Advertisement
ಮಾಹೆ ವಿ.ವಿ.ಯ ಬಳಿಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬ. ನಿಂಬರಗಿ, ಮಾಹೆ ವಿ.ವಿ.ಯ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಹಾಗೂ ಇತರ ಗಣ್ಯರು ಹಸಿರು ನಿಶಾನೆ ತೋರಿಸಿ ಓಟಕ್ಕೆ ಚಾಲನೆ ನೀಡಿದರು. ಜಾಗೃತಿ ಓಟವು ಎಂಕಾಪ್ಸ್ , ಉಪೇಂದ್ರ ಪೈ ಸರ್ಕಲ್, ಸಿಂಡಿಕೇಟ್ ಸರ್ಕಲ್, ವೇಣುಗೋಪಾಲ ದೇವಸ್ಥಾನ, ಎಂಐಟಿ ಈಜು ಕೊಳ, ಎಂಐಟಿ, ಕಾಮತ್ ಕೆಫೆ, ಟೈಗರ್ ಸರ್ಕಲ್ ಮೂಲಕ ಮಣಿಪಾಲ್ ಇಡಿಯು ಕಟ್ಟಡದ ಬಳಿ ಸಮಾಪನಗೊಂಡಿತು.
ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ| ಎಚ್.ಎಸ್. ಬಲ್ಲಾಳ್ , ಯುವಜನತೆ ದೇಶದ ಭವಿಷ್ಯ. ಅವರು ಮಾದಕ ವ್ಯಸನದಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಅರಿತುಕೊಳ್ಳ ಬೇಕು ಎನ್ನುವ ಉದ್ದೇಶದಿಂದ ಜಾಗೃತಿ ಓಟವನ್ನು ಆಯೋಜಿಸಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಿರುವುದು ಅಭಿಮಾನದ ಸಂಗತಿ. ವ್ಯಸನಮುಕ್ತ ಸಮಾಜ ನಿರ್ಮಾಣದತ್ತ ಮಣಿಪಾಲ ಸಂಸ್ಥೆಗಳು ಸದಾ ತಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತಿದ್ದು, ಮುಂದೆಯೂ ಇಂತಹ ಜಾಗೃತಿ ಕಾರ್ಯಕ್ರಮಗಳಿಗೆ ಸಹಕಾರ ನೀಡಲಿದೆ ಎಂದರು. ಜಿಲ್ಲಾ ಎಸ್‌ಪಿ ಲಕ್ಷ್ಮಣ ಬ. ನಿಂಬರಗಿ ಮಾತನಾಡಿ, ದೇಶದ ಸಾಮಾಜಿಕ, ಆರ್ಥಿಕ, ರಾಜಕೀಯ ಭವಿಷ್ಯ ಯುವಜನರ ಮೇಲೆ ನಿಂತಿದೆ. ಯುವ ಜನರಿಗೆ ಸೂಕ್ತ ಮಾರ್ಗದರ್ಶನ ನೀಡಿದಲ್ಲಿ ಸರಿಯಾದ ಸಮಯದಲ್ಲಿ ಸರಿಯಾದ ದಾರಿಯಲ್ಲಿ ಸಾಗಲು ಅವಕಾಶ ಮಾಡಿಕೊಡುತ್ತದೆ ಎಂದರು.
Related Articles
ಕರ್ತವ್ಯ, ಬಂದೋಬಸ್ತ್ ಎಂದು ಬಿಝಿಯಾ ಗಿರುತ್ತಿದ್ದ ಪೊಲೀಸ್ ಅಧಿಕಾರಿಗಳು ಮ್ಯಾರಥಾನ್‌ನಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಎಸ್.ಪಿ. ಲಕ್ಷ್ಮಣ ಬ. ನಿಂಬರಗಿ, ಹೆಚ್ಚುವರಿ ಎಸ್‌ಪಿ ಕುಮಾರಚಂದ್ರ, ಡಿವೈಎಸ್ಪಿಗಳಾದ ಕುಮಾರಸ್ವಾಮಿ, ಬೆಳ್ಳಿಯಪ್ಪ, ದಿನೇಶ್ ಕುಮಾರ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ಖಾಕಿ ಕಳಚಿ ಪಾಲ್ಗೊಂಡರು.
Advertisement
ಸಿಂಡಿಕೇಟ್ ಬ್ಯಾಂಕ್ ಜನರಲ್ ಮ್ಯಾನೇಜರ್ ಎಚ್. ಭಾಸ್ಕರ ಹಂದೆ, ಸಹಾಯಕ ವಲಯ ಪ್ರಬಂಧಕ ಬಿ.ಆರ್. ಹಿರೇಮಠ,ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು, ಪ್ರಸ್ ಕ್ಲಬ್ ಸಂಚಾಲಕ ನಾಗರಾಜ ರಾವ್, ಕೆಎಂಸಿ ಪ್ರಾಧ್ಯಾಪಕ ಡಾ| ವಿನೋದ್ ನಾಯಕ್ ಹಾಗೂ ಇತರರು ಉಪಸ್ಥಿತರಿದ್ದರು.
ವ್ಯಸನ ಮುಕ್ತ ಮಾಸಾಚರಣೆ ಪ್ರಯುಕ್ತ 2 ತಿಂಗಳಿನಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪೊಲೀಸರು ಶಿಕ್ಷೆ ನೀಡುವ ಮೂಲಕ ಮಾದಕದ್ರವ್ಯ ವ್ಯಸನವನ್ನು ತಡೆಗಟ್ಟಬಹುದೆನ್ನುವ ತಪ್ಪು ಕಲ್ಪನೆ ಜನರಲ್ಲಿ ಇದೆ. ಇದನ್ನು ಕೇವಲ ಪೊಲೀಸ್ ಅಥವಾ ಕಾನೂನಿನಿಂದ ನಿಯಂತ್ರಿಸಲು ಅಸಾಧ್ಯ; ಜಾಗೃತಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಬೇಕಾಗಿದೆ. ಮಾದಕ ವಸ್ತು ಪೂರೈಕೆಗಿಂತಲೂ, ಬಳಕೆಯನ್ನು ತಡೆಗಟ್ಟಲು ಜನಜಾಗೃತಿ ಅತ್ಯಂತ ಆವಶ್ಯಕ. ಮಾದಕ ವ್ಯಸನ ಪಿಡುಗುಮುಕ್ತ ಸಮಾಜ ನಿರ್ಮಾಣದ ಗುರಿ ಇದೆ ಎಂದರು.