ಮಾನ್ವಿ: ಕಳೆದ ಎರಡು ವರ್ಷಗಳ ಹಿಂದೆಯೇ ಪುರಸಭೆ ಚುನಾವಣೆಯಲ್ಲಿ ಚುನಾಯಿತರಾಗಿದ್ದರೂ ಅಧಿಕಾರವಿಲ್ಲದೆ ನಿರಾಸೆಯಾಗಿದ್ದ ಪುರಸಭೆ ಸದಸ್ಯರಿಗೆ ಇದೀಗ ಅಧಿಕಾರ ಸಿಗುವ ಕಾಲ ಕೂಡಿಬಂದಿದೆ. ಸರ್ಕಾರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ಮೀಸಲಾತಿ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದ್ದು, ಪಟ್ಟಣದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಪಟ್ಟಣದ ಪುರಸಭೆ ಅಧ್ಯಕ್ಷ ಸ್ಥಾನ ಬಿಸಿಎ ಮಹಿಳೆ ಹಾಗು ಉಪಾಧ್ಯಕ್ಷ ಸ್ಥಾನ ಎಸ್‌ಸಿಗೆ ಮೀಸಲಾಗಿದೆ. ಒಟ್ಟು 27 ಸ್ಥಾನಗಳ ಪೈಕಿ ಕಾಂಗ್ರೆಸ್ 13, ಜೆಡಿಎಸ್ 8, ಸಮಾಜವಾದಿ 4, ಪಕ್ಷೇತರ 2 ಸ್ಥಾನಗಳಲ್ಲಿ ಗೆದ್ದಿದ್ದಾರೆ.ಬಿಜೆಪಿ ಖಾತೆ ತೆರೆದಿಲ್ಲ. ಯಾವುದೇ ಪಕ್ಷಕ್ಕೆ ಬಹುಮತ ಸಿಗದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ಅಧಿಕ ಸ್ಥಾನ ಗಳಿಸಿದ್ದರೂ ಅಧಿಕಾರ ಹಿಡಿಯಲು ಕಾಂಗ್ರೆಸ್‌ಗೆ ಇತರರ ಬೆಂಬಲದ ಅವಶ್ಯಕತೆ ಇದೆ. ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ವಾರ್ಡ್ ನಂ.11ರ ಸೂಫಿಯಾ ಬೇಗಂ, ವಾರ್ಡ್ ನಂ.16ರ ಲಕ್ಷ್ಮೀ ವೀರೇಶ, ವಾರ್ಡ್ ನಂ.24ರ ರಷೀದಾ ಬೇಗಂ, ಸಮಾಜವಾದಿ ಪಕ್ಷದ ರೇಷ್ಮಾ ಬೇಗಂ ಮತ್ತು ಪಕ್ಷೇತರರಾಗಿ ಗೆದ್ದ ಶೈನಾಭಾನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಹುದಾಗಿದೆ. ಇನ್ನು ಜೆಡಿಎಸ್‌ನಲ್ಲಿ ಬಿಸಿಎ ಮಹಿಳೆಯರೇ ಇಲ್ಲ. ಕಾಂಗ್ರೆಸ್‌ನಲ್ಲೇ ಮೂವರು ಅಭ್ಯರ್ಥಿ ಗಳಿರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡುವುದು ಕಾಂಗ್ರೆಸ್ ವರಿಷ್ಠರಿಗೆ ತಲೆನೊವಾಗಬಹುದು. ಇಲ್ಲಿ ಜಿಲ್ಲಾ ಮುಖಂಡರ ನಿರ್ಣಯವೇ ಅಂತಿಮ ಎನ್ನಲಾಗುತ್ತಿದೆ.
ಎನ್. ಎಸ್.ಬೋಸರಾಜು ಅವರ ಮಗ ರವಿ ಬೋಸರಾಜು ಸಮಾಜವಾದಿ ಮತ್ತು ಪಕ್ಷೇತರ ಸದಸ್ಯರನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇತ್ತ ಜೆಡಿಎಸ್‌ನಲ್ಲಿಯೂ ಪ್ರತಿತಂತ್ರ ರೂಪಿಸಲಾಗುತ್ತಿದ್ದು, ಸಮಾಜವಾದಿ ಪಕ್ಷ ಮತ್ತು ಪಕ್ಷೇತರರನ್ನು ಸೇರಿಸಿಕೊಂಡು ಉಪಾಧ್ಯಕ್ಷ ಸ್ಥಾನದ ಬೇಡಿಕೆಯೊಂದಿಗೆ ಅಧಿಕಾರ ಹಿಡಿಯುವ ಪ್ರಯತ್ನ ಮಾಡುತ್ತಿದ್ದು, ಜೆಡಿಎಸ್ ಶಾಸಕ ರಾಜಾವೆಂಕಟಪ್ಪ ನಾಯಕ ಹಾಗೂ ಸತತ ಐದು ಬಾರಿ ಪುರಸಭೆ ಆಯ್ಕೆಯಾಗಿರುವ ಸಹೋದರ ರಾಜಾಮಹೇಂದ್ರ ನಾಯಕರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ ಎಂಬ ಮಾತುಗಳ ಸಹ ಕೇಳಿ ಬರುತ್ತಿವೆ.
ಮಾನ್ವಿ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಕಾವು ಏರುತ್ತಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ತೀವ್ರ ಕುತೂಹಲ ಮೂಡಿಸಿದೆ. ಪುರಸಭೆ ಅಧಿಕಾರಿ ಯಾರ ಪಾಲಾಗಲಿದೆ ಕಾದು ನೋಡಬೇಕು.
ಕೆಲ ತಿಂಗಳ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್‌ನವರು ತಮಗೆ ಬೆಂಬಲ ನೀಡುವಂತೆ ಕೇಳಿಕೊಂಡಿದ್ದರು. ಮೀಸಲಾತಿ ಪ್ರಕಟಿಸಿದ ನಂತರ ನನ್ನನ್ನು ಯಾರೂ ಸಂಪರ್ಕಿಸಿಲ್ಲ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದವರು ಒಂದಾಗಿದ್ದಾರೆ ಎಂಬ ಮಾತು ಕೇಳಿದ್ದೇನೆ. ಪಟ್ಟಣ,ವಾರ್ಡ್ ಅಭಿವೃದ್ಧಿಗೆ ಸಹಕರಿಸುವವರಿಗೆ ನನ್ನ ಬೆಂಬಲವಿದೆ. –
ಶೇಕ್ ಫರೀದ್ ಉಮರಿ, ಪಕ್ಷೇತರ ಸದಸ್ಯರು, ವಾರ್ಡ್ ನಂ. 23
ಸಮಾಜವಾದಿ ಪಕ್ಷದಿಂದ ನಾಲ್ಕು ಜನ ಗೆದ್ದಿದ್ದಾರೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು ಎಂದುಕೊಂಡಿದ್ದೇವೆ. ಚುನಾವಣಾ ದಿನಾಂಕ ಪ್ರಕಟವಾದ ನಂತರ ರಾಜಕೀಯ ಬೆಳವಣಿಗೆಗಳನ್ನು ನೋಡಿಕೊಂಡು ತೀರ್ಮಾನ ಕೈಗೊಳ್ಳಲಾಗುವುದು
-ಜಾಕೀರ್ ಮೊಹಿನುದ್ದೀನ್, ತಾಲೂಕು ಅಧ್ಯಕ್ಷ, ಸಮಾಜವಾದಿ ಪಕ್ಷ ಮಾನ್ವಿ