ಮಾನ್ವಿ: ಗ್ರಾಮ ಪಂಚಾಯತಿಗಳಲ್ಲಿ ಬೆಂಬಲ ಬೆಲೆ ಯೋಜನೆಯಡಿ ಭತ್ತ, ಜೋಳ, ತೊಗರಿ ಖರೀದಿ ಕೇಂದ್ರ ತೆರೆಯಲು ