Advertisement
“ಕ್ಲಿಕ್ ಕ್ಲಿಕ್’… ಮಿಂಚಿನ ವೇಗದಲ್ಲಿ ಆಕೆ ಹತ್ತಾರು ಭಾವಗಳನ್ನು ಸೆರೆ ಹಿಡಿಯುತ್ತಾಳೆ. ಸಂಭ್ರಮ, ಸಡಗರ, ನಾಚಿಕೆ, ಪುಳಕ, ಕಣ್ಣಂಚಿನ ನೀರು, ಸಾರ್ಥಕದ ನಗು… ಹೀಗೆ ಮದುವೆ ಮನೆಯಲ್ಲಿ ಮೂಡಿ ಮರೆಯಾಗೋ ಅಮೂಲ್ಯ ಕ್ಷಣಗಳನ್ನು ಒಟ್ಟಿಗೆ ಬಾಚಿ ಕೊಡುವುದೇ ಆಕೆಯ ಕೆಲಸ. ಎಲ್ಲರ ಜೀವನದಲ್ಲಿ ಅಮೂಲ್ಯ ಎನಿಸಿಕೊಳ್ಳುವ, ನೆನಪಾದಾಗಲೆಲ್ಲ ಪುಳಕವಾಗುವ ಮದುವೆಯ ಸಂಭ್ರಮವನ್ನು ಇನ್ನಷ್ಟು ಚೆಂದಗಾಣಿಸುವ ತನ್ನ ಕೆಲಸದ ಬಗ್ಗೆ ಆಕೆಗೆ ಅಪಾರ ಪ್ರೀತಿಯಿದೆ.
Related Articles
Advertisement
100 ಮದುವೆ ಕ್ಲಿಕ್ಕಿಸಿದ ಮಾನ್ವಿ: ಈಗಾಗಲೇ ನೂರಕ್ಕೂ ಹೆಚ್ಚು ಮದುವೆಗಳ ಫೋಟೊಶೂಟ್ ಮುಗಿಸಿರುವ ಇವರು, ಶಾಸ್ತ್ರೋಕ್ತವಾಗಿ ಫೋಟೊಗ್ರಫಿಯನ್ನು ಕಲಿತವರಲ್ಲ. ಆದರೆ, ಆನ್‌ಲೈನ್ ಕೋರ್ಸ್‌ಗಳ ಮೂಲಕ, ಇಂಟರ್‌ನೆಟ್ ಮೂಲಕ ಪ್ರತಿದಿನವೂ ಹೊಸದನ್ನು ಕಲಿಯುತ್ತಿದ್ದೇನೆ ಎನ್ನುತ್ತಾರೆ ಅವರು.
ರೋಟಕ್, ಕೇರಳ, ಕನ್ಯಾಕುಮಾರಿ, ಚಂಡೀಗಢ್, ಜೈಪುರ್, ಉದಯಪುರ್, ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್, ಬ್ಯಾಂಕಾಕ್, ಶ್ರೀಲಂಕಾ, ಅಮೆರಿಕ, ಸ್ಯಾನ್‌ಫ್ರಾನ್ಸಿಸ್ಕೊ, ಕ್ಯಾಲಿಫೋರ್ನಿಯ, ಹೈದರಾಬಾದ್ ಹೀಗೆ ವಿವಿಧ ಸಂಸ್ಕೃತಿಯ, ಆಚಾರ ವಿಚಾರದ ಮದುವೆಗಳಿಗೆ ಅವರು ಸಾಕ್ಷಿಯಾಗಿದ್ದಾರೆ.
