ಹೊಸದಿಲ್ಲಿ: ಕೇಂದ್ರ ಸರಕಾರವು ಮೇ 31ರವರೆಗೂ ಲಾಕ್ ಡೌನ್ ವಿಸ್ತರಣೆ ಮಾಡಿರುವ ನಡುವೆಯೇ, ಕರ್ನಾಟಕ, ಕೇರಳ, ದಿಲ್ಲಿ, ಪಶ್ಚಿಮ ಬಂಗಾಳ ಸೇರಿದಂತೆ ಬಹುತೇಕ ರಾಜ್ಯಗಳು ತಮ್ಮ ಪರಿಸ್ಥಿತಿಗೆ ಅನುಗುಣವಾಗಿ ನಿರ್ಬಂಧಗಳನ್ನು ಸಡಿಲಿಕೆ ಮಾಡಿ ಸೋಮವಾರ ಆದೇಶ ಹೊರಡಿಸಿವೆ.
ಕೇರಳ ಹಾಗೂ ಪಂಜಾಬ್‌ನಲ್ಲಿ ಕೋವಿಡ್ ಹಾಟ್ ಸ್ಪಾಟ್ ಹೊರತುಪಡಿಸಿ ಇತರೆಡೆ ಸಾರ್ವಜನಿಕ ಸಾರಿಗೆಗಳಿಗೆ ಅನುಮತಿ ನೀಡಲಾಗಿದೆ. ಕೇರಳದಲ್ಲಿ ಬಸ್ ಸೇವೆ ಆರಂಭವಾಗಿದ್ದರೂ, ಜಿಲ್ಲೆಗಳ ನಡುವೆ ಹಾಗೂ ರಾಜ್ಯಗಳ ನಡುವೆ ಬಸ್ ಸಂಚಾರಕ್ಕೆ ಅವಕಾಶವಿಲ್ಲ ಎಂದು ಸರಕಾರ ಹೇಳಿದೆ.
ಬುಧವಾರದಿಂದ ರಾಜ್ಯದಲ್ಲಿ ಬಾರ್ ಸೇರಿದಂತೆ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಸರಕಾರಿ ಕಚೇರಿಗಳಿಗೆ ಶನಿವಾರ ರಜೆ ಘೋಷಿಸಲಾಗಿದೆ. ಇನ್ನು ಹರಿಯಾಣ ಸರಕಾರವು, ಆಡಳಿತಾತ್ಮಕ ಕೆಲಸಗಳನ್ನು ಪೂರ್ಣಗೊಳಿಸುವ ಸಲುವಾಗಿ ಸರಕಾರಿ ಶಾಲೆಗಳನ್ನು ತೆರೆಯಲು ಅನುಮತಿ ನೀಡಿದೆ.
ಪಶ್ಚಿಮ ಬಂಗಾಲದಲ್ಲಿ ರಾತ್ರಿ ಹೊತ್ತು ಕರ್ಫ್ಯೂ ವಿಧಿಸುವುದಿಲ್ಲ ಎಂದು ಸಿಎಂ ಮಮತಾ ಘೋಷಿಸಿದ್ದಾರೆ. ಇದೇ ವೇಳೆ, ಪಂಜಾಬ್‌ನಲ್ಲಿ ಬುಧವಾರದಿಂದ ಆಯ್ದ ಮಾರ್ಗಗಳಲ್ಲಿ ಬಸ್ ಸಂಚಾರ ಆರಂಭಿಸುವುದಾಗಿ ಸರಕಾರ ಘೋಷಿಸಿದೆ.
ಇನ್ನು ದಿಲ್ಲಿ ಸರಕಾರ ಕೂಡ ನಿರ್ಬಂಧ ಸಡಿಲಿಕೆ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ. ರಾತ್ರಿ ಕರ್ಫ್ಯೂ 31ರವರೆಗೂ ಮುಂದುವರಿಯಲಿದ್ದು, ಮಾರುಕಟ್ಟೆಗಳು ಹಾಗೂ ಶಾಪಿಂಗ್ ಕಾಂಪ್ಲೆಕ್ಸ್ ಮಳಿಗೆಗಳನ್ನು ಸಮ – ಬೆಸ ನೀತಿಯನ್ವಯ ತೆರೆಯಲು ಅನುಮತಿ ಕಲ್ಪಿಸಲಾಗುತ್ತದೆ ಎಂದು ಸಿಎಂ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ ಈ ನಡುವೆ ಬಸ್ ಸೇವೆ ಕೂಡ ದಿಲ್ಲಿಯಲ್ಲಿ ಆರಂಭವಾಗಲಿದೆ.