Advertisement

ಮಾಗಣೆಗಳ ಮಹಾ ಮಂಡಳಿಯಿಂದ ಹಿಂದೂ ಸಮಾಜಕ್ಕೆ ಒಳಿತು

02:15 AM Jul 11, 2017 | Karthik A |

ಉಳ್ಳಾಲ: ದೇವಸ್ಥಾನಗಳು ಮತ್ತು ದೈವಸ್ಥಾನಗಳನ್ನು ಒಂದೇ ಛತ್ರದಡಿ ತರುವ ಏಕರೂಪ ನಿರ್ಣಯಗಳು ಮಾಗಣೆಗಳ ಮಹಾ ಮಂಡಳಿಯಿಂದ ನಡೆದಾಗ ಹಿಂದೂ ಸಮಾಜಕ್ಕೆ ಸುಭದ್ರವಾದ ಬುನಾದಿ ಹಾಕಲು ಸಾಧ್ಯ ಎಂದು ಶ್ರೀ ಕ್ಷೇತ್ರ ಮರಕಡದ ಶ್ರೀ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮೀಜಿ  ಹೇಳಿದರು. ಸೋಮೇಶ್ವರ ಉಚ್ಚಿಲದ ಪದ್ಮ ವಿಹಾರದಲ್ಲಿ ಉಳ್ಳಾಲ ವ್ಯಾಪ್ತಿಯ 17 ಗ್ರಾಮಗಳನ್ನೊಳಗೊಂಡ ಐದು ಮಾಗಣೆಗಳ ಎಲ್ಲ ಹಿಂದೂ ಸಮುದಾಯಗಳ ಒಕ್ಕೂಟವಾದ ‘ಮಾಗಣೆಗಳ ಮಹಾ ಮಂಡಳಿ’ಯ ನೂತನ ಕಚೇರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ದೇವಸ್ಥಾನಗಳಲ್ಲಿ ಆರಾಧನೆ ಸಂಸ್ಕೃತಿ ಅವರವರ ಭಾವಕ್ಕೆ ತಕ್ಕಂತೆ ಇರುವುದು ಸಹಜ. ಆದರೆ ದೇವಸ್ಥಾನಗಳು ವ್ಯಾವಹಾರಿಕ ತಾಣವಾಗದೆ ಸಮಾಜದ ವಿಚಾರಗಳ ಕಡೆ ಹೆಚ್ಚಿನ ಒಲವು ನೀಡುವ ಕಾರ್ಯದೊಂದಿಗೆ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಒಲವು ನೀಡಬೇಕು ಎಂದರು. ಖ್ಯಾತ ಸಾಹಿತಿ, ಚಿಂತಕ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಮಾತನಾಡಿ, ಮಾಗಣೆಗಳ ಮಹಾ ಮಂಡಳಿ ಯಾವಾಗಲೂ ಆಗಬೇಕಾದ ಕಾರ್ಯವಾಗಿತ್ತು. ಆದರೆ ತಡವಾಗಿಯಾದರೂ ಒಕ್ಕೂಟ ನಡೆಸುತ್ತಿರುವುದು ಶ್ಲಾಘನೀಯ. ಹಿಂದೂಗಳಲ್ಲಿ ಮಾತ್ರವಲ್ಲ, ಎಲ್ಲ ಸಮುದಾಯಗಳಲ್ಲೂ ಜಾತಿ, ಉಪಜಾತಿಗಳಿವೆ. ಆದರೆ ಹಿಂದೂಗಳಲ್ಲಿ ಮಾತ್ರ ಪರಸ್ಪರ ಎತ್ತಿಕಟ್ಟುವ ಕಾರ್ಯ ನಡೆಯುತ್ತಿದೆ. ರಾಜಕೀಯದಲ್ಲೂ ಧರ್ಮ ಮತ್ತು ಜಾತೀಯತೆಯ ವಿಚಾರ ಹೆಚ್ಚಿರುವುದು ಖೇದಕರ ಎಂದರು.

ಹಿಂದೂ ಸಮಾಜ ಅತ್ಯಂತ ಪ್ರಾಚೀನ ಮತ್ತು ವೈಜ್ಞಾನಿಕತೆಯನ್ನು ಹೊಂದಿತ್ತು. ಹಿಂದೆ ಪ್ರತಿಯೊಂದು ವಿಚಾರವನ್ನು ಕರಾರುವಾಕ್ಕಾಗಿ ಪಂಚಾಂಗದಲ್ಲಿ ಮಾಹಿತಿ ನೀಡುತ್ತಿದ್ದು, ಅದರಲ್ಲಿ ತಿಳಿಸಿರುವ ಅಂಶಗಳು ಇಂದಿನ ವೈಜ್ಞಾನಿಕ ಯುಗದಲ್ಲೂ ಸತ್ಯ ಎಂಬುದು ಸಾಬೀತಾಗಿವೆ. ದೇವಸ್ಥಾನ, ದೈವಸ್ಥಾನಗಳನ್ನು ಒಗ್ಗೂಡಿಸುವ ಕಾರ್ಯ ಮಹತ್ವದ್ದಾಗಿದ್ದು, ಈ ನಿಟ್ಟಿನಲ್ಲಿ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಉತ್ತಮ ಕೆಲಸ ಮಾಡಿದ್ದಾರೆ ಎಂದರು.

