Advertisement

ಸಾರಥಿಗೆ ಗ್ರಹಣ: ಸ್ಥಗಿತಗೊಂಡಿರುವ ಸಾರಿಗೆ ಇಲಾಖೆಯ ಹಲವು ಸೇವೆಗಳು

12:39 AM Feb 10, 2024 | Team Udayavani |

ಮಂಗಳೂರು: ಸಾರಿಗೆ ಇಲಾಖೆಯಿಂದ ಸ್ಮಾರ್ಟ್‌ ಕಾರ್ಡ್‌ ಗಳ ವಿತರಣೆ ವಿಳಂಬದ ಸಮಸ್ಯೆ ಬಗೆಹರಿಯುವ ಹಂತಕ್ಕೆ ತಲುಪು ತ್ತಿದ್ದಂತೆ ಹೊಸ ಸಮಸ್ಯೆ ತಲೆದೋರಿದೆ. ಚಾಲನಾ ಅನುಜ್ಞಾ ಪತ್ರಕ್ಕೆ ಅರ್ಜಿ ಸಲ್ಲಿಸುವ ಆನ್‌ಲೈನ್‌ ವ್ಯವಸ್ಥೆ ಕೈಕೊಟ್ಟಿದೆ!

Advertisement

ಪರಿವಾಹನ್‌ ಅಧೀನದಲ್ಲಿರುವ ಸಾರಥಿ ಪೋರ್ಟಲ್‌ನ ಸಮಸ್ಯೆಯಿಂದಾಗಿ ಹೊಸ ಚಾಲನಾ ಅನುಜ್ಞಾ ಪತ್ರ, ಕಲಿಕಾ ಲೈಸನ್ಸ್‌, ಶುಲ್ಕ ಪಾವತಿ, ಸ್ಲಾಟ್‌ ಬುಕ್ಕಿಂಗ್‌ ಸಾಧ್ಯವಾಗದೆ ಜನ ಪರದಾಡುವಂತಾಗಿದೆ. ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಎ) ನಿರ್ವಹಿಸುವ ಈ ಪರಿವಾಹನ್‌ ವೆಬ್‌ಸೈಟ್‌ನಲ್ಲಿರುವ ದೋಷದಿಂದಾಗಿ ರಾಜ್ಯದೆಲ್ಲೆಡೆ ಸಮಸ್ಯೆ ತಲೆದೋರಿದೆ.

ಸಮಸ್ಯೆ ಏನು?
ಒಂದು ವಾರದಿಂದ ಹೊಸ ಚಾಲನಾ ಅನುಜ್ಞಾ ಪತ್ರ, ಕಲಿಕಾ ಲೈಸನ್ಸ್‌ ಸೇರಿದಂತೆ ಯಾವುದೇ ಕೆಲಸಗಳು ನಡೆಸಲಾಗುತ್ತಿಲ್ಲ. ಸಾರ್ವ ಜನಿಕರು ನಿರಂತರವಾಗಿ ಪ್ರಯತ್ನಿಸುತ್ತಿದ್ದರೂ ಅರ್ಜಿ ಸಲ್ಲಿಸಲು ಅಸಾಧ್ಯವಾಗಿದೆ. ಸಾಫ್ಟ್‌ವೇರ್‌ ಉನ್ನತೀಕರಣ ಮಾಡ ಲಾಗುತ್ತಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ.

