ನಟಿ ಮಾಲಾಶ್ರೀ ಮುಖ್ಯಭೂಮಿಕೆಯಲ್ಲಿರುವ “ಮಾರಕಾಸ್ತ್ರ’ ಚಿತ್ರ ಇಂದು ತೆರೆಕಾಣುತ್ತಿದೆ. ಗುರುಮೂರ್ತಿ ಸುನಾಮಿ ಈ ಚಿತ್ರದ ನಿರ್ದೇಶಕರು. ನಟರಾಜ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಮಾಲಾಶ್ರೀ ಕೂಡಾ ಸಿನಿಮಾ ಬಗ್ಗೆ ಭರ್ಜರಿ ನಿರೀಕ್ಷೆ ಇಟ್ಟಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ಅವರು, “ನಿರ್ದೇಶಕ ಗುರುಮೂರ್ತಿ ಸುನಾಮಿ ಹೇಳಿದ ಕಥೆ ಇಷ್ಟವಾಯಿತು. ನಾನು ಈ ಚಿತ್ರ ಒಪ್ಪಕೊಳ್ಳಲು ನಿರ್ದೇಶಕರೇ ಕಾರಣ. ಏಕೆಂದರೆ ಅವರು ವಿಕಲ ಚೇತನರಾಗಿದ್ದರು ಕೂಡ, ಅವರಲ್ಲಿರುವ ಸಿನಿಮಾ ಪ್ರೀತಿ ಕಂಡು ಸಂತೋಷವಾಯಿತು. ಮೊದಲು ಹನ್ನೊಂದು ದಿನಗಳ ಕಾಲ ನನ್ನ ಚಿತ್ರೀಕರಣ ಎಂದು ನಿಗದಿಯಾಗಿತ್ತು. ಆ ನಂತರ ಒಟ್ಟು ಅರವತ್ತು ದಿನಗಳ ಕಾಲ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೇನೆ. ನಾಲ್ಕು ಸಾಹಸ ಸನ್ನಿವೇಶಗಳಿದೆ. ನಾನು ಆ್ಯಕ್ಷನ್ ಕ್ವೀನ್ ಎಂದು ಕರೆಸಿಕೊಳ್ಳಲು ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಪ್ರಮುಖ ಕಾರಣ. ಅವರ ಜೊತೆಗೆ ಈ ಸಿನಿಮಾದಲ್ಲೂ ಕೆಲಸ ಮಾಡಿದ್ದು ಖುಷಿಯಾಗಿದೆ . “ಮಾರಕಾಸ್ತ್ರ’ ಸಿನಿಮಾದ ಸಾಹಸ ಸನ್ನಿವೇಶಗಳು ನನ್ನ ಹಿಂದಿನ “ಚಾಮುಂಡಿ’, “ಶಕ್ತಿ’ ಮುಂತಾದ ಸಿನಿಮಾಗಳ ಸಾಹಸ ಸನ್ನಿವೇಶಗಳನ್ನು ನೆನಪಿಸಿತು. ಈ ಸಿನಿಮಾದಲ್ಲಿ ನಾನು ಪೊಲೀಸ್ ಆಫೀಸರ್ ಪಾತ್ರದಲ್ಲಿ ಅಭಿನಯಿಸಿದ್ದೇನೆ’ ಎಂದು ಕಥೆ ಮತ್ತು ಪಾತ್ರ ಪರಿಚಯ ಮಾಡಿಕೊಡುತ್ತಾರೆ.
ನಿರ್ದೇಶಕ ಗುರುಮೂರ್ತಿ ಸುನಾಮಿ ಅವರಿಗೆ ಈ ಸಿನಿಮಾದ ಎಲ್ಲರಿಗೂ ಇಷ್ಟವಾಗುವ ವಿಶ್ವಾಸವಿದೆ. “ನಾನು ಮೂಲತಃ ಬಳ್ಳಾರಿಯವನು. ಇದು ನನ್ನ ಮೊದಲ ಸಿನಿಮಾ. ಮೊದಲ ಸಿನಿಮಾದಲ್ಲೇ ಮಾಲಾಶ್ರೀ ಅವರಂಥ ದೊಡ್ಡ ನಟಿಗೆ ಆ್ಯಕ್ಷನ್-ಕಟ್ ಹೇಳುತ್ತೇನೆ ಅಂದುಕೊಂಡಿರಲಿಲ್ಲ. “ಮಾರಕಾಸ್ತ್ರ’ ಒಂದು ಕೌಟುಂಬಿಕ ಚಿತ್ರ. ಇದರಲ್ಲಿ ಆ್ಯಕ್ಷನ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲವೂ ಇದೆ’ ಎನ್ನುತ್ತಾರೆ.
“”ಮಾರಕಾಸ್ತ್ರ’ ಚಿತ್ರದ ಕಥೆ ಚೆನ್ನಾಗಿದೆ. ಚಿತ್ರದ ಹಾಡು ಹೇಳುವುದಕ್ಕೆ ಹೋದ ನಾನು ನಿರ್ಮಾಪಕನಾದೆ. ಈ ಚಿತ್ರದಲ್ಲಿ ನಟನೆ ಕೂಡ ಮಾಡಿದ್ದೇನೆ. ನನಗೆ ನನ್ನ ದೇಶದ ಮೇಲೆ ಅಭಿಮಾನ ಹೆಚ್ಚು. ಹಾಗಾಗಿ ಈ ಚಿತ್ರದ ಹಾಡೊಂದರ ಚಿತ್ರೀಕರಣವನ್ನು ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಸುಮಾರು ಮೂವತ್ತೆರಡು ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ’ ಎನ್ನುವುದು ನಿರ್ಮಾಪಕ ನಟರಾಜ್ ಮಾತು.
ಈ ಚಿತ್ರದಲ್ಲಿ ನಟಿ ಹರ್ಷಿಕಾ ಕ್ರೈಮ್ ರಿಪೋರ್ಟರ್ ಆಗಿ ಕಾಣಿಸಿಕೊಂಡಿದ್ದಾರೆ. ನೃತ್ಯ ನಿರ್ದೇಶನದ ಜೊತೆಗೆ ನಿರ್ದೇಶಕರಾಗಿಯೂ ಗುರುತಿಸಿಕೊಂಡಿರುವ ಧನು ಕುಮಾರ್ ಈ ಚಿತ್ರದ ಕ್ರಿಯೇಟಿವ್ ಹೆಡ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಸಿನಿಮಾಗಳ ಬಿಝಿನೆಸ್ ಆಗೋದು ಕಷ್ಟ. ಆದರೆ, ಮಾರಕಾಸ್ತ್ರ ಸಿನಿಮಾ ಈಗಾಗಲೇ ಒಂದೊಳ್ಳೆಯ ಬಿಝಿನೆಸ್ ಮಾಡಿ ಖುಷಿಯಾಗಿದೆ.
ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ ಒಂದು ಕೋಟಿ ಎಂಭತ್ತು ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಇದೇ ರೀತಿ ಸಿನಿಮಾಕ್ಕೂ ಪ್ರೇಕ್ಷಕ ಪ್ರೋತ್ಸಾಹ ಕೊಡುತ್ತಾನೆ ಎಂಬ ವಿಶ್ವಾಸದಲ್ಲಿದೆ ಚಿತ್ರತಂಡ.