Advertisement

ದ.ಕ.: ಬದಲಾಗಲಿದೆಯೇ ಪಕ್ಷಾಧ್ಯಕ್ಷಗಿರಿ?

01:33 AM Nov 26, 2019 | Team Udayavani |

ಮಂಗಳೂರು: ಪಾಲಿಕೆ ಚುನಾವಣೆಯ ಬಳಿಕ ಎರಡು ಪ್ರಮುಖ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿಯ ಜಿಲ್ಲಾಧ್ಯಕ್ಷ ಸ್ಥಾನ ಬದಲಾವಣೆ ಪ್ರಕ್ರಿಯೆ ಆರಂಭವಾಗಿದೆ. ಎರಡೂ ಕಡೆ ಹಲವು ಆಕಾಂಕ್ಷಿಗಳಿದ್ದು, ವರಿಷ್ಠರ ಗಮನ ಸೆಳೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ.

Advertisement

ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ 10 ಜಿಲ್ಲೆಗಳ ಜಿಲ್ಲಾ ಸಮಿತಿಗಳಿಗೆ ನೂತನ ಅಧ್ಯಕ್ಷರನ್ನು ನೇಮಿಸಲು ಎರಡು ತಿಂಗಳ ಹಿಂದೆಯೇ ಕೆಪಿಸಿಸಿ ಪ್ರಕ್ರಿಯೆ ಆರಂಭಿಸಿತ್ತು. ಕೆಪಿಸಿಸಿ ಮಾಜಿ ಕಾರ್ಯದರ್ಶಿಸೂರಜ್‌ ಹೆಗ್ಡೆ ಸೆ. 15ರಂದು ಜಿಲ್ಲೆಗೆ ಆಗಮಿಸಿ ಸ್ಥಳೀಯ ನಾಯಕರ ಸಭೆ ನಡೆಸಿ ವರದಿ ಸಲ್ಲಿಸಿದ್ದರು. ಪಾಲಿಕೆ ಚುನಾವಣೆಯಿದ್ದುದರಿಂದ ನೂತನ ಅಧ್ಯಕ್ಷರ ಆಯ್ಕೆಯನ್ನು ಮುಂದೂಡಲಾಗಿತ್ತು.

ಈಗ ಪಾಲಿಕೆ ಚುನಾವಣೆ ಮುಗಿದಿದ್ದು, ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರಮುನ್ನಲೆಗೆ ಬಂದಿದೆ. ಸ್ಥಳೀಯ ನಾಯಕರು ನೀಡಿರುವ ಅಭಿಪ್ರಾಯಗಳನ್ನು ಪರಿಗಣಿಸಿ ಕೆಪಿಸಿಸಿ ಸದ್ಯದಲ್ಲೇ ನೂತನ ಅಧ್ಯಕ್ಷರ ನೇಮಕ ಮಾಡುವ ಸಾಧ್ಯತೆಗಳಿವೆ.

ಹಾಲಿ ಅಧ್ಯಕ್ಷ ಹರೀಶ್‌ ಕುಮಾರ್‌ 2017ರಲ್ಲಿ ರಮಾನಾಥ ರೈ ಅವರಿಂದ ಅಧಿಕಾರ ಸ್ವೀಕರಿಸಿದ್ದರು. ವಿವಿಧ ಚುನಾವಣೆಗಳಲ್ಲಿ ಕಾಂಗ್ರೆಸ್‌ ಹಿನ್ನಡೆ ಅನುಭವಿಸಿರುವುದರಿಂದ ಮುಂದಿನ ಜಿಲ್ಲಾಧ್ಯಕ್ಷರ ಕಾರ್ಯಭಾರ ಸವಾಲಿನಿಂದ ಕೂಡಿರಲಿದೆ. ಹೀಗಾಗಿ ನಾಯಕರು ಸಾಕಷ್ಟು ವಿಚಾರವಿಮರ್ಶೆಗಳನ್ನು ನಡೆಸಿಯೇ ಆಯ್ಕೆ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಿಜೆಪಿ: ಡಿಸೆಂಬರ್‌ನಲ್ಲಿ ಆಯ್ಕೆ
ಜಿಲ್ಲಾ ಬಿಜೆಪಿ ಅಧ್ಯಕ್ಷರ ಅಧಿಕಾರಾವಧಿ ಸೆಪ್ಟಂಬರ್‌ನಲ್ಲಿ ಪೂರ್ಣಗೊಂಡಿದ್ದು, ಅಕ್ಟೋಬರ್‌ ಒಳಗೆ ನೂತನ ಅಧ್ಯಕ್ಷರ ಆಯ್ಕೆ ನಡೆಯಬೇಕಾಗಿತ್ತು. ಆದರೆ ಪಾಲಿಕೆ ಚುನಾವಣೆ ಮತ್ತು ವಿಧಾನಸಭಾ ಉಪಚುನಾವಣೆಯಿದ್ದು ವಿಳಂಬವಾಗಿದೆ. ಈಗಾಗಲೇ ಬೂತ್‌ ಮಟ್ಟದ ಅಧ್ಯಕ್ಷರ ಆಯ್ಕೆ ನಡೆದಿದ್ದು, ಮಂಡಲ ಮಟ್ಟದ (ವಿಧಾನಸಭಾ ಕ್ಷೇತ್ರ) ಅಧ್ಯಕ್ಷರ ಆಯ್ಕೆ ನಡೆಯುತ್ತಿದೆ. ಅದು ಪೂರ್ಣಗೊಂಡ ಕೂಡಲೇ ಡಿಸೆಂಬರ್‌ನಲ್ಲಿ ಜಿಲ್ಲಾಧ್ಯಕ್ಷರ ಆಯ್ಕೆ ನಡೆಯಲಿದೆ.