ಮದುವೆಯೇ ಅಲ್ಲದ ಮದುವೆ!: ಇತ್ತೀಚೆಗೆ ಮಾನ್ವಿ ಅವರು ಒಂದು ಮದುವೆ ಫೋಟೊಶೂಟ್ ಮಾಡಿದ್ದರು. ಅದು ಸದಾ ನೆನಪಲ್ಲಿ ಉಳಿಯುವಂಥ ಮದುವೆ. ಯಾಕೆಂದರೆ, ಅದು ನಿಜಕ್ಕೂ ಮದುವೆ ರೀತಿ ನಡೆದೇ ಇಲ್ಲ ಎನ್ನುತ್ತಾರವರು. ಮದುವೆ ಅಂದರೆ ಪುರೋಹಿತರ ಸಮ್ಮುಖದಲ್ಲಿ, ಶಾಸ್ತ್ರದ ಪ್ರಕಾರ ಹಾರವನ್ನೋ, ಉಂಗುರವನ್ನೋ ಬದಲಾಯಿಸಿಕೊಳ್ಳುವುದು ಸಂಪ್ರದಾಯ.
ಆದರೆ, ಭಾರತೀಯ ಹುಡುಗಿ ಮತ್ತು ಡಚ್ ಹುಡುಗ ಪರಸ್ಪರ ಒಟ್ಟಿಗೆ ಇರುವ ವಾಗ್ಧಾನವನ್ನಷ್ಟೇ ಮಾಡಿದರು! ಅಲ್ಲಿ ಪುರೋಹಿತರಿರಲಿಲ್ಲ, ಹಾರ, ಹೋಮ, ಮಂತ್ರಾಕ್ಷತೆ, ಓಲಗವೂ ಇರಲಿಲ್ಲ. ಕೇರಳದಲ್ಲಿ ನಡೆದ ಆ ಮದುವೆಗೆ 6 ಖಂಡಗಳ, 45ಕ್ಕೂ ಹೆಚ್ಚು ದೇಶಗಳಿಂದ ಸ್ನೇಹಿತರು ಬಂದಿದ್ದರು. ಎರಡೂ ಕುಟುಂಬಗಳ ನಡುವೆ ಬೋಟ್ ರೇಸ್ ನಡೆಯಿತು.
ತಂದೆ ಸ್ವತಃ ದೋಣಿ ನಡೆಸುತ್ತಾ ಮಗಳನ್ನು ಕರೆದುಕೊಂಡು ಬಂದರೆ, ಹುಡುಗ ಬಂದದ್ದು ಸೈಕಲ್ ಮೇಲೆ. ನೀರಿನ ಮಧ್ಯದಲ್ಲಿ ದೊಣಿಯಲ್ಲೇ ಅವರಿಬ್ಬರು ಪರಸ್ಪರ ಪ್ರಾಮಿಸ್ ಮಾಡುವ ಮೂಲಕ ಮದುವೆಯಾದರು. ಪರಿಸರ ಪ್ರೇಮಿಗಳಾದ ಅವರು ಮದುವೆಯಲ್ಲಿ ಒಂದು ಪ್ಲಾಸ್ಟಿಕ್ ಕವರ್ ಅನ್ನೂ ಬಳಸಿಲ್ಲ!
ಸಂಬಳಕ್ಕಿಂತ ಖುಷಿ ಮುಖ್ಯ: ‘ಕೇವಲ ಹತ್ತು ಜನರಿದ್ದ ತೀರಾ ಖಾಸಗಿ ಮದುವೆಯಿಂದ ಹಿಡಿದು, ಆನೆಯ ಮೇಲೆ ರಾಜನಂತೆ ಬಂದ ಹುಡುಗನ ಮದುವೆಯ ಫೋಟೊಶೂಟ್ ಅನ್ನೂ ಮಾಡಿದ್ದೇನೆ. ಮೊದಲಿಂದಲೂ ಪ್ರವಾಸ, ಹೊಸ ಸಂಸ್ಕೃತಿ, ಹೊಸ ಜನ, ಅವರ ಭಾವನೆ, ಆಚಾರ ವಿಚಾರಗಳ ಬಗ್ಗೆ ನನಗೆ ಕುತೂಹಲ ಜಾಸ್ತಿ. ವೆಡ್ಡಿಂಗ್ ಫೋಟೊಗ್ರಫಿ ಈ ಎಲ್ಲವನ್ನೂ ನನಗೆ ಕೊಡುತ್ತಿದೆ.
