Advertisement

Maravanthe: ಮೀನುಗಾರರಿಂದಲೇ ರಸ್ತೆ ಮರು ನಿರ್ಮಾಣ ಕಾರ್ಯ

03:55 PM Jun 29, 2023 | Team Udayavani |

ಕುಂದಾಪುರ: ಬಿಪರ್‌ ಜಾಯ್‌ ಚಂಡಮಾರುತ ಹಾಗೂ ಕಡಲ್ಕೊರೆತದಿಂದ ಹಾನಿಗೊಳಗಾಗಿ ಕುಸಿಯುವ ಹಂತದಲ್ಲಿದ್ದ ಮರವಂತೆ ಕರಾವಳಿ ಭಾಗವನ್ನು ಸಂಪರ್ಕಿಸುವ ರಸ್ತೆಯನ್ನು ಈಗ ಮೀನುಗಾರರೇ ಮರು ನಿರ್ಮಾಣ ಮಾಡಿದ್ದಾರೆ.

Advertisement

ಈ ರಸ್ತೆ ಕುಸಿದ ಬಳಿಕ ಇಲ್ಲಿಗೆ ಸಂಸದರು, ಶಾಸಕರು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೆಲ್ಲ ಭೇಟಿ ನೀಡಿ, ಪರಿಶೀಲನೆ ನಡೆಸಿ ಹೋಗಿದ್ದರು. ಆದರೆ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆ, ಜನಪ್ರತಿನಿಧಿಗಳಿಂದ ಸಕಾಲದಲ್ಲಿ ಸ್ಪಂದನೆ ದೊರೆಯದ ಕಾರಣ ಅನ್ಯ ದಾರಿ ಕಾಣದೇ ಮೀನುಗಾರರೇ ಸ್ವತಃ ಹಣ ಹಾಕಿ ಈ ರಸ್ತೆಗೆ ಕಲ್ಲು ಹಾಕಿ, ಸರಿಪಡಿಸುವ ಕಾರ್ಯವನ್ನು ಕೈಗೊಂಡಿದ್ದಾರೆ.

ಮರವಂತೆಯ ಶ್ರೀ ರಾಮ ಮಂದಿರ ಮೀನು ಗಾರರ ಸೇವಾ ಸಮಿತಿಯು 1 ಲಕ್ಷ ರೂ.ಗೂ ಮಿಕ್ಕಿ ಹಣವನ್ನು ವ್ಯಯಿಸಿ, 150 ಮೀ.ನಿಂದ 200 ಮೀ. ರಸ್ತೆಗೆ ಕಲ್ಲು ಹಾಕಿ, ಮಣ್ಣು, ಹೊಯಿಗೆ ಬಳಸಿ, ದುರಸ್ತಿ ಮಾಡಲಾಗಿದೆ. ಇದರಿಂದ ಸದ್ಯಕ್ಕಂತೂ ಕುಸಿಯುವ ಭೀತಿ ದೂರವಾಗಿದೆ.

ಆಕ್ರೋಶ
ರಸ್ತೆ ಕುಸಿದಾಗ ಇಲ್ಲಿಗೆ ಶಾಸಕ, ಸಂಸದರ ಸಹಿತ ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡಿದರೂ, ತುರ್ತಾಗಿ ಸ್ಪಂದಿಸಿ, ಈ ರಸ್ತೆ ಇನ್ನಷ್ಟು ಕುಸಿಯದಂತೆ ದುರಸ್ತಿ ಮಾಡುವ ಗೋಜಿಗೆ ಯಾರೂ ಮುಂದಾಗದ ಬಗ್ಗೆ ಇಲ್ಲಿನ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಜಿಲ್ಲಾ ಉಸ್ತುವಾರಿ ಸಚಿವರು, ಮೀನುಗಾರಿಕಾ ಮತ್ತು ಬಂದರು ಖಾತೆ ಸಚಿವರು ಜಿಲ್ಲೆಗೆ ಬಂದರು ಇಲ್ಲಿಗೆ ಭೇಟಿ ನೀಡದಿರುವ ಬಗ್ಗೆಯೂ ಆಕ್ರೋಶ ವ್ಯಕ್ತವಾಗಿದೆ.

ಉದಯವಾಣಿ ವರದಿ
ಮರವಂತೆಯ ರಸ್ತೆಯ ಕುಸಿಯುವ ಭೀತಿ ಬಗ್ಗೆ, ಇಲ್ಲಿನ ಮರವಂತೆ ಕರಾವಳಿ ಭಾಗದ ರಕ್ಷಣೆಗಾಗಿ ಸುಮಾರು 1 ಕಿ.ಮೀ. ದೂರದವರೆಗೆ “ಟಿ’ ಆಕಾರದ ತಡೆಗೋಡೆ ನಿರ್ಮಿಸಬೇಕಾಗಿ “ಉದಯವಾಣಿ’ಯು ನಿರಂತರವಾಗಿ ವಿಶೇಷ ವರದಿಯನ್ನು ಪ್ರಕಟಿಸಿದೆ.

Advertisement

ಶಾಶ್ವತ ಪರಿಹಾರ ಬೇಕು
ಅಧಿಕಾರಿಗಳು, ಜನಪ್ರತಿಧಿಗಳು ಬಂದು ನೋಡಿಕೊಂಡು ಹೋಗಿದ್ದಾರೆ ಅಷ್ಟೇ. ಅದರಿಂದ ನಮಗೇನು ಪ್ರಯೋಜನವಾಗಿಲ್ಲ. ಹೀಗೆ ಕುಳಿತರೆ ನಮಗೆ ಹೋಗಲು, ಶಾಲಾ ಮಕ್ಕಳಿಗೆ ಹೋಗಲು ರಸ್ತೆಯಿಲ್ಲದಂತಾಗುತ್ತದೆ. ಅದಕ್ಕಾಗಿ ನಾವೇ ಹಣ ಹಾಕಿ, ದುರಸ್ತಿ ಕಾರ್ಯವನ್ನು ಮಾಡಿದ್ದೇವೆ. ಇದು ತಾತ್ಕಾಲಿಕ ಪರಿಹಾರವಾಗಿದ್ದು, ಸರಕಾರ ಇಲ್ಲಿಗೆ ಶಾಶ್ವತ ಪರಿಹಾರವನ್ನು ಕೈಗೊಳ್ಳಬೇಕಾಗಿದೆ.
– ವಾಸುದೇವ ಖಾರ್ವಿ, ಅಧ್ಯಕ್ಷರು, ಶ್ರೀ ರಾಮ ಮಂದಿರ ಮೀನುಗಾರರ ಸೇವಾ ಸಮಿತಿ ಮರವಂತೆ

Advertisement

Udayavani is now on Telegram. Click here to join our channel and stay updated with the latest news.

Next