Advertisement

ವಿಜೃಂಭಣೆಯ ಹೊಸಲು ಮಾರಮ್ಮದೇವಿ ಜಾತ್ರೋತ್ಸವ

02:15 PM Mar 07, 2018 | |

ಹುಣಸೂರು: ಹುಣಸೂರು-ಮೈಸೂರು ಹೆದ್ದಾರಿಯ ಬಿಳಿಕೆರೆ ಜಂಕ್ಷನ್‌ ಬಳಿಯ ಹೊಸಲು ಮಾರಮ್ಮದೇವಿ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಜರುಗಿತು. ದೇವಾಲಯದಲ್ಲಿ ಬೆಳಗಿನ ಜಾವದಿಂದಲೇ ದೇವಿಗೆ ನಾನಾ ವಿಧವಾದ ಪೂಜಾ ಕೈಂಕರ್ಯ ನಡೆದವು. ಆನಂತರ ಸಂಪ್ರದಾಯದಂತೆ 2 ಕಿ.ಮೀ ದೂರದ ಮಲ್ಲಿನಾಥಪುರದಿಂದ ಬೀರೇಶ್ವರ ಸ್ವಾಮಿಯನ್ನು ವಿಶೇಷ ಪೂಜೆ ಸಲ್ಲಿಸಿ,

Advertisement

ಚಿನ್ನಾಭರಣದೊಂದಿಗೆ ಶೃಂಗರಿಸಿ, ಬೆಳ್ಳಿಯ ಮುಖವಾಡ ಅಲಂಕರಿಸಿ ಮೆರವಣಿಗೆ ಮೂಲಕ ದೇವಸ್ಥಾನದವರಗೆ ಬಾಯಿಗೆ ಬೀಗಹಾಕಿದ್ದ ಭಕ್ತರು ಬರಿಗಾಲಲ್ಲಿ ಕೊಂಬು, ಕಹಳೆ, ಟಮಟೆ ಹಾಗೂ  ಮಂಗಳ ವಾದ್ಯಕ್ಕೆ ತಕ್ಕಂತೆ ಕುಣಿಯುತ್ತ ಕರೆತಂದರು. ಈ ಜಾತ್ರೆಯಲ್ಲಿ ಅಕ್ಕ-ಪಕ್ಕದ ಏಳೂರಿನ ಹಾಗೂ ರಾಜ್ಯದ ವಿವಿಧೆಡೆಯ  ಸಾವಿರಾರು ಭಕ್ತಾದಿಗಳು ಸಂಭ್ರಮದಿಂದ ಭಾಗವಹಿಸಿದ್ದರು.

ದಾರಿಯುದ್ದಕ್ಕೂ ಇಡುಗಾಯಿ: ಮಲ್ಲಿನಾಥಪುರದಿಂದ ಮಾರಮ್ಮನ ಆಯುಧ ಒಡವೆ ಇಡುವ ಪೆಟ್ಟಿಗೆ(ಭಂಡಾರ)ಯನ್ನು ಹುಲಿವಾಹದಲ್ಲಿರಿಸಿ, ಬಿರು ಬಿಸಿಲನ್ನು ಲೆಕ್ಕಿಸದೆ ನಂದಿಕಂಬಹೊತ್ತು ಉತ್ಸವ ಮೂರ್ತಿಯೊಂದಿಗೆ ರಸ್ತೆಯುದ್ದಕ್ಕೂ ಭಕ್ತರು ಇಡುಗಾಯಿ ಒಡೆಯುತ್ತಾ ಸಾಗಿ ಬಂದರೆ, ಮತ್ತೂಂದೆಡೆ ವೀರಗಾಸೆ ಕುಣಿತ, ಗುಡ್ಡರ ಕುಣಿತ, ಕಾಡುಗುಡ್ಡರ ಕುಣಿತ ದೊಂದಿಗೆ ಬೀರೇಶ್ವರಸ್ವಾಮಿಗೆ ಉಘೇ ಉಘೇ ಎನ್ನುತ್ತಾ ಘೋಷಣೆ ಹಾಕುತ್ತಾ ಭಕ್ತಿ-ಭಾವ ಮೆರೆದರು. ಮಹಿಳೆಯರು ತಲೆ ಮೇಲೆ ತಂಬಿಟ್ಟು ಹೊತ್ತಿದ್ದರೆ, ಕೆಲವರು ಹರಕೆಯ ಬಾಯಿಗೆ ಬೀಗ ಹಾಕಿಸಿಕೊಂಡಿದ್ದರು.

ಜೀವಂತ ಕೋಳಿ ಎಸೆದರು: ಹರಕೆ ಹೊತ್ತಿದ್ದ ಸಾವಿರಾರು ಮಂದಿ ಭಕ್ತರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಹಲವರು ಜೀವಂತ ಕೋಳಿಯನ್ನು ದೇವಾಲಯದ ಮೇಲೆಸೆದರೆ, ನೂರಾರು ಮಂದಿ ದೇವಸ್ಥಾನದ ಎದುರೆ ನೂರಾರು ಕೋಳಿಗಳನ್ನು ಬಲಿ ಕೊಟ್ಟು ಹರಕೆ ಸಲ್ಲಿಸಿದರು.

