ಹೊಸಬರ ಪೈಕಿ ಆರ್ಯವರ್ಧನ್‌ ಗಮನಸೆಳೆಯುತ್ತಾರೆ. ಮಿಕ್ಕಂತೆ ಜೈ ಜಗದೀಶ್‌, ಪದ್ಮಜಾ ರಾವ್‌ ಮುಂತಾದವರು ಅಚ್ಚುಕಟ್ಟಾಗಿ ನಟಿಸಿದ್ದಾರೆ.

ಆಶೀಶ್‌ ವಿದ್ಯಾರ್ಥಿ ಮತ್ತು ರವಿಕಾಳೆ ಇಬ್ಬರೂ ಅದೆಷ್ಟೇ ಪ್ರತಿಭಾವಂತರಾದರೂ ಸಹಿಸಿಕೊಳ್ಳುವುದು ಕಷ್ಟವೇ. ಹಳ್ಳಿ ಪರಿಸರವನ್ನು ಮೋಹನ್‌ ಚೆನ್ನಾಗಿಯೇ ಕಟ್ಟಿಕೊಟ್ಟಿದ್ದಾರೆ. ಇನ್ನು ಮಣಿಕಾಂತ್‌ ಕದ್ರಿ ಅವರ ಹಾಡುಗಳಿಗಿಂತ ಹಿನ್ನೆಲೆ ಸಂಗೀತ, ಚಿತ್ರಕ್ಕೆ ಹೇಳಿ ಮಾಡಿಸಿದಂತಿದೆ.

ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next