Advertisement

ಹಲವು ತಾಸು ಟ್ರಾಫಿಕ್‌ ಜಾಮ್‌; ಜನರ ಪರದಾಟ !

10:37 PM Apr 08, 2019 | Sriram |

ಮಹಾನಗರ: ನಗರದಲ್ಲಿ ಸೋಮವಾರ ದಿಢೀರನೆ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಕೆಲವು ಹೊತ್ತು ಟ್ರಾಫಿಕ್‌ ಕಿರಿಕಿರಿ ಎದುರಿಸಬೇಕಾಗಿ ಬಂತು. ನಗರದ ಪ್ರಮುಖ ರಸ್ತೆಗಳಲ್ಲಿ ಬೆಳಗ್ಗಿನಿಂದ ಮಧ್ಯಾಹ್ನದವರೆಗೂ ಜನರು ಟ್ರಾಫಿಕ್‌ ಜಾಮ್‌ ನಡುವೆ ಸಿಲುಕಿಕೊಂಡು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

Advertisement

ನಗರದ ಬಲ್ಮಠ, ಜ್ಯೋತಿ, ಬಂಟ್ಸ್‌ಹಾಸ್ಟೆಲ್‌, ಕರಂಗಲ್ಪಾಡಿ, ಪಿವಿಎಸ್‌, ಲಾಲ್‌ಬಾಗ್‌ ವ್ಯಾಪ್ತಿಯಲ್ಲಿ ಸೋಮವಾರ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಸಂಚಾರ ಸಮಸ್ಯೆ ಎದುರಾಗಿ, ವಾಹನಗಳು ನಿಧಾನವಾಗಿ ಸಂಚರಿ ಸುವಂತಾಯಿತು. ಹೀಗಾಗಿ ನಿಗದಿತ ಕೆಲಸಗಳನ್ನು ಮಾಡುವವರು ರಸ್ತೆಯಲ್ಲಿ ಟ್ರಾಫಿಕ್‌ ಸಮಸ್ಯೆಯಿಂದ ಪರದಾಡುವಂತಾಯಿತು. ಮಧ್ಯಾಹ್ನದ ಅನಂತರ ಟ್ರಾಫಿಕ್‌ ಸಮಸ್ಯೆ ಸ್ವಲ್ಪ ಕಡಿಮೆಯಾಯಿತು. ಯಾವ ಕಾರಣಕ್ಕಾಗಿ ಸಂಚಾರ ದಟ್ಟಣೆ ಎಂಬುದಕ್ಕೆ ಸಂಚಾರಿ ಪೊಲೀಸರಲ್ಲಿ ಮಾಹಿತಿಯಿಲ್ಲ.

ಕರಂಗಲ್ಪಾಡಿ: ಕೆಟ್ಟುನಿಂತ ಬಸ್‌
ಕರಂಗಲ್ಪಾಡಿ ಸರ್ಕಲ್‌ನಲ್ಲಿ ಸರಕಾರಿ ಬಸ್ಸೊಂದು ಹಾಳಾದ ಕಾರಣದಿಂದ ಕರಂಗಲ್ಪಾಡಿ, ಬಂಟ್ಸ್‌ಹಾಸ್ಟೆಲ್‌ ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ಎದುರಾಗಿತ್ತು. ಜತೆಗೆ, ಬಹುತೇಕ ಜನರು ಯುಗಾದಿ ಹಿನ್ನೆಲೆಯಲ್ಲಿ ಶನಿವಾರದ, ರವಿವಾರದ ರಜೆ ಮುಗಿಸಿದ ಬಳಿಕ ಸೋಮವಾರ ನಗರಕ್ಕೆ ಆಗಮಿಸಿದ ಕಾರಣಕ್ಕೆ ಸಂಚಾರ ದಟ್ಟಣೆ ಎದುರಾಗಿರಬಹುದು ಎಂದು ಅಂದಾಜಿಸಲಾಗಿದೆ.