Advertisement

ಬಿಜೆಪಿಯಲ್ಲಿ ಜಿಲ್ಲಾ ಅಧ್ಯಕ್ಷತೆ 3 ವರ್ಷಗಳ ಅವಧಿಯದು. ಸಂಜೀವ ಮಠಂದೂರು ಅಧ್ಯಕ್ಷತೆಯಲ್ಲಿ ಬಿಜೆಪಿಯು ಚುನಾವಣೆಗಳಲ್ಲಿ ಅಭೂತಪೂರ್ವ ಸಾಧನೆ ಮಾಡಿದೆ. ಮುಂದಿನ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಈ ಅಂಶಗಳು ಪರಿಗಣನೆಗೆ ಬರಲಿವೆ.

ಜೆಡಿಎಸ್‌ಗೆ ಯಾರು?
ಜೆಡಿಎಸ್‌ ಜಿಲ್ಲಾಧ್ಯಕ್ಷ ಮಹಮ್ಮದ್‌ ಕುಂಞಿ ವೈಯಕ್ತಿಕ ಕಾರಣಗಳಿಂದಾಗಿ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಆದರೆ ಸದ್ಯಕ್ಕೆ ಮುಂದುವರಿಯುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಸೂಚಿಸಿದ್ದಾರೆ ಎನ್ನಲಾಗಿದೆ.

ಬಿಜೆಪಿ ಮಂಡಲ ಸಮಿತಿಗಳ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಈಗಾಗಲೇ 4 ಮಂಡಲಗಳ ಅಧ್ಯಕ್ಷರ ಆಯ್ಕೆ ಆಗಿದೆ. ಇದು ಪೂರ್ಣವಾದ ಬಳಿಕ ಜಿಲ್ಲಾ ಅಧ್ಯಕ್ಷರ ಚುನಾವಣೆ ನಡೆಯಲಿದೆ.
 - ಸಂಜೀವ ಮಠಂದೂರು,
ಬಿಜೆಪಿ ಜಿಲ್ಲಾಧ್ಯಕ್ಷರು

ಜಿಲ್ಲಾ ಕಾಂಗ್ರೆಸ್‌ ಸಮಿತಿಗೆ ನೂತನ ಅಧ್ಯಕ್ಷರ ಆಯ್ಕೆಗೆ ಸಂಬಂಧಪಟ್ಟು ಕೆಪಿಸಿಸಿ ವೀಕ್ಷಕರು ಸೆಪ್ಟಂಬರ್‌ನಲ್ಲಿ ಜಿಲ್ಲೆಗೆ ಆಗಮಿಸಿ ಜಿಲ್ಲೆಯ ಮುಖಂಡರ ಜತೆ ಚರ್ಚೆ ನಡೆಸಿ ಅಭಿಪ್ರಾಯಗಳನ್ನು ಸಂಗ್ರಹಿಸಿ ಕೆಪಿಸಿಸಿಗೆ ವರದಿ ಸಲ್ಲಿಸಿದ್ದಾರೆ. ಕೆಪಿಸಿಸಿ ನಿರ್ಧಾರ ಕೈಗೊಳ್ಳಲಿದೆ.
 - ಹರೀಶ್‌ ಕುಮಾರ್‌,
ಕಾಂಗ್ರೆಸ್‌ ಜಿಲ್ಲಾಧ್ಯಕ್ಷರು.

ವೈಯಕ್ತಿಕ ಕಾರಣಗಳಿಂದಾಗಿ ನಾನು ಈಗಾಗಲೇ ಜೆಡಿಎಸ್‌ ಜಿಲ್ಲಾಧ್ಯಕ್ಷತೆಗೆ ರಾಜೀನಾಮೆ ಸಲ್ಲಿಸಿದ್ದೇನೆ. ಸದ್ಯಕ್ಕೆ ಮುಂದುವರಿಯುವಂತೆ ಪಕ್ಷದ ವರಿಷ್ಠ ನಾಯಕರು ಸೂಚಿಸಿದ್ದಾರೆ.
 -ಮಹಮ್ಮದ್‌ ಕುಂಞಿ,
ಜೆಡಿಎಸ್‌ ಜಿಲ್ಲಾಧ್ಯಕ್ಷರು

ಬಿಜೆಪಿ ಅಧ್ಯಕ್ಷತೆಗೆ ವಯೋಮಿತಿ
ಬಿಜೆಪಿಯಲ್ಲಿ ಈ ಬಾರಿ ಅಧ್ಯಕ್ಷತೆಗೆ ವಯೋಮಿತಿ ನಿಗದಿಪಡಿಸಲಾಗಿದೆ. ಮಂಡಲ (ವಿಧಾನಸಭಾ ಕ್ಷೇತ್ರ) ಸಮಿತಿ ಅಧ್ಯಕ್ಷತೆಗೆ 50 ವರ್ಷ ಮತ್ತು ಜಿಲ್ಲಾಧ್ಯಕ್ಷತೆಗೆ 55 ವಯೋಮಿತಿಯೊಳಗಿನವರು ಅರ್ಹರಾಗುತ್ತಾರೆ. ಪಕ್ಷದಲ್ಲಿ ಯುವಶಕ್ತಿಯನ್ನು ಮುಂಚೂಣಿಗೆ ತರುವುದಕ್ಕಾಗಿ ಈ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿದೆ.

– ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next