Advertisement

ಎಐಎಡಿಎಂಕೆಗೆ ಮರಳುತ್ತಾರಾ ಮಾಜಿ ಸಿಎಂ ಪನ್ನೀರ್‌ಸೆಲ್ವಂ?

03:50 AM Feb 24, 2017 | |

ಚೆನ್ನೈ: ತಮಿಳುನಾಡಿನಲ್ಲಿ ಏಕಾಏಕಿ ಬಂಡಾಯವೆದ್ದು ರಾಜಕೀಯ ಅನಿಶ್ಚಿತತೆಗೆ ಕಾರಣವಾದ ಮಾಜಿ ಸಿಎಂ ಪನ್ನೀರ್‌ಸೆಲ್ವಂ ಮರಳಿ ಗೂಡಿಗೆ ಬರಲಿದ್ದಾರೆಯೇ?

Advertisement

 ಅವರನ್ನು ಎಐಎಡಿಎಂಕೆಗೆ ಮತ್ತೆ ಸೇರಿಸಿಕೊಳ್ಳುವ ಪ್ರಯತ್ನವೊಂದು ಸದ್ದಿಲ್ಲದೆ ಸಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಪಕ್ಷಕ್ಕೆ ಮರಳುವವರಿಗೆ ಸ್ವಾಗತ ಎಂದು ಎಐಎಡಿಎಂಕೆ ಉಪಪ್ರಧಾನ ಕಾರ್ಯದರ್ಶಿ ಟಿ.ಟಿ.ವಿ. ದಿನಕರನ್‌ ಹೇಳಿರುವುದೂ ಈ ವಾದಕ್ಕೆ ಪುಷ್ಟಿ ನೀಡಿದೆ.

ಗುರುವಾರ ಅಧಿಕೃತವಾಗಿ ಹುದ್ದೆಗೇರಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ದಿನಕರನ್‌, “ಯಾರ್ಯಾರು ಮಾತೃಪಕ್ಷದಿಂದ ಹೊರಹೋಗಿದ್ದಾರೋ, ಅವರು ಮತ್ತೆ ಮರಳುವುದಿದ್ದರೆ, ಅವರನ್ನು ಮಾತೃಹೃದಯದಿಂದಲೇ ಸ್ವಾಗತಿಸಲಾಗುವುದು ಹೋದವರೆಲ್ಲ ವಾಪಸ್‌ ಬರುತ್ತಾರೆಂಬ ವಿಶ್ವಾಸವಿದೆ,’ ಎಂದಿದ್ದಾರೆ. 

ಇದೇ ವೇಳೆ, ಡಿಎಂಕೆ ನಾಯಕ ಸ್ಟಾಲಿನ್‌ ವಿರುದ್ಧ ಕಿಡಿಕಾರಲು ಮರೆಯದ ದಿನಕರನ್‌, ನಮ್ಮ ಸರ್ಕಾರವನ್ನು ಉರುಳಿಸಬೇಕೆಂದು ಅವರು ಏನೇನೆಲ್ಲಾ ಕಸರತ್ತು ಮಾಡಿದರು. ಆದರೆ, ಅವರ ಆಸೆ ಕೈಗೂಡಲಿಲ್ಲ, ಎಂದಿದ್ದಾರೆ.
ಇನ್ನೊಂದೆಡೆ, ಸ್ಟಾಲಿನ್‌ ಗುರುವಾರ ದೆಹಲಿಗೆ ತೆರಳಿದ್ದು, ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರನ್ನು ಭೇಟಿಯಾಗಿ ವಿಶ್ವಾಸಮತದ ಸಮಯದಲ್ಲಾದ ಬೆಳವಣಿಗೆಧಿಗಳನ್ನು ವಿವರಿಸಿದ್ದಾರೆ. 

ಈ ನಡುವೆ, ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿದ್ದಾಗ ತೆಗೆದಿದ್ದ ಜಯಲಲಿತಾರ ಫೋಟೋಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡದಂತೆ ಅವರೇ ಹೇಳಿದ್ದರು. ಹಾಗಾಗಿ ಬಿಡುಗಡೆ ಮಾಡಲಿಲ್ಲ ಎಂದು ಮದ್ರಾಸ್‌ ಹೈಕೋರ್ಟ್‌ಗೆ ಅಪೋಲೋ ಆಸ್ಪತ್ರೆ ತಿಳಿಸಿದೆ.

Advertisement

ಜಯಾ ಇಲ್ಲದೆ ನಾ ಏಕಾಂಗಿ
“ನನ್ನ ದೀರ್ಘ‌ಕಾಲದ ಗೆಳತಿ ಜಯಲಲಿತಾ ಇಲ್ಲದೇ ನಾನೀಗ ಏಕಾಂಗಿಯಾಗಿದ್ದೇನೆ.’ ಹೀಗೆಂದು ಬೇಸರ ವ್ಯಕ್ತಪಡಿಸಿರುವುದು ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಶಶಿಕಲಾ ನಟರಾಜನ್‌. ಜಯಲಲಿತಾ ಅವರ 69ನೇ ಜನ್ಮದಿನದ ಮುನ್ನಾದಿನವಾದ ಗುರುವಾರ ಶಶಿಕಲಾ ಪಕ್ಷದ ಕಾರ್ಯಕರ್ತರಿಗೆ ಸಂದೇಶವೊಂದನ್ನು ಕಳುಹಿಸಿದ್ದು, “ಜನರ ಸೇವೆಗಾಗಿ ಅವಿರತ ಶ್ರಮಿಸಿ, ಅಮ್ಮಾನ ಜನಪ್ರಿಯತೆಯನ್ನು ಎತ್ತಿಹಿಡಿಯಿರಿ,’ ಎಂದಿದ್ದಾರೆ. ಪ್ರತಿ ವರ್ಷವೂ ನಾವು ಜಯಾ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾ ಬಂದಿದ್ದೇವೆ. ಈ ಬಾರಿ ಅಮ್ಮನಿಲ್ಲದೆ ನಾನು ಏಕಾಂಗಿಯಾಗಿದ್ದೇನೆ. ಹುಟ್ಟುಹಬ್ಬದ ಶುಭ ಕೋರಲು ಅವರು ನಮ್ಮೊಂದಿಗಿಲ್ಲ. ಆದರೆ, ಜನರಿಗೆ ಒಳ್ಳೆಯ ಆಡಳಿತ ನೀಡುವ ಮೂಲಕ ಅಮ್ಮನಿಗೆ ನೆಮ್ಮದಿ ನೀಡುತ್ತೇವೆ ಎಂದೂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next