ಆಳಂದ: ಖಜೂರಿ ಹೊಲಗಳ ಮತ್ತು ಗ್ರಾಮ ಸಂರ್ಪಕ ಕಲ್ಪಿಸುವ ಮೂರು ರಸ್ತೆಗಳನ್ನು ಕೈಗೊಳ್ಳದೇ ನೇರವಾಗಿ ಕಾಮಗಾರಿಯಾಗಿದೆ ಎಂದು ಖರ್ಚಿನ ನಾಮಫಲಕ ಹಾಕಿರುವ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯ ರೈತರು ಮತ್ತು ಮುಖಂಡರು, ಅಧಿಕಾರಿಗಳು ಸ್ಥಳಕ್ಕೆ ಬಂದು ಈ ಕುರಿತು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ರವಿವಾರ ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ ಸಾವಳೇಶ್ವರ ಅವರು, ಖಜೂರಿಯಲ್ಲಿನ ರಸ್ತೆಯೊಂದಕ್ಕೆ ಕಾಮಗಾರಿ ಮಾಡದೇ ಕಾಮಗಾರಿಯಾದ ಐದು ಲಕ್ಷ ರೂಪಾಯಿ ಖರ್ಚಿನ ನಾಮಫಲಕ ಹಾಕಿರುವುದನ್ನು ತೋರಿಸಿ ಅವರು ಮಾತನಾಡಿದರು.
ಮಳೆಗಾಲದಲ್ಲಿ ರೈತರ ಹೊಲಗಳಿಗೆ ಹೋಗಲು ರಸ್ತೆ ಸಮಸ್ಯೆಯಾಗಿದೆ ಎಂದು ಖಜೂರಿಯಲ್ಲಿ ತಲಾ ಎರಡ್ಮೂರು ಸಾವಿರ ರೂ. ಚಂದಾಹಾಕಿ ಸ್ವತಃ ರೈತರೆ ರಸ್ತೆ ಮಾಡಿಕೊಂಡಿದ್ದಾರೆ. ಜಿಪಂನಿಂದ ರಸ್ತೆ ಕೈಗೊಳ್ಳುವಂತೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಅಧಿಕಾರಿಗಳು ನೋಡೋಣಾ ಮಾಡೋಣಾ ಎಂದು ಹಾರಿಕೆ ಉತ್ತರ ನೀಡಿದ್ದರು. ಇದರಿಂದ ಬೇಸತ್ತು ರೈತರು ಸ್ವಂತ ಖರ್ಚಿನಿಂದ ಚಂದಾಕೂಡಿಸಿ ಕಚ್ಚಾ ರಸ್ತೆ ಮಾಡಿಕೊಂಡಿದ್ದಕ್ಕೆ ಈಗ ಅಧಿಕಾರಿಗಳು ನೇರವಾಗಿ ಬಂದು ಜಿಪಂನಿಂದ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದ ವೆಚ್ಚದಲ್ಲಿ ರಸ್ತೆ ಕಾಮಗಾರಿಯಾಗಿದೆ ಎಂದು ಹಲವು ಕಡೆ ಐದೈದು ಲಕ್ಷ ರೂ. ಖರ್ಚಿನ ಫಲಕಹಾಕಿದ್ದಾರೆ ಎಂದು ಆಪಾದಿಸಿದರು.
ಮಧ್ಯಾಹ್ನ ಯಾರೂ ಇಲ್ಲದ ಹೊತ್ತಿನಲ್ಲಿ ಒಂದೇ ಜಾಗದಲ್ಲಿ ನೆಟ್ಟ ನಾಮ ಫಲಕದಲ್ಲಿ ಹಲವು ರಸ್ತೆಯ ಕಾಮಗಾರಿ ಕುರಿತ ಫಲಕಕ್ಕೆ ಮಾಹಿತಿಯುಳ್ಳ ಸ್ಟಿಕರ್ ಹಚ್ಚುವುದು, ತೆಗೆಯುವುದು ಮಾಡಿ ಭಾವಚಿತ್ರ ತೆಗೆದುಕೊಂಡಿದ್ದಾರೆ. ಕಾಮಗಾರಿ ಮಾಡದೇ, ಮಾಡಲಾಗಿದೆ ಎನ್ನುವ ಫಲಕ ಹಾಕಿದ್ದಾರೆ. ಕೂಡಲೇ ಸಂಬಂಧಿತ ಅಧಿಕಾರಿಗಳು ಸ್ಥಳಕ್ಕೆ ಬಂದು ವಿವರಣೆ ನೀಡಬೇಕು ಎಂದು ಸಾವಳೇಶ್ವರ ಜೊತೆ ಧ್ವನಿಗೂಡಿಸಿದ ಹಿರಿಯ ಮುಖಂಡ ಭೀಮರಾವ್ ಢಗೆ, ಗುಣಮಂತ ಢಗೆ, ನಾಗಪ್ಪ ಅಲ್ದಿ, ಚಂದ್ರಕಾಂತ ಆಳಂಗೆ, ಸಂಜುಕುಮಾರ ಚಂಗಳೆ, ಶ್ರೀಶೈಲ ವಾನೆಗಾಂವ, ಶ್ರೀಶೈಲ ಹೆಬಳಿ, ಶಾಮರಾವ್ ಹೆಬಳೆ ಇತರರು ಈ ಕುರಿತು ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಖಜೂರಿಯಿಂದ ತಡೋಳಾ 2 ಕಿ.ಮೀ ರಸ್ತೆ 5 ಲಕ್ಷ ರೂ., ಖಜೂರಿಯಿಂದ ಬಬಲೇಶ್ವರ ರಸ್ತೆ ಅರ್ಧ ಕಿ.ಮೀ ರಸ್ತೆಗೆ 2.50ಲಕ್ಷ ರೂ., ಖಜೂರಿಯಿಂದ ಮಟಕಿ ರಸ್ತೆ 5-6 ಕಿ.ಮೀ ರಸ್ತೆಗೆ 5ಲಕ್ಷ ರೂ.ಗಳ ಫಲಕ ಹಾಕಿದ್ದಾರೆ. ಆದರೆ ಮಳೆಗಾಲದಲ್ಲಿ ರಸ್ತೆ ತೊಂದರೆ ಆಗುತ್ತಿದ್ದರಿಂದ ರೈತರು ಜಮೀನಿಗೆ ಅನುಸಾರ 2-3 ಸಾವಿರ ರೂ. ಚಂದಾಹಾಕಿ ಸಾಮೂಹಿಕವಾಗಿ ರಸ್ತೆ ಮಾಡಿಕೊಂಡಿದ್ದಾರೆ. ಆದರೆ ಜಿಲ್ಲಾ ಪಂಚಾಯತ್ ಅಧಿಕಾರಿಗಳು ನಾಮ ಫಲಕ ಹಾಕಿರುವುದು ಆಶ್ಚರ್ಯವಾಗಿದೆ ಎಂದಿದ್ದಾರೆ. ಈ ಕುರಿತು ಜಿಪಂ ಸಿಇಒ ಸೂಕ್ತ ತನಿಖೆ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸಂಬಂಧಿತ ಮೇಲಧಿಕಾರಿಗಳಿಗೆ ಹಾಗೂ ಸಚಿವರಿಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.