ಏಳೂರಿನ ಗ್ರಾಮದೇವತೆ: ಈ ಹೊಸಲುಮಾರಮ್ಮ ದೇವಿಯು ಸುತ್ತ ಮುತ್ತಲಿನ ಏಳು ಗ್ರಾಮಕ್ಕೆ ಸೇರಿದ್ದು, ಜಾತ್ರಾ ಮಹೋತ್ಸವಕ್ಕೆ ಮಲ್ಲಿನಾಥಪುರ, ಬೋಳನಹಳ್ಳಿ, ರಂಗಯ್ಯನಕೊಪ್ಪಲು, ಎಮ್ಮೆಕೊಪ್ಪಲು,  ಬಿಳಿಕೆರೆ, ಮೈದನಹಳ್ಳಿ,  ರಾಮೇನಹಳ್ಳಿ ಗ್ರಾಮಸ್ಥರು ದೇವಸ್ಥಾನದ ಆವರಣದ ಸುತ್ತಲಿನಲ್ಲಿರುವ ಮರದ ನೆರಳಲ್ಲಿ ಕುಳಿತು ಪ್ರಸಾದ ಸ್ವೀಕರಿಸಿದರು.  ಮತ್ತೆ ದೇವರಿಗೆ ಸಂಬಂಧಿಸಿದ ಒಡವೆ, ಆಯುಧಗಳು ಸೇರಿದಂತೆ ಎಲ್ಲವನ್ನೂ ಮೆರವಣಿಗೆಯಲ್ಲಿ ತಂದು ಗ್ರಾಮದಲ್ಲಿ ಪೂಜೆ ಸಲ್ಲಿಸಿದ ನಂತರ ಸ್ವಸ್ಥಾನದಲ್ಲಿರಿಸಿದರು.

Advertisement

ಸಂಜೆ 6ರ ನಂತರ ಯಾರೂ ಇರುವಂತಿಲ್ಲ: ಉತ್ಸವದ ಮತ್ತೂಂದು ವಿಶೇಷವೆಂದರೆ ಸಂಜೆ 6ರ ನಂತರ ದೇವಾಲಯದ ಸುತ್ತ ಯಾರೊಬ್ಬರೂ ಇರುವಂತಿಲ್ಲ. ಜಾತ್ರೆಗಾಗಿ ಅಂಗಡಿಮುಂಗಟ್ಟುಗಳನ್ನು ಕಟ್ಟಿಕೊಂಡವರೂ ಹಾಗೂ ಜಾತ್ರೆಗೆ ಬಂದವರೂ ಕೂಡ 6ರೊಳಗೆ ಜಾಗ ಖಾಲಿ ಮಾಡುತ್ತಾರೆ. ಸಂಜೆಯ ನಂತರ ಅಮ್ಮನವರು ತಮ್ಮನ್ನು ನಂಬಿಕೊಂಡಿರುವ ಬಂಟರಿಗೆ ಊಟ ಬಡಿಸುತ್ತಾಳೆನ್ನುವುದು ಇಲ್ಲಿನ ಜನರ ನಂಬಿಕೆ. ಹಾಗಾಗಿ ಯಾರೊಬ್ಬರೂ ಅಲ್ಲಿರುವುದಿಲ್ಲ.
ಉತ್ಸವದಲ್ಲಿ ಶಾಸಕ ಎಚ್‌.ಪಿ.ಮಂಜುನಾಥ್‌, ಜಿಪಂ ಸದಸ್ಯೆ ಗೌರಮ್ಮ ಸೋಮಶೇಖರ್‌, ದೇವಾಲಯ ಸಮಿತಿ ಶ್ರೀನಿವಾಸ್‌ ಮತ್ತು ಸದಸ್ಯರು ಇದ್ದರು. ಶಾಸಕ ಎಚ್‌.ಪಿ.ಮಂಜುನಾಥ್‌ ಹಾಗೂ ಬಿಳಿಕೆರೆಯ ಸಿದ್ದಾಚಾರ್‌ ಕುಟುಂಬದವರು ಭಕ್ತಾದಿಗಳಿಗೆ ಮಜ್ಜಿಗೆ-ಪಾನಕ ವ್ಯವಸ್ಥೆ ಕಲ್ಪಿಸಿದ್ದರು.  ಎಸ್‌.ಐ.ಮಾಧ್ಯನಾಯ್ಕ  ಸೇರಿದಂತೆ ಪೊಲೀಸರು ಸಿಬ್ಬಂದಿ ಬಂದೋಬಸ್ತ್ ಏರ್ಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next