ಕುಂದಾಪುರ: ಹೆದ್ದಾರಿಪ್ರಾಧಿಕಾರದ ವತಿಯಿಂದ ಮರವಂತೆ ಬೀಚ್‌ನಲ್ಲಿ 200 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಮಹತ್ವದ ಯೋಜನೆ ಸಂಬಂಧಪ್ರಾಧಿಕಾರದ ಬೆಂಗಳೂರು ಪ್ರಾದೇಶಿಕ ಕಚೇರಿಯ ಮುಖ್ಯ ಎಂಜಿನಿಯರ್ ಜೆ.ಎಚ್. ಎಲ್ಗರ್ ಹಾಗೂ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು.
ಈ ವೇಳೆ ಎಲ್ಗರ್ ಮಾತನಾಡಿ, ರಾ.ಹೆ. 66ಕ್ಕೆ ಹೊಂದಿಕೊಂಡಂತೆ ಮರವಂತೆಯಂತಹ ಕರಾವಳಿಯ ಸಾಕಷ್ಟು ಪ್ರವಾಸಿ ತಾಣಗಳಿದ್ದು, ಇವೆಲ್ಲವೂ ಸುಂದರವಾಗಿ ರೂಪುಗೊಂಡರೆ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಿದಂತಾಗುತ್ತದೆ ಎಂದರು.
ಮರವಂತೆಯ 2.5 ಉದ್ದದ ಕಡಲ ತೀರವನ್ನು ವಿಶ್ವವಿಖ್ಯಾತಗೊಳಿಸುವ ನಿಟ್ಟಿನಲ್ಲಿ ಸಂಸದ ಬಿ.ವೈ. ರಾಘವೇಂದ್ರ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಅದಕ್ಕೆ ಮಂಗಳೂರಿನಲ್ಲಿ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅನುಮೋದನೆ ನೀಡಿದ್ದರು.
ಶಿರೂರು ಟೋಲ್‌ಗೇಟ್‌ಗೂ ಭೇಟಿ ನೀಡಿದ ಅವರು, ಅಲ್ಲಿನ ಐಆರ್‌ಬಿ ಸಂಸ್ಥೆಯ ಅಧಿಕಾರಿಗಳು, ಸಿಬಂದಿಯನ್ನು ದ್ದೇಶಿಸಿ, ಹೆದ್ದಾರಿಯಲ್ಲಿ ಯಾವುದೇ ಕುಂದು ಕೊರತೆ ಬಾರದಂತೆ ಕಾರ್ಯನಿರ್ವಹಿಸಬೇಕು. ಅಪಘಾತ ಸಂಭವಿಸುವ ಸ್ಥಳಗಳ ಬಗ್ಗೆ ತುರ್ತಾಗಿ ಸ್ಪಂದಿಸಿ, ಸರಿಪಡಿಸಬೇಕು ಎಂದು ಸೂಚನೆ ನೀಡಿದರು.
ರಾ.ಹೆ. ಪ್ರಾಧಿಕಾರ ಮಂಗಳೂರಿನ ಯೋಜನ ನಿರ್ದೇಶಕ ಲಿಂಗೇಗೌಡ, ಐಆರ್‌ಬಿ ಸಂಸ್ಥೆಯ ಸಿಬಂದಿ, ವೆಂಕಟೇಶ್ ಕಿಣಿ ಉಪಸ್ಥಿತರಿದ್ದರು.
ಉದಯವಾಣಿ ವರದಿ
ಪ್ರವಾಸಿ ತಾಣ ಮರವಂತೆಯನ್ನು ಇನ್ನಷ್ಟು ಸುಂದರವಾಗಿಸುವ ನಿಟ್ಟಿನಲ್ಲಿ “ಮಾಸ್ಟರ್ ಪ್ಲಾನ್’ ತಯಾರಾಗಿದ್ದು, ಈ ಬಗ್ಗೆ “ಉದಯವಾಣಿ’ ಮಾ. 10ರಂದು ವಿಶೇಷ ವರದಿ ಪ್ರಕಟಿಸಿತ್ತು.