ಕುಂದಾಪುರ: ಮರವಂತೆಯ ಬೀಚ್ ಭಾಗದಲ್ಲಿ ಕಡಲ್ಕೊರೆತ ತಡೆಗಾಗಿ ನಿರ್ಮಿಸಿದ ಮಾದರಿಯಲ್ಲೇ ಮರವಂತೆಯ ಕರಾವಳಿ ಪ್ರದೇಶದಲ್ಲಿಯೂ “ಟಿ’ ಆಕಾರದ ಬ್ರೇಕ್‌ವಾಟರ್ ನಿರ್ಮಿಸಬೇಕು ಎನ್ನುವ ಬೇಡಿಕೆ ಸ್ಥಳೀಯರದು. ಇಲ್ಲಿನ ಕರಾವಳಿ ಭಾಗದಲ್ಲಿ ಪ್ರತಿ ವರ್ಷ ರಸ್ತೆ ಸಹಿತ ಮನೆಗಳಿರುವ ಪ್ರದೇಶಗಳು ಕಡಲ್ಕೊರೆತಕ್ಕೆ ತುತ್ತಾಗುತ್ತಿದೆ.
ಮರವಂತೆಯ ಕರಾವಳಿ ಪ್ರದೇಶ ಅಂದರೆ ಇಲ್ಲಿನ ಮೀನುಗಾರಿಕಾ ಹೊರಬಂದರು ಇರುವ ಉತ್ತರ ದಿಕ್ಕಿನಲ್ಲಿ ಸುಮಾರು 400 ಮೀ. ನಷ್ಟು ಭಾಗ ಬಾಕಿ ಉಳಿದಿದ್ದು, ಇಲ್ಲಿ ಪ್ರತಿ ವರ್ಷ ಕಡಲ್ಕೊರೆತ ಭೀತಿ ಇದ್ದು, ಇಲ್ಲಿ ಈ ಬಾರಿ ನಿರ್ಮಿಸಿದ ಕಾಂಕ್ರೀಟ್ ರಸ್ತೆಯು ಅಲೆಗಳ ಹೊಡೆತಕ್ಕೆ ತುತ್ತಾಗುವ ಭೀತಿಯಿದೆ.
ಮರವಂತೆಯ ಬೀಚ್ ಭಾಗದಲ್ಲಿ “ಟಿ’ ಆಕಾರದ ಬ್ರೇಕ್ ವಾಟರ್‌ಗಳನ್ನು ನಿರ್ಮಿಸಲಾಗಿದೆ. ಇದರಿಂದ ಇಲ್ಲಿ ಉಂಟಾಗುತ್ತಿದ್ದ ಕಡಲ್ಕೊರೆತ ಕಡಿಮೆಯಾಗಿದೆ. ಪ್ರವಾಸಿಗರಿಗೆ ವೀಕ್ಷಣೆಗೆ ಅನುಕೂಲವಾಗುತ್ತಿದೆ. ಮೀನುಗಾರಿಕಾ ಬಂದರು ಪ್ರದೇಶದಲ್ಲಿ ಕೇರಳ ಮಾದರಿಯಲ್ಲಿ ಹೊರ ಬಂದರು ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಮೊದಲ ಹಂತದ ಉತ್ತರ ಭಾಗದಲ್ಲಿ 260 ಮೀ. ಹಾಗೂ ದಕ್ಷಿಣ ಭಾಗದಲ್ಲಿ ಕಾಮಗಾರಿ 525 ಮೀ. ಒಟ್ಟು 785 ಮೀ. ಬ್ರೇಕ್‌ವಾಟರ್ (ಟೆಟ್ರಾಫೈಡ್) ನಿರ್ಮಾಣಗೊಂಡಿತ್ತು. ಈಗ ಅದರ ಮುಂದುವರಿದ ಭಾಗವಾಗಿ ಎರಡನೇ ಹಂತದ ಕಾಮಗಾರಿಯಲ್ಲಿ ಉತ್ತರ ಭಾಗದಲ್ಲಿ 560 ಮೀ. ಹಾಗೂ ದಕ್ಷಿಣ ಭಾಗದಲ್ಲಿ 65 ಮೀ. ಸೇರಿ ಒಟ್ಟು 625 ಮೀ. ತಡೆಗೋಡೆ ನಿರ್ಮಾಣಗೊಳ್ಳಲಿದೆ.
