ಬೆಂಗಳೂರು : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಮಾ.1ರಿಂದ 17ರ ತನಕ ನಡೆಯುವ ಪರೀಕ್ಷೆಗೆ 6.90 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.
ರಾಜ್ಯದ 1004 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 3.52 ಲಕ್ಷ ವಿದ್ಯಾರ್ಥಿಗಳು ಹಾಗೂ 3.37 ವಿದ್ಯಾರ್ಥಿನಿಯರು ಹಾಜರಾಗಲಿದ್ದಾರೆ. ಪರೀಕ್ಷಾ ಭದ್ರತೆಗಾಗಿ ಎಲ್ಲಾ ಪರೀಕ್ಷಾ ಕೇಂದ್ರಕ್ಕೆ ಒಬ್ಬರಂತೆ 32 ಜಂಟಿ ಮುಖ್ಯ ನಿರೀಕ್ಷಕ ಹಾಗೂ 858 ಜಾಗೃತ ದಳ ನೇಮಕ ಮಾಡಲಾಗಿದೆ ಎಂದು ಪಿಯು ಇಲಾಖೆ ನಿರ್ದೇಶಕಿ ಸಿ.ಶಿಖಾ ಮಾಹಿತಿ ನೀಡಿದರು.
ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಮೇಲ್ವಿಚಾರಕರನ್ನು ರ್‍ಯಾಂಡಮ್ ಆಯ್ಕೆ ಮಾಡುವುದರಿಂದ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳನ್ನು ಗುರುತಿಸಿಲ್ಲ. ಯಾವುದೇ ರೀತಿಯ ಗೊಂದಲ ಇಲ್ಲದೇ ಪರೀಕ್ಷೆ ನಡೆಸುವ ಉದ್ದೇಶದಿಂದ ಎಲ್ಲಾ ಪರೀಕ್ಷಾ ಕೇಂದ್ರಕ್ಕೂ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಕರ್ನಾಟಕ ಸೆಕ್ಯೂರ್ ಎಕ್ಸಾಮಿನೇಷನ್ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಪರೀಕ್ಷಾ ಕಾರ್ಯದಲ್ಲಿ ಪಾಲ್ಗೊಳ್ಳುವ ಎಲ್ಲ ಸಿಬ್ಬಂದಿಗಳ ಬಯೋಮೆಟ್ರಿಕ್, ಪ್ರಶ್ನೆಪತ್ರಿಕೆ ಬಾರ್‌ಕೋಡ್ ಜತೆಗೆ ಪ್ರಶ್ನೆ ಪತ್ರಿಕೆ ಕೊಂಡೊಯ್ಯುವ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ ಎಂದು ಹೇಳಿದರು.
15 ಜಿಲ್ಲೆಗಳಲ್ಲಿ ಜಿಪಿಎಸ್ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಎರಡು ದಿನಗಳಲ್ಲಿ ಎಲ್ಲಾ ಜಿಲ್ಲೆಯಲ್ಲೂ ಜಿಪಿಎಸ್ ಅಳವಡಿಸಲಿದ್ದೇವೆ. ಪ್ರಶ್ನೆಪತ್ರಿಕೆ ಕೊಂಡೊಯ್ಯುವ ವಾಹನಗಳಿಗೆ ಅಳವಡಿಸಿರುವ ಜಿಪಿಎಸ್ ಟ್ಯಾಕ್ಸ್ ಮಾಡಲಾಗುತ್ತದೆ. ವಾಹನವು ಒಂದೇ ಪ್ರದೇಶದಲ್ಲಿ ತುಂಬಾ ಸಮಯ ನಿಂತಿದ್ದರೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಪರಿಶೀಲನೆ ಮಾಡಲಾಗುತ್ತದೆ.ಪರೀಕ್ಷಾ ಕಾರ್ಯಕ್ಕೆ ಹಾಜರಾಗುವ ಸಿಬ್ಬಂದಿಗಳ ಮೊಬೈಲ್ ಬಳಕೆ ನಿಷೇಧಿಸಲಾಗಿದೆ ಎಂದು ವಿವರಿಸಿದರು.
ಅಂಕಿಅಂಶ
ವಿದ್ಯಾರ್ಥಿಗಳು- 6,90,150
ಬಾಲಕರು-3,52,290
ಬಾಲಕಿಯರು-3,37.860
ಪರೀಕ್ಷಾ ಕೇಂದ್ರ-1004