ಸಾರ್ವಜನಿಕರು ಕಂಗಾಲು
ವಾಹನಗಳ ನೋಂದಣಿ, ಚಾಲನಾ ಅನುಜ್ಞಾ ಪತ್ರ, ವಾಹನಗಳ ನೋಂದಣಿ ಪತ್ರ ಸೇರಿದಂತೆ ವಿವಿಧ ದಾಖಲೆಗಳನ್ನು ಪಾರದರ್ಶಕವಾಗಿ ನೀಡುವ ಹಿನ್ನೆಲೆ ಇಲಾಖೆ ಆನ್‌ಲೈನ್‌ ವ್ಯವಸ್ಥೆ ಆರಂಭಿಸಿತ್ತು. ಆನ್‌ಲೈನ್‌ ವ್ಯವಸ್ಥೆ ಜಾರಿಯಾದ ಬಳಿಕ ಜನರ ಸಮಸ್ಯೆ ಪರಿಹಾರವಾಗುತ್ತದೆ ಎನ್ನುವ ಲೆಕ್ಕಾಚಾರವಿತ್ತು. ಆದರೆ ಸರ್ವರ್‌ ಸಮಸ್ಯೆ ನಿತ್ಯದ ಗೋಳು! ಅರ್ಜಿ ಸಲ್ಲಿಸಲು ಕೆಲವೆಡೆ ಸಮಸ್ಯೆಯಾದರೆ, ಮತ್ತೆ ಕೆಲವು ಪ್ರದೇಶಗಳಲ್ಲಿ ಶುಲ್ಕ ಪಾವತಿಸುವ ವೇಳೆ ವಿಳಂಬ. ಇವುಗಳ ಜತೆ ದಿನದಲ್ಲಿ ಸೀಮಿತ ಸಮಯಲ್ಲಿ ಮಾತ್ರವೇ ಶುಲ್ಕ ಪಾವತಿಗೆ ಕಚೇರಿ ಗಳಲ್ಲಿ ಅವಕಾಶ. ಇದರಿಂದ ಸಾರ್ವ ಜನಿಕರು ನೇರವಾಗಿ ಆರ್‌ಟಿಒ ಕಚೇರಿಗೆ ತೆರಳಿ ಆರ್ಜಿ ಸಲ್ಲಿಕೆ, ಶುಲ್ಕ ಪಾವತಿಗೆ ಪರದಾಡುವುದು ಸರ್ವೇ ಸಾಮಾನ್ಯ.

ಡ್ರೈವಿಂಗ್‌ ಸ್ಕೂಲ್‌ನವರು ಅತಂತ್ರ!
ವಾರದ ಹಿಂದೆಯೇ ಅನೇಕ ಆರ್ಜಿಗಳನ್ನು ಸಾರ್ವಜನಿಕರಿಂದ ಪಡೆದುಕೊಂಡಿದ್ದೇವೆ. ಸಾಮಾನ್ಯವಾಗಿ ಒಂದೆರಡು ತಾಸು ಸಮಸ್ಯೆ ಇರುತ್ತಿತ್ತು. ಆದರೆ ಈ ಬಾರಿ ಒಂದು ವಾರದಿಂದ ಈ ಹೊಸ ಕಗ್ಗಂಟು ಎದುರಾಗಿದೆ. ಗ್ರಾಹಕರಿಗೆ ಎಲ್‌ಎಲ್‌ಆರ್‌ ಮಾಡಿಸಿಕೊಡಲು ಸಾಧ್ಯವಾಗುತ್ತಿಲ್ಲ. ಮತ್ತೆ ಕೆಲವರ ಎಲ್‌ಎಲ್‌ಆರ್‌ ಅವಧಿ ಮುಗಿಯುತ್ತಿದೆ. ಡಿಎಲ್‌ಗೆ ಅರ್ಜಿ ಸಲ್ಲಿಸಲು ಒತ್ತಡ ಹಾಕುತ್ತಿದ್ದಾರೆ. ಸರ್ವರ್‌ ಸಮಸ್ಯೆ ಇದೆ ಎಂದರೆ, ಜನಸಾಮಾನ್ಯರು ನಂಬುತ್ತಿಲ್ಲ. ಬಯೋಮೆಟ್ರಿಕ್‌ ಮಾಡಿಸಲು ಕೆಲವರನ್ನು ಕಚೇರಿಗೆ ಕರೆದೊಯ್ದು ಫಲವಿಲ್ಲದೆ ವಾಪಸಾಗುವ ಸನ್ನಿವೇಶ ಎದುರಾಗಿದೆ ಎಂದು ಡ್ರೈವಿಂಗ್‌ ಸ್ಕೂಲ್‌ನವರು ಆರೋಪಿಸುತ್ತಿದ್ದಾರೆ.