ಸಂಚಾರ ದಟ್ಟಣೆ ಕಾರಣದಿಂದ ಕರಂಗಲ್ಪಾಡಿಯಿಂದ ಜ್ಯೋತಿಗೆ ವಾಹನಗಳು ತಲುಪಲು ಅರ್ಧ ತಾಸು ಬೇಕಾದರೆ, ಬಲ್ಮಠ-ಜ್ಯೋತಿ ರಸ್ತೆಯಲ್ಲಿಯೂ ಇದೇ ಪರಿಸ್ಥಿತಿ ಉಂಟಾಯಿತು. ಎರಡೂ ಭಾಗಗಳಲ್ಲಿ ವಾಹನಗಳ ಸರತಿ ಸಾಲಿನಿಂದ ಪ್ರಯಾಣಿಕರು ಹೈರಾಣಾದರು. ವಾಹನಗಳು ಸಾಲುಗಟ್ಟಿ ನಿಂತಿರುವ ದೃಶ್ಯವೇ ಕಂಡುಬಂತು.

ರೈಲು ಮಿಸ್‌ !
ಸಂಚಾರ ದಟ್ಟಣೆಯಿಂದಾಗಿ ಬೇರೆ ಬೇರೆ ಕಡೆಗಳಿಗೆ ಪ್ರಯಾಣಿಸುವವರು ರಸ್ತೆಯಲ್ಲಿ ಬಾಕಿಯಾಗಿ ಪರದಾ ಡಿದರು. ಬೋಂದೆಲ್‌ ನಿವಾಸಿ ಕಿಶೋರ್‌ ಎಂಬವರು ಬೆಳಗ್ಗೆ 11ರ ಸುಮಾರಿಗೆ ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ರೈಲಿನಲ್ಲಿ ಪ್ರಯಾಣಿಸುವವರಿದ್ದರು. ಆದರೆ, ಕರಂಗಲ್ಪಾಡಿ, ಬಂಟ್ಸ್‌ಹಾಸ್ಟೆಲ್‌, ಜ್ಯೋತಿ ಭಾಗದಲ್ಲಿ ಸಂಚಾರ ದಟ್ಟಣೆ ಎದುರಾದ ಕಾರಣದಿಂದ 10.30ಕ್ಕೆ ಕರಂಗಲ್ಪಾಡಿಯಲ್ಲಿ ಇದ್ದರೂ ಜ್ಯೋತಿಗೆ ತಲುಪಲು 10.55 ಆಗಿತ್ತು. ಬಳಿಕ ರೈಲು ನಿಲ್ದಾಣಕ್ಕೆ ತೆರಳುವಾಗ ರೈಲು ಹೋಗಿತ್ತು.

Advertisement

ವಾಹನ ತಪಾಸಣೆ; ಸಂಚಾರ ಸಮಸ್ಯೆ!
ಚುನಾವಣೆ ಹಿನ್ನೆಲೆಯಲ್ಲಿ ಆಯೋಗದ ಅಧಿಕಾರಿಗಳು ನಗರ ವ್ಯಾಪ್ತಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾರೆ. ವಿವಿಧ ಕಡೆಗಳಲ್ಲಿ ರಸ್ತೆಯಲ್ಲಿ ಬ್ಯಾರಿಕೇಡ್‌ ಹಾಕಿ ವಾಹನ ತಪಾಸಣೆ ಮಾಡುತ್ತಿದ್ದಾರೆ. ನಂತೂರು ಜಂಕ್ಷನ್‌ನಲ್ಲಿ ಇದೇ ರೀತಿ ಅಧಿಕಾರಿಗಳು ತಪಾಸಣೆ ನಡೆಸುತ್ತಿರುವ ಕಾರಣದಿಂದ ವಾಹನ ದಟ್ಟಣೆ ಸಮಸ್ಯೆ ಎದುರಾಗುತ್ತಿದೆ. ಬೇರೆ ಬೇರೆ ಭಾಗಗಳಿಂದ ಮಂಗಳೂರಿಗೆ ವಾಹನಗಳು ಬರುವ ಕಾರಣದಿಂದ ನಂತೂರು ಜಂಕ್ಷನ್‌ನಲ್ಲಿಯೇ ವಾಹನ ತಪಾಸಣೆ ನಡೆಸುತ್ತಿರುವ ಕಾರಣದಿಂದ ವಾಹನಗಳ ಸುಗಮ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ ಎಂಬುದು ಪ್ರಯಾಣಿಕರ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next