Advertisement

ತ್ರಾಸಿಲ್ಲದೆ ಬೆಳೆಯುವ ಬೆಂಡೆ ಕೃಷಿಗೆ ಹಲವು ಕೀಟ ಬಾಧೆ ಸಮಸ್ಯೆ

08:08 PM Aug 10, 2020 | mahesh |

ಉಡುಪಿ: ಕರಾವಳಿ ಭಾಗದಲ್ಲಿ ಬೆಳೆಯುವ ತರಕಾರಿ ಬೆಳೆಯಲ್ಲಿ ಬೆಂಡೆಯೂ ಒಂದು ಮುಖ್ಯ ಬೆಳೆಯಾಗಿದ್ದು, ಈ ಬೆಳೆಯನ್ನು ಯಾವುದೇ ಸಮಸ್ಯೆಯಿಲ್ಲದೆ ವೈಜ್ಞಾನಿಕವಾಗಿ ಬೆಳೆಸಿ ಉತ್ತಮ ಲಾಭ ಪಡೆಯಬಹುದಾಗಿದೆ. ಆದರೆ ಬೆಂಡೆ ಬೆಳೆಗೆ ಬರುವ ಬಿಳಿ ಹಾಗೂ ಹಳದಿ ರೋಗದಿಂದಾಗಿ ರೈತರು ಹೈರಾಣಾಗಿದ್ದಾರೆ. ಬೆಂಡೆಯನ್ನು ಎಲ್ಲ ವಿಧವಾದ ಮಣ್ಣಿನಲ್ಲಿ ಬೆಳೆಯಬಹುದಾದರೂ ನೀರು ಬಸಿದು ಹೋಗುವಂತಹ ಮರಳು ಮಿಶ್ರಿತ ಮಣ್ಣು ಉತ್ತಮವಾಗಿದೆ. ಬಿತ್ತನೆಗೆ ಮೈದಾನ ಒಣ ಪ್ರದೇಶಗಳಲ್ಲಿ ಜೂನ್‌- ಜುಲೈ ಮತ್ತು ಜನವರಿ- ಫೆಬ್ರವರಿ ಸೂಕ್ತ ಕಾಲ. ಕರಾವಳಿಯಲ್ಲಿ ಜೂನ್‌-ಜುಲೈ ಸೂಕ್ತ ಸಮಯ.

Advertisement

ವಿವಿಧ ತಳಿಗಳು
ಬೆಂಡೆಯಲ್ಲಿ ಐದು ತಳಿಗಳಿವೆ. ಪೂಸಾ ಸವಾನಿ, ಅರ್ಕಾ ಅಭಯ್‌, ಅರ್ಕಾ ಅನಾಮಿಕ, ವೈಟ್‌ ವೆಲ್ವೆಟ್‌, ಪರ್ಬಾನಿ ಕಾಂತ್ರಿ ತಳಿ. ಪೂಸಾ ಸವಾನಿ ತಳಿ ಎಲ್ಲ ವಲಯಗಳಿಗೆ ಶಿಫಾರಸ್ಸು ಮಾಡಲಾಗಿದೆ. ಅರ್ಕಾ ಅನಾಮಿಕ ತಳಿಗೆ ನಂಜು ರೋಗವನ್ನು ತಡೆದುಕೊಳ್ಳುವ ಶಕ್ತಿ ಇದೆ. ಪರ್ಬಾನಿ ಕ್ರಾಂತಿ ತಳಿಯು ಹಳದಿ ನಂಜುರೋಗಕ್ಕೆ ನಿರೋಧಕ ಶಕ್ತಿಯನ್ನು ಹೊಂದಿದ್ದು, ಈ ತಳಿಯು ಹೆಚ್ಚು ಇಳುವರಿಯನ್ನು ಕೊಡುತ್ತದೆ. ವೈಟ್‌ ವೆಲ್ವೆಟ್‌ (ಹಾಲುಬೆಂಡೆ) ರಾಜ್ಯದಲ್ಲಿ ಅತ್ಯಂತ ಜನಪ್ರಿಯವಾಗಿದ್ದು, ಹಳದಿ ರೋಗಕ್ಕೆ ತುತ್ತಾಗುತ್ತದೆ.