Advertisement

ಏನೆಲ್ಲ ತೊಂದರೆ?
ರಾಜ್ಯದಲ್ಲಿ ನಿತ್ಯ ಸಾವಿರಾರು ಮಂದಿ ಪರಿವಾಹನ್‌ ಮೂಲಕ ಅರ್ಜಿ ಸಲ್ಲಿಸುತ್ತಾರೆ. ಸರ್ವರ್‌ ಡೌನ್‌ ಆಗಿರುವ ಕಾರಣದಿಂದಾಗಿ ಎಲ್‌ಎಲ್‌ಆರ್‌ ಪಡೆಯಲಾಗುತ್ತಿಲ್ಲ. ಡಿಎಲ್‌ಗೆ ಅರ್ಜಿ ಸಲ್ಲಿಸಲಾಗುತ್ತಿಲ್ಲ. ಚಾಲನಾ ಪರೀಕ್ಷೆಗೆ ಸ್ಲಾಟ್‌ ಬುಕ್ಕಿಂಗ್‌ ಅಸಾಧ್ಯವಾಗಿದೆ. ಶುಲ್ಕ ಪಾವತಿಯಾಗುತ್ತಿಲ್ಲ. ಬಯೋಮೆಟ್ರಿಕ್‌ ಮೂಲಕ ಭಾವಚಿತ್ರ ತೆಗೆಯಲು ಸಾಧ್ಯವಾಗುತ್ತಿಲ್ಲ. ಇವುಗಳಲ್ಲಿ ಬಯೋಮೆಟ್ರಿಕ್‌ಗೆ ಆರ್‌ಟಿಒ ಕಚೇರಿಗೆ ತೆರಳಬೇಕು. ಶುಲ್ಕ ಪಾವತಿಗೆ ಆನ್‌ಲೈನ್‌ನಲ್ಲಿ ಅವಕಾಶವಿದ್ದರೂ, ಸಾರ್ವಜನಿಕರು ಕಚೇರಿಯನ್ನೇ ಅವಲಂಬಿಸಿದ್ದಾರೆ.

ಶೀಘ್ರ ಪರಿಹಾರದ ನಿರೀಕ್ಷೆ:
ಸಾಫ್ಟ್‌ವೇರ್‌ ಅಪ್‌ಡೇಟ್‌ ಇದ್ದಲ್ಲಿ ಮೊದಲೇ ಸೂಚನೆ ಬರುತ್ತದೆ. ಒಂದೆರಡು ದಿನಗಳಲ್ಲಿ ಸಮಸ್ಯೆ ಪರಿಹಾರವಾಗುತ್ತದೆ. ಆದರೆ, ಈ ಬಾರಿ ಸರ್ವರ್‌ ಸಮಸ್ಯೆತಲೆದೋರಿದೆ. ಇದನ್ನು ಎನ್‌ಐಸಿ ನಿರ್ವಹಿಸುತ್ತಿದೆ. ಬಹುತೇಕ ಸಾರಥಿಯಲ್ಲಿರುವ ಸಮಸ್ಯೆ ಪರಿಹಾರವಾಗುತ್ತಿದೆ ಶೀಘ್ರದಲ್ಲೇ ಸಹಜ ಸ್ಥಿತಿಗೆ ಮರಳಲಿದೆ.
-ರವಿಶಂಕರ್‌ ಪಿ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ

ಯಾವೆಲ್ಲ ಸೇವೆ ವ್ಯತ್ಯಯ?
ಹೊಸ ಚಾಲನಾ ಅನುಜ್ಞಾ ಪತ್ರ, ಕಲಿಕಾ ಲೈಸನ್ಸ್‌, ಲೈಸನ್ಸ್‌ ನವೀಕರಣ, ವಿಳಾಸ ಬದಲಾವಣೆ ಸೇರಿದಂತೆ ಚಾಲನಾ ವಿಭಾಗಕ್ಕೆ ಸಂಬಂಧಿಸಿದ ಹತ್ತಕ್ಕೂ ಅಧಿಕ ಸೇವೆಗಳು ಸಿಗದೆ ಸಮಸ್ಯೆಯಾಗಿದೆ.

ಯಾವ ಸೇವೆ ಸಿಗುತ್ತಿವೆ? ವಾಹನಗಳ ನೋಂದಣಿ, ಫಿಟ್‌ನೆಸ್‌ ಸರ್ಟಿಫಿಕೇಟ್‌ ಸೇರಿದಂತೆ ವಾಹನ್‌-4 ಸಾಫ್ಟ್ವೇರ್‌ಗೆ ಸಂಬಂಧಿಸಿದ ಸೇವೆಗಳಲ್ಲಿ ವ್ಯತ್ಯಯ ಇಲ್ಲ.

-ಸಂತೋಷ್‌ ಮೊಂತೇರೊ

Advertisement

Udayavani is now on Telegram. Click here to join our channel and stay updated with the latest news.

Next