Advertisement
ಜನಪ್ರತಿನಿಧಿಗಳಿಗೆ ಚುನಾವಣೆ ನೀತಿ ಸಂಹಿತೆ, ಅಧಿಕಾರಿಗಳಿಗೆ ಚುನಾವಣಾ ಕರ್ತವ್ಯ. ಗುತ್ತಿಗೆದಾರನ ಫೋನ್ ಸ್ವಿಚ್ ಆಫ್. ಮಳೆ ಆರಂಭವಾದರೆ ಅಂತಾರಾಜ್ಯ ಸಂಪರ್ಕ ರಸ್ತೆಯಾಗಿರುವ ವಿಟ್ಲ – ಪುತ್ತೂರು ರಸ್ತೆಯ ಸ್ಥಿತಿಯನ್ನು ನೆನೆದು ಸಾರ್ವಜನಿ ಕರು, ವಾಹನ ಸವಾರರು ಹಾಗೂ ಚಾಲಕರು ಆತಂಕಗೊಂಡಿದ್ದಾರೆ.
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಆರಂಭಗೊಂಡ ಸುರತ್ಕಲ್ – ಕಬಕ ರಾಜ್ಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಸುರತ್ಕಲ್‌ನಿಂದ ಬಿ.ಸಿ. ರೋಡ್ ತನಕ ಕೆಲಸ ಬಹುತೇಕ ಮುಗಿದಿದೆ. ಒಟ್ಟು 18 ಕೋಟಿ ರೂ. ಅನುದಾನದಲ್ಲಿ 42 ಕಿ.ಮೀ. ರಸ್ತೆ ವಿಸ್ತರಣೆ ಹಾಗೂ ಡಾಮರು ಕಾಮಗಾರಿ ಆಗಬೇಕಿದೆ. ರಸ್ತೆ ಬದಿಯಲ್ಲಿ ಗುಂಡಿಗಳನ್ನು ತೋಡಿ ಯಂತ್ರ ಹಾಗೂ ಕಾರ್ಮಿಕರೊಂದಿಗೆ ಗುತ್ತಿಗೆದಾರರು ಮಾಯವಾಗಿದ್ದರು. ಇದರಿಂದ ಜನರಿಗಾಗುತ್ತಿರುವ ತೊಂದರೆಗಳನ್ನು ವಿವರಿಸಿ ‘ಸುದಿನ’ದಲ್ಲಿ ವರದಿಗಳು ಪ್ರಕಟವಾದ ಮೇಲೆ ಮತ್ತೆ ಕೆಲಸ ಆರಂಭವಾಗಿತ್ತು. ರಸ್ತೆ ಬದಿ ಗುಂಡಿಗಳನ್ನು ಮುಚ್ಚಿದರೂ ಡಾಮರು ಕಾಮಗಾರಿ ಆಗಿಲ್ಲ. ರಸ್ತೆ ಬದಿಯಲ್ಲಿ ಯಂತ್ರಗಳನ್ನಿಟ್ಟು, ಕೆಲಸ ನಿಲ್ಲಿಸಲಾಗಿದೆ. ವಿಟ್ಲದಿಂದ ಕಬಕ ವರೆಗಿನ ರಸ್ತೆ ತೀರಾ ಇಕ್ಕಟ್ಟಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ತಡೆಗೋಡೆಗಳಿಲ್ಲದ ಹೊಂಡಗಳು, ತೋಟಗಳು, ದೊಡ್ಡ ಪ್ರಮಾಣದಲ್ಲಿ ನೀರು ಹರಿಯುವ ತೋಡುಗಳಿವೆ. ಅರೆಬರೆ ಕಾಮಗಾರಿ ನಡೆಸಿದ್ದರಿಂದ ರಸ್ತೆಯಲ್ಲಿ ನೀರು ಶೇಖರಗೊಂಡು, ಅಪಾಯ ಎದುರಾಗಲಿದೆ.
Related Articles
Advertisement
ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಾಮಗಾರಿ ವೇಗವಾಗಿ ನಡೆಯುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಕಾಮಗಾರಿ ಬಿಲ್ ಪಾವತಿಯಾಗದೆ ಗುತ್ತಿಗೆದಾ ರರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಕೆಲವರು ಅಭಿಪ್ರಾಯಿಸಿದ್ದಾರೆ. ಖಚಿತ ಕಾರಣ ತಿಳಿಯಲು ಪ್ರಯತ್ನಿಸಿದರೂ ಗುತ್ತಿಗೆದಾರರ ಮೊಬೈಲ್ ಸ್ವಿಚ್ ಆಫ್ ಆಗಿದೆ.
ಗುತ್ತಿಗೆದಾರರು ಸಿಗುತ್ತಿಲ್ಲಸಹಾಯಕ ಎಂಜಿನಿಯರ್ ಪ್ರೀತಂ ಅವರಲ್ಲಿ ಕೇಳಿದರೆ, ಗುತ್ತಿಗೆದಾರರು ಸ್ಪಂದಿಸುತ್ತಿಲ್ಲ, ಸಂಪರ್ಕಕ್ಕೂ ಸಿಗುತ್ತಿಲ್ಲ. ಚುನಾವಣೆ ಬಳಿಕ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದರು. ಎಂಜಿನಿಯರ್ ಉಮೇಶ್ ಭಟ್ ಮಾತನಾಡಿ, ಈ ಗುತ್ತಿಗೆದಾರರು ಎಲ್ಲಿಯೂ ಸಮರ್ಪಕವಾಗಿ ಕಾಮಗಾರಿ ನಡೆಸಿಲ್ಲ. ಈ ಬಗ್ಗೆ ಸಾರ್ವಜನಿಕ ದೂರುಗಳು ಹಾಗೂ ಪತ್ರಿಕಾವರದಿಗಳನ್ನು ಆಧರಿಸಿ, ರಾಜ್ಯ ಹೆದ್ದಾರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಅಸಡ್ಡೆಯ ಕಾಮಗಾರಿಯಿಂದ ಉಂಟಾಗುವ ಎಲ್ಲ ನಷ್ಟಗಳನ್ನು ಗುತ್ತಿಗೆದಾರರೇ ಭರಿಸಬೇಕಾಗುತ್ತದೆ. ಚುನಾವಣೆ ಬಳಿಕ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು. ಉಮ್ಮರ್ ಜಿ. ಕಬಕ