ಬಿತ್ತನೆ ಹಾಗೂ ಕಳೆ ನಿರ್ವಹಣೆ ಹೇಗೆ?
ಬಿತ್ತನೆ ಮಾಡಲು ಭೂಮಿ ಸಿದ್ಧ ಮಾಡಿದ ಅನಂತರ ಸಾವಯವ ಗೊಬ್ಬರ ಹಾಗೂ ಶೇ.50ರಷ್ಟು ಸಾರಜನಕ ಹಾಗೂ ಪೂರ್ಣ ಪ್ರಮಾಣದ ರಂಜಕ, ಪೊಟ್ಯಾಷ್‌ ಮಣ್ಣಿಗೆ ಸೇರಿಸಬೇಕು. ಬೀಜ ಚೆನ್ನಾಗಿ ಮೊಳಕೆ ಬರಲು ಬಿತ್ತನೆಗೆ ಮುಂಚೆ 15 ತಾಸು ನೀರಿನಲ್ಲಿ ನೆನೆಸಬೇಕು. ಬೀಜವನ್ನು 60 ಸೆ.ಮೀ. ಅಂತರದ ಸಾಲುಗಳಲ್ಲಿ 30 ಸೆ.ಮೀ. ಅಂತರದಲ್ಲಿ ಬಿತ್ತನೆ ಮಾಡಬೇಕು. ನಾಲ್ಕು ವಾರದ ಬಳಿಕ ಉಳಿದ ಶೇ.50ರಷ್ಟು ಸಾರಜನಕವನ್ನು ಮೇಲು ಗೊಬ್ಬರವಾಗಿ ಹಾಕಬೇಕು. ವಾತಾವರಣಕ್ಕೆ ಅನುಗುಣವಾಗಿ 5ರಿಂದ 7 ದಿನಗಳಿಗೊಮ್ಮೆ ನೀರು ಉಣಿಸಬೇಕು. ಬೀಜ ಬಿತ್ತಿದ ದಿನದ ಅಥವಾ ಮರು ದಿನ ಹೆಕ್ಟೇರ್‌ಗೆ 30 ಲೀ. ಬೂಟಾಕ್ಲೋರ್‌ 50 ಇ.ಸಿ. 1000 ಲೀ. ನೀರಿನಲ್ಲಿ ಬೆರೆಸಿ ಮಣ್ಣಿನ ಮೇಲೆ ಸಿಂಪಡಿಸಿದರೆ ಕಳೆಯಿಂದ ಮುಕ್ತವಾಗಿರುವಂತೆ ನೋಡಿಕೊಳ್ಳಬಹುದು.

ಗಿಡಕ್ಕೆ ಕಾಡುವ ರೋಗಗಳು
ಹಳದಿ ನಂಜು ರೋಗಕ್ಕೆ ತುತ್ತಾದ ಬೆಂಡೆ ಗಿಡಗಳ ಎಲೆಗಳು ಹಳದಿ ಬಣ್ಣದಿಂದ ಕೂಡಿದ್ದು, ಕ್ರಮೇಣ ಪೂರ್ತಿ ಗಿಡ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಗಿಡದ ಬೆಳವಣಿಗೆ ಕುಂಠಿತಗೊಂಡು ಇಳುವರಿ ಕಡಿಮೆಯಾಗುತ್ತವೆ. ಬೂದಿ ರೋಗದಲ್ಲಿ ಎಲೆಗಳ ಮೇಲೆ ಬಿಳಿ ಶಿಲೀಂಧ್ರ ಬೆಳವಣಿಗೆ ಕಂಡು ಬರುತ್ತದೆ. ರೋಗದ ತೀವ್ರತೆ ಹೆಚ್ಚಾದಾಗ ಎಲೆಗಳು ಒಣಗುತ್ತವೆ. ಎಲೆ ಚುಕ್ಕೆ ರೋಗವು ವೃತ್ತಾಕಾರದ ಮತ್ತು ಉಂಗುರಾಕಾರದಲ್ಲಿ ಕಾಣಿಸಿಕೊಳ್ಳುತ್ತದೆ. ಗಂಟು ಬೇರು ರೋಗಕ್ಕೆ ತುತ್ತಾದ ಗಿಡದ ಬೆಳವಣಿಗೆ ಕುಂಠಿತಗೊಳ್ಳುತ್ತವೆ. ಅಂತಹ ಗಿಡಗಳನ್ನು ಕಿತ್ತು ನೋಡಿದಾಗ ಬೇರುಗಳಲ್ಲಿ ಗಂಟುಗಳಾಗಿ ಕಾಣುತ್ತವೆ. ಇದಕ್ಕೆ ಮುಖ್ಯ ಕಾರಣ ಅಕ್ಕ ಪಕ್ಕದ ಕಳೆ ಗಿಡಗಳಲ್ಲಿನ ರಸದೊಂದಿಗೆ ವೈರಸ್‌ನ್ನು ಹೀರಿ ಬರುವ ಕೀಟಗಳು ನೇರವಾಗಿ ಬೆಂಡೆ ಗಿಡಗಳಲ್ಲಿ ಕುಳಿತು ರಸ ಹೀರಿದರೆ ಇಂತಹ ಸಂದರ್ಭದಲ್ಲಿ ವೈರಸ್‌ ಗಿಡಕ್ಕೆ ಪ್ರವೇಶಿಸುತ್ತದೆ ಎಂದು ಹಿರಿಯ ಕೃಷಿ ವಿಜ್ಞಾನಿ ಮಾಹಿತಿ ನೀಡಿದ್ದಾರೆ.