ಮಾಗಣೆಗಳ ಮಹಾ ಮಂಡಳಿ ಅಧ್ಯಕ್ಷ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಮಾತನಾಡಿ, ಭಾರತದಲ್ಲಿ ಹಿಂದಿನಿಂದಲೂ ಹಿಂದೂ ಸಮಾಜವನ್ನು ಒಡೆದು ಮತಾಂತರ ಮಾಡುವ ಪ್ರಯತ್ನ ನಡೆದಿವೆ. ಮೊಘಲರಿಂದ ಬ್ರಿಟಿಷರವರೆಗೂ ಈ ಕೆಲಸಗಳು ನಡೆದಿವೆ. ನಮ್ಮಲ್ಲಿರುವ ಬಲವಾದ ಸಂಪ್ರದಾಯ, ಕುಟುಂಬ ವ್ಯವಸ್ಥೆ, ಗ್ರಾಮ ವ್ಯವಸ್ಥೆ, ಮಾಗಣೆ ವ್ಯವಸ್ಥೆ, ಸೀಮೆ ವ್ಯವಸ್ಥೆ ಮತ್ತು ಪರಸ್ಪರ ಸಹಕಾರ ಮುಂತಾದವುಗಳಿಂದಾಗಿ ಮತಾಂತರ ವಿಷಯದಲ್ಲಿ ಹಿಂದೂ ವಿರೋಧಿಗಳು ನಿರೀಕ್ಷಿತ ಯಶಸ್ಸು ಸಾಧಿಸಿಲ್ಲ. ಈಗ ಕೆಲವು ‘ಇಸಂ’ಗಳ ಮೂಲಕ ವೈಚಾರಿಕತೆಯನ್ನು ಬಿತ್ತುವ ಹೆಸರಲ್ಲಿ ಹಿಂದೂ ವಿರೋಧಿ ಕೆಲಸಗಳು ನಡೆಯುತ್ತಿದ್ದು, ಅದರ ವಿರುದ್ಧ ನಾವು ಜಾಗೃತರಾಗಬೇಕಾಗಿದೆ ಎಂದರು.

ಮಾಗಣೆಗಳ ಮಹಾಮಂಡಳಿಯಲ್ಲಿ ದುಡಿದ ಹಿರಿಯರನ್ನು ಗೌರವಿಸಲಾಯಿತು. ರಾಜ್ಯ ವಕೀಲರ ಪರಿಷತ್ತಿನ ಉಪಾಧ್ಯಕ್ಷ ರವೀಂದ್ರನಾಥ ಶೆಟ್ಟಿ, ಶ್ರೀ ಸೋಮೇಶ್ವರ ಸೋಮನಾಥ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ, ಸೋಮೇಶ್ವರ ಗ್ರಾಮ ಪಂಚಾಯತ್‌ ಅಧ್ಯಕ್ಷ ರಾಜೇಶ್‌ ಎ. ಉಚ್ಚಿಲ್‌ ಉಪಸ್ಥಿತರಿದ್ದರು. ಮಹಾ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮೋಹನ್‌ದಾಸ್‌ ಗಾಂಭೀರ್‌ ಸ್ವಾಗತಿಸಿದರು. ಉಪ ಕಾರ್ಯದರ್ಶಿ ಸತ್ಯನಾರಾಯಣ ಹೂಡೆ  ಅವರು ದೇವಸ್ಥಾನ, ದೈವಸ್ಥಾನಗಳ ಮತ್ತು ಸಮುದಾಯಗಳ ಪ್ರತಿನಿಧಿಗಳನ್ನು ಪರಿಚಯಿಸಿ ದರು. ಸದಸ್ಯ ರಾಜೇಶ್‌ ಶೆಟ್ಟಿ ಪಜೀರುಗುತ್ತು ಕಾರ್ಯಕ್ರಮ ನಿರ್ವಹಿಸಿದರು. ಟ್ರಸ್ಟಿ ಯಶವಂತ ಉಚ್ಚಿಲ್‌ ವಂದಿಸಿದರು.

Advertisement

ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ರಾಮಗಳ ಸೇರ್ಪಡೆ
ಉಳ್ಳಾಲ ವ್ಯಾಪ್ತಿಯ 17 ಗ್ರಾಮಗಳನ್ನೊಳಗೊಂಡ  ಐದು ಮಾಗಣೆಗಳ ಎಲ್ಲ ಹಿಂದೂ ಸಮುದಾಯಗಳ ಒಕ್ಕೂಟವಾದ ‘ಮಾಗಣೆಗಳ ಮಹಾ ಮಂಡಳಿ’ಯನ್ನು ಆರಂಭದ ಹಂತದಲ್ಲಿ ಒಟ್ಟು ಸೇರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ರಾಮಗಳನ್ನು ಸೇರಿಸಲಾಗುವುದು. ಈ ಕಾರ್ಯದಲ್ಲಿ ಹಿಂದೂ ಸಮಾಜದ ಎಲ್ಲರ ಸಹಕಾರ ಅಗತ್ಯ.
– ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು, ಅಧ್ಯಕ್ಷರು, ಮಾಗಣೆಗಳ ಮಹಾ ಮಂಡಳಿ

Advertisement

Udayavani is now on Telegram. Click here to join our channel and stay updated with the latest news.

Next