ಬ್ರೇಕ್ ವಾಟರ್ ಯಾಕೆ? :
ಮರವಂತೆಯ ಹೊರಬಂದರಿನಿಂದ ಆರಂಭಗೊಂಡು ಕರಾವಳಿಯವರೆಗೆ ಬ್ರೇಕ್ ವಾಟರ್ ನಿರ್ಮಾಣಗೊಂಡಿದ್ದು, ಇದರಿಂದ ಇಲ್ಲಿನ ಕಡಲ ತೀರದ ನಿವಾಸಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಆದರೆ ಅಲ್ಲಿಂದ ಮುಂದಕ್ಕೆ ಸುಮಾರು 400 ಮೀ. ನಷ್ಟು ದೂರದಲ್ಲಿ ಬ್ರೇಕ್ ವಾಟರ್ ಇಲ್ಲದಿರುವುದರಿಂದ ಪ್ರತಿ ವರ್ಷ ಕಡಲ್ಕೊರೆತ ಉಂಟಾಗುತ್ತಿದೆ. ಇದು ಇಲ್ಲಿನ ರಸ್ತೆಗೂ ಅಪಾಯಕಾರಿಯಾಗಿದೆ. ಇಲ್ಲಿನ ಕಡಲ ತೀರದ ಸಮೀಪ ಸುಮಾರು 25-30 ಕ್ಕೂ ಅಧಿಕ ಮನೆಗಳಿವೆ. ಮಳೆಗಾಲದಲ್ಲಿ ಕಡಲ ಅಲೆಗಳು ಈ ರಸ್ತೆಯನ್ನು ದಾಟಿ, ಮನೆಗಳಿರುವ ಪ್ರದೇಶಗಳವರೆಗೂ ಅಪ್ಪಳಿಸುತ್ತದೆ. “ಟಿ’ ಆಕಾರದ ಬ್ರೇಕ್ ವಾಟರ್ ನಿರ್ಮಿಸಿದಲ್ಲಿ ರಸ್ತೆಯ ಜತೆಗೆ ಇಲ್ಲಿ ನೆಲೆಸಿರುವ ನಿವಾಸಿಗರು ನಿರಾತಂಕವಾಗಿರಬಹುದು.
ಸಚಿವರು, ಶಾಸಕರಿಗೆ ಮನವಿ :
ಮರವಂತೆಯ ಕರಾವಳಿ ಭಾಗದಲ್ಲಿ ಬ್ರೇಕ್ ವಾಟರ್ ವಿಸ್ತರಣೆ ಕುರಿತಂತೆ ಇಲ್ಲಿಗೆ ಕಳೆದ ಮಳೆಗಾಲದಲ್ಲಿ ಭೇಟಿ ನೀಡಿದ್ದ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟರಿಗೆ ಸ್ಥಳೀಯರು ಮನವಿ ಸಲ್ಲಿಸಿದ್ದರು. ಆಗ ಮಾಡಿಕೊಡುವ ಭರವಸೆಯನ್ನು ನೀಡಿದ್ದರು.
ಪ್ರತಿ ಮಳೆಗಾಲದಲ್ಲಿಯೂ ಇಲ್ಲಿ ಕಡಲ್ಕೊರೆತ ಉಂಟಾಗುತ್ತದೆ. ತೀರದ ನಿವಾಸಿಗಳು ಆತಂಕದಲ್ಲಿಯೇ ದಿನ ಕಳೆಯುವಂತಾಗಿದೆ. ಹೊಸದಾಗಿ ನಿರ್ಮಿಸಿದ ಕಾಂಕ್ರೀಟ್ ರಸ್ತೆಗೂ ಅಪಾಯವಿದೆ. “ಟಿ’ ಆಕಾರದ ಬ್ರೇಕ್‌ವಾಟರ್ ನಿರ್ಮಿಸಿದಲ್ಲಿ ಕಡಲ್ಕೊರೆತ ತಡೆಯೊಂದಿಗೆ ಇಲ್ಲಿಗೆ ಬರುವ ಪ್ರವಾಸಿಗರಿಗೂ ಪ್ರಯೋಜನವಾಗಬಹುದು.
– ಸಂಜೀವ ಖಾರ್ವಿ ಮರವಂತೆ, ಸ್ಥಳೀಯರು
ಪ್ರಶಾಂತ್ ಪಾದೆ