Advertisement

ಮರಾಠ ಸಮಾಜಕ್ಕೆ ಮೀಸಲಾತಿ ಅನಿವಾರ್ಯ

04:11 PM Mar 15, 2017 | Team Udayavani |

ಕಾರ್ಕಳ: ಮರಾಠ ಸಮಾಜಕ್ಕೆ ಮೀಸಲಾತಿ ಅನಿವಾರ್ಯ. ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಸಮಾಜದಲ್ಲಿ ಪ್ರತಿಭಾವಂತರಿಗೆ ಅವಕಾಶ ಕಲ್ಪಿಸುವಲ್ಲಿ ಇದು ಸಹಕಾರಿ. ಪ್ರಸ್ತುತ ನಮ್ಮನ್ನು 2ಎ ಪ್ರವರ್ಗಕ್ಕೆ ಸೇರಿಕೊಳ್ಳುವಲ್ಲಿ ರಾಜ್ಯವ್ಯಾಪಿ ನಡೆಯುತ್ತಿರುವ ಆಂದೋಲನಕ್ಕೆ ಸಂಘಟಿತ ಬೆಂಬಲ ಬೇಕಾಗಿದೆ ಎಂದು ಕರ್ನಾಟಕ ಕ್ಷತ್ರಿಯ ಮರಾಠ ಮಹಾ ಒಕ್ಕೂಟ ಬೆಂಗಳೂರಿನ ಅಧ್ಯಕ್ಷ ಶ್ಯಾಮ್‌ಸುಂದರ್‌ ಗಾಯಕ್‌ವಾಡ್‌ ಹೇಳಿದ್ದಾರೆ.

Advertisement

ಅವರು ಕಾರ್ಕಳ ಹಿರಿಯಂಗಡಿ ದುರ್ಗಾಪರಮೇಶ್ವರೀ ದೇಗುಲದ ಸಭಾಭವನದಲ್ಲಿ  ಮಾ. 12ರಂದು  ನಡೆದ ಕ್ಷತ್ರಿಯ ಮರಾಠ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣ, ಅಭಿನಂದನೆ ಹಾಗೂ ಸವಲತ್ತು ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮೀಸಲಾತಿ ಬಗ್ಗೆ ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಬೇಡಿಕೆಗೆ ನ್ಯಾಯ ಒದಗಿಸುವ ಭರವಸೆ ದೊರೆತಿದೆ ಎಂದರು.ಪ್ರಧಾನ ಭಾಷಣ ನೆರವೇರಿಸಿದ ಹಳೆಯಂಗಡಿ ಸ.ಪ.ಪೂ. ಕಾಲೇಜಿನ ಸಹ ಪ್ರಾಧ್ಯಾಪಕ ಡಾ| ಶಶಿಕಲಾ ಸಾಯಿರಾಂ ಪವರ್‌ ಮಾತನಾಡಿ, ಸ್ವಸಮಾಜದ ಅಗತ್ಯವನ್ನು ಮನಗಂಡು ಸವಲತ್ತುಗಳನ್ನು ಪೂರೈಕೆ ಮಾಡಿರುವ ಕೆಲಸ ಅತ್ಯಂತ ಶ್ಲಾಘನೀಯ. ಆರ್ಥಿಕ ವಾಗಿ ಹಿಂದುಳಿದ ಜನತೆಯನ್ನು ಗುರುತಿಸಿ ಸಹಕರಿಸುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಸರಿ ಸಮಾನವಾಗಿ ತೊಡಗಿಸಿಕೊಳ್ಳುವಂತೆ ಮಾಡುವುದರಿಂದ ಸಂಘಟನೆಗೆ ನಿಜ ವಾದ ಅರ್ಥ ಬರುತ್ತದೆ ಎಂದರು.

ಹಿರಿಯಂಗಡಿ ಶ್ರೀ ದುರ್ಗಾ ಪರಮೇಶ್ವರೀ ದೇಗುಲದ ಆಡಳಿತ ಮೊಕ್ತೇಸರ ಉಮೇಶ್‌ ರಾವ್‌ ಅಧ್ಯಕ್ಷತೆ ವಹಿಸಿದ್ದರು. ಮೊಕ್ತೇಸರ ವಾಮನ್‌ ರಾವ್‌, ಉಮಾನಾಥ ಜಿ., ಗಿರೀಶ್‌ ರಾವ್‌, ನಿವೃತ್ತ ಉಪ ತಹಶೀಲ್ದಾರ್‌ ಶರಶ್ಚಂದ್ರ ರಾವ್‌, ಕ್ಷತ್ರಿಯ ಮರಾಠ ಸಮಾಜದ ಗೌರವಾಧ್ಯಕ್ಷ ಶೇಖರ್‌ ರಾವ್‌, ಗೌರವ ಸಲಹೆಗಾರ ಗೋಪಿನಾಥ ಚೌಹಾನ್‌ ಉಪಸ್ಥಿತರಿದ್ದರು.ಇದೇ ಸಂದರ್ಭ ಸ್ವಸಮಾಜದ ಆಯ್ದ ಮೂರು ಕುಟುಂಬಗಳಿಗೆ ಅಡುಗೆ ಅನಿಲ ಮತ್ತು ಮೂವರಿಗೆ ತಲಾ ಐದು ಸಾವಿರ ವಿದ್ಯಾರ್ಥಿವೇತನ ವಿತರಿಸಲಾಯಿತು.

ಸಂಘದ ನೂತನ ಅಧ್ಯಕ್ಷ ಶುಭದ ರಾವ್‌ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು. ಹರೇಂದ್ರ ರಾವ್‌ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಪ್ರಸನ್ನ ರಾವ್‌ ವಂದಿಸಿದರು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next