ಜಮ್ಮು-ಕಾಶ್ಮೀರ:ಬಾಲಿವುಡ್ ನ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಸತ್ಯಕ್ಕೆ ದೂರವಾದ ಹಲವಾರು ಅಂಶಗಳನ್ನು ಬಿಂಬಿಸಲಾಗಿದೆ ಎಂದು ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ ಕಾರ್ಯಾಧ್ಯಕ್ಷ ಒಮರ್ ಅಬ್ದುಲ್ಲಾ ಆರೋಪಿಸಿದ್ದಾರೆ.
ಇದನ್ನೂ ಓದಿ:ರಾಷ್ಟ್ರೀಯ ತಂಡದ ಬದಲು ಐಪಿಎಲ್ ಆಯ್ಕೆ ಮಾಡಿದ ದ.ಆಫ್ರಿಕಾದ 5 ಆಟಗಾರರು; ಟೆಸ್ಟ್ ತಂಡದಿಂದ ಔಟ್
ಸುದ್ದಿಗಾರರ ಜತೆ ಮಾತನಾಡಿದ ಒಮರ್, ಇದೊಂದು ಸಿನಿಮಾನೋ ಅಥವಾ ಸಾಕ್ಷ್ಯಚಿತ್ರವೋ ಎಂಬುದು ಸ್ಪಷ್ಟವಾಗಿಲ್ಲ. ಈ ಸಿನಿಮಾವನ್ನು ಸತ್ಯ ಘಟನೆ ಆಧಾರದ ಮೇಲೆ ಚಿತ್ರೀಕರಿಸಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.
ಆದರೆ ಸಿನಿಮಾದಲ್ಲಿ ಹಲವಾರು ಅಂಶಗಳು ಸುಳ್ಳಿನಿಂದ ಕೂಡಿದೆ. ಅದರಲ್ಲಿಯೂ ಮುಖ್ಯವಾಗಿ ಅಂದು ರಾಜ್ಯದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಸರ್ಕಾರ ಅಧಿಕಾರದಲ್ಲಿತ್ತು ಎಂಬುದು ದೊಡ್ಡ ಸುಳ್ಳು. 1990ರಲ್ಲಿ ಜಮ್ಮು-ಕಾಶ್ಮೀರದಿಂದ ಕಾಶ್ಮೀರಿ ಪಂಡಿತರು ವಲಸೆ ಹೋದ ಸಂದರ್ಭದಲ್ಲಿ ರಾಜ್ಯಪಾಲರ ಆಡಳಿತವಿತ್ತು. ಕೇಂದ್ರದಲ್ಲಿ ವಿಪಿ ಸಿಂಗ್ ನೇತೃತ್ವದ ಸರ್ಕಾರವಿತ್ತು. 90ರ ದಶಕದಲ್ಲಿ ರಾಜ್ಯಪಾಲರ ಆಡಳಿತದ ನಂತರ ಆರು ವರ್ಷಗಳ ಕಾಲ ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿವಿತ್ತು ಎಂದು ಒಮರ್ ತಿಳಿಸಿದ್ದಾರೆ.
1990ರ ದಶಕದಲ್ಲಿ ಜಮ್ಮು-ಕಾಶ್ಮೀರದಿಂದ ಕೇವಲ ಕಾಶ್ಮೀರ ಪಂಡಿತರ ವಲಸೆಯಾಗಲಿ, ಹತ್ಯೆಯಾಗಲಿ ನಡೆದಿಲ್ಲ. ಮುಸ್ಲಿಮ್, ಸಿಖ್ಖರು ಹತ್ಯೆಗೀಡಾಗಿದ್ದಾರೆ. ಸಿಖ್ಖ, ಮುಸ್ಲಿಮರು ಕೂಡಾ ಕಾಶ್ಮೀರದಿಂದ ವಲಸೆ ಹೋಗಿದ್ದು, ಈವರೆಗೂ ವಾಪಸ್ ಆಗಿಲ್ಲ ಎಂದು ಒಮರ್ ಹೇಳಿದರು.
ನ್ಯಾಷನಲ್ ಕಾನ್ಫರೆನ್ಸ್ ಅಧಿಕಾರಕ್ಕೆ ಬಂದ ಮೇಲೆ ಕಾಶ್ಮೀರ ಪಂಡಿತರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಸತತವಾಗಿ ಪ್ರಯತ್ನಿಸಿರುವುದಾಗಿ ತಿಳಿಸಿದರು.