ಸಾವಯವ ಉತ್ಪನ್ನವಾಗಬೇಕೆ?
ಯಾವುದೇ ಬೆಳೆಗೆ ಕೆಮಿಕಲ್‌ ರಸಗೊಬ್ಬರ ಮತ್ತು ಕೀಟನಾಶಕವನ್ನು ಹಾಕುವ ಬದಲು ಹಸಿರೆಲೆ ಗೊಬ್ಬರ, ಗೋಮೂತ್ರ ಸಿಂಪಡನೆ ಮಾಡಿದರೆ ಸಾವಯವ ಉತ್ಪನ್ನವಾಗುತ್ತದೆ. ಕೆಮಿಕಲ್‌ ರಸಗೊಬ್ಬರ ಹಾಕುವುದರಿಂದ ಮಣ್ಣಿನ ಫ‌ಲವತ್ತತೆಯೂ ಕ್ರಮೇಣ ಇಳಿಮುಖವಾಗಿ ಬರಡಾಗುತ್ತದೆ.

Advertisement

ರೋಗದಿಂದ ಮುಕ್ತಿ ಹೇಗೆ ?
ಹಳದಿನಂಜು ರೋಗ: ಈ ರೋಗಬಾಧಿತ ಗಿಡಗಳನ್ನು ಕಿತ್ತು ನಾಶ ಪಡಿಸಬೇಕು. ಹಳದಿ ನಂಜುರೋಗ ಹರಡುವ ಕೀಟಗಳ ನಿಯಂತ್ರಣಕ್ಕೆ 1.7 ಮಿ.ಲೀ. ಡೈಮಿಥೋಯೆಟ್‌ ಅಥವಾ 0.25 ಮಿ. ಇಮಿಡಾಕ್ಲೋಪ್ರಿಡ್‌ ಪ್ರತಿ ಲೀಟರ್‌ ನೀರಿನೊಂದಿಗೆ ಬೆರಸಿ ಸಿಂಡಿಸಬೇಕು. ಈ ರೋಗವನ್ನು ಸಂಪೂರ್ಣವಾಗಿ ತಡೆಗಟ್ಟಲು 15 ದಿನಗಳ ಅನಂತರ ಮತ್ತೆ ಕೀಟನಾಶ ಸಿಂಪಡನೆ ಮಾಡಬೇಕು.

ಬೂದು ರೋಗ: ಈ ಬೂದು ರೋಗ ಕಂಡು ಬಂದಲ್ಲಿ 1 ಮಿ.ಲೀ. ಡೈಪೆನ್‌ ಕೊನಾಮೋಲನ್ನು ಪ್ರತಿ ಲೀ. ನೀರಿಗೆ ಬೆರೆಸಿ 15 ದಿನಗಳಿಗೊಮ್ಮೆ 3 ಸಲ ಸಿಂಪಡಿಸಬೇಕು.