ಇದನ್ನು ವೃತ್ತಿಯನ್ನಾಗಿ ತೆಗೆದುಕೊಳ್ಳುವಾಗ ನನ್ನಲ್ಲಿಯೂ ಗೊಂದಲಗಳಿದ್ದವು. ಹಣ ಬರದಿದ್ದರೆ, ಜನರು ನನ್ನ ಕೆಲಸ ಒಪ್ಪಿಕೊಳ್ಳದಿದ್ದರೆ ಅಂತೆಲ್ಲಾ ಹೆದರಿಕೆಯಾಗಿತ್ತು. ಒಂದು ವರ್ಷ ಮಾಡಿ ನೋಡೋದು ಇಷ್ಟ ಆಗಿಲ್ಲ, ವರ್ಕ್ ಔಟ್ ಆಗಲ್ಲ ಅಂತಾದ್ರೆ ಮತ್ತೆ ವಾಪಸ್ ಹೋಗೋದು ಅಂತ ನಿರ್ಧರಿಸಿಕೊಂಡೇ ಬಂದಿದ್ದೆ. ಆದರೆ, ನಾನ್ಯಾವತ್ತೂ ಪಶ್ಚಾತ್ತಾಪ ಪಡೋ ಪ್ರಮೇಯ ಬರಲೇ ಇಲ್ಲ.
ಪ್ಯಾಶನ್ ಆಗಿ ಶುರುವಾಗಿದ್ದು ಈಗ ಏಳೆಂಟು ಜನರಿಗೆ ಕೆಲಸ ಕೊಡುವಲ್ಲಿಗೆ ಬಂದು ನಿಂತಿದೆ. ನನ್ನ ಜೊತೆಗೆ ಇನ್ನೂ 6 ಹುಡುಗಿಯರು, ಇಬ್ಬರು ಹುಡುಗರು ಕೆಲಸ ಮಾಡುತ್ತಿದ್ದಾರೆ. ನನ್ನ ಫೋಟೊಗಳನ್ನು ಎಲ್ಲರೂ ಮೆಚ್ಚಿಕೊಂಡು, ಇನ್ನೊಬ್ಬರಿಗೆ ರೆಫರ್ ಮಾಡುತ್ತಾ ಬಂದಿದ್ದಾರೆ. ಹೀಗೆ ಒನ್ ಪ್ಲಸ್ ಒನ್‌ನ ಬ್ಯುಸಿನೆಸ್ ಬೆಳೆಯುತ್ತಿದೆ. ಪುರುಷರೇ ಹೆಚ್ಚಾಗಿರುವ ಈ ಕ್ಷೇತ್ರದಲ್ಲಿ ನಾನು ಮಾಡುತ್ತಿರುವ ಕೆಲಸದ ಬಗ್ಗೆ ತೃಪ್ತಿ, ನೆಮ್ಮದಿ ಇದೆ’ ಎನ್ನುತ್ತಾರೆ ಮಾನ್ವಿ ಗಂಡೋತ್ರ.
ಮೊದಲಿಂದಲೂ ಪ್ರವಾಸ, ಹೊಸ ಸಂಸ್ಕೃತಿ, ಹೊಸ ಜನ, ಅವರ ಭಾವನೆ, ಆಚಾರ- ವಿಚಾರಗಳ ಬಗ್ಗೆ ನನಗೆ ಕುತೂಹಲ ಜಾಸ್ತಿ. ವೆಡ್ಡಿಂಗ್ ಫೋಟೊಗ್ರಫಿ ಈ ಎಲ್ಲವನ್ನೂ ನನಗೆ ಕೊಡುತ್ತಿದೆ.-ಮಾನ್ವಿ ಗಂಡೋತ್ರ, ವೆಡ್ಡಿಂಗ್ ಫೋಟೋಗ್ರಾಫರ್, ಬೆಂಗಳೂರು * ಪ್ರಿಯಾಂಕಾ ಎನ್.