ಎಲೆ ಚುಕ್ಕಿ ರೋಗ:
ಸೆರ್ಕೋಸ್ಟೋರಾ ಎಲೆ ಚುಕ್ಕೆ ರೋಗ ಕಂಡು ಬಂದಲ್ಲಿ 1 ಗ್ರಾ. ಕಾರ್ಬಂಡೈಜಿಮ್‌ ಪ್ರತಿ ಲೀ. ನೀರಿನಲ್ಲಿ ಬೆರಸಿ ಸಿಂಪಡಿಸಬೇಕು. ಪ್ರತಿ ಹೆಕ್ಟೇರ್‌ಗೆ 450ರಿಂದ 530 ಲೀಟರ್‌ ಸಿಂಪಡಣಾ ದ್ರಾವಣ ಬೇಕಾಗುತ್ತದೆ.

ಗಂಟು/ ಜಂತು ಬೇರು: ಮಣ್ಣಿಗೆ ಬೇವಿನ ಹಿಂಡಿ ಸೇರಿಸಬೇಕು. ಬೆಳೆ ಪರಿವರ್ತನೆ ಮಾಡಬೇಕು ಎಂದು ಕೃಷಿ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ಬೆಂಡೆ ಬೀಜ ಬಿತ್ತನೆ ಮಾಡುವಾಗ ಸರಿಯಾದ ಕ್ರಮ ವಹಿಸಬೇಕು. ಅಗತ್ಯವಿರುವ ಪ್ರಮಾಣದಲ್ಲಿ ಗೊಬ್ಬರ ಹಾಕಿದಾಗ ಗಿಡಕ್ಕೆ ವೈರಸ್‌ಗಳ ವಿರುದ್ಧ ಹೋರಾಡುವ ಶಕ್ತಿ ಹೆಚ್ಚಿಸುತ್ತದೆ. ರೋಗಗಳಿಗೆ ತುತ್ತಾಗುವ ಸಾಧ್ಯತೆ ಕಡಿಮೆಯಾಗುತ್ತದೆ.
-ಡಾ| ಧನಂಜಯ, ಹಿರಿಯಕೃಷಿ ವಿಜ್ಞಾನಿ, ಕೆವಿಕೆ ಬ್ರಹ್ಮಾವರ

ರೈತಸೇತು ಸಹಾಯವಾಣಿ ಕೃಷಿ ಸಮಸ್ಯೆಗಳಿದ್ದರೆ ತಿಳಿಸಿ
ರೈತರು ತಮ್ಮಲ್ಲಿದ್ದ ಹೆಚ್ಚಿನ ಬೆಳೆಗಳನ್ನು ಮಾರಾಟ ಮಾಡಿ ಈಗ ಮುಂಗಾರು ಮಳೆಯೊಂದಿಗೆ ಮತ್ತೆ ಕೃಷಿ ಕಾಯಕಕ್ಕೆ ಮರಳಿದ್ದಾರೆ. ಆದುದರಿಂದ ಇನ್ನು ಕೆಲವು ಸಮಯ ರೈತ ಸೇತು ಅಂಕಣದಲ್ಲಿ ಕೃಷಿ ಉತ್ಪನ್ನಗಳ ವಿವರ ಪ್ರಕಟವಾಗುವುದಿಲ್ಲ. ಆದರೆ ಪ್ರತಿ ವಾರ ರೈತಸೇತು ಅಂಕಣದಲ್ಲಿ ಕೃಷಿ ಪೂರಕ ಮಾಹಿತಿ ಪ್ರಕಟವಾಗುತ್ತದೆ. ನಿಮ್ಮಲ್ಲಿಯೂ ಯಾವುದಾದರೂ ಸಂಶಯಗಳಿದ್ದರೆ, ಪರಿಣತರ ಅಭಿಪ್ರಾಯ ಅಗತ್ಯವಿದ್ದರೆ ಅದನ್ನು ಬರೆದು ಕಳುಹಿಸಬಹುದು. ತಜ್ಞರ ಬಳಿ ಸಮಾಲೋಚಿಸಿ ಅದಕ್ಕೆ ಪರಿಹಾರ ಸೂಚಿಸಲಾಗುವುದು. ಈ ರೀತಿ ಕಳುಹಿಸುವಾಗ ನಿಮ್ಮ ಹೆಸರು, ಊರು, ಸಂಪರ್ಕ ಸಂಖ್ಯೆ ನಮೂದಿಸಿ.

ವಾಟ್ಸಪ್‌ ಸಂಖ್ಯೆ 76187 74529

Advertisement

Udayavani is now on Telegram. Click here to join our channel and stay updated with the latest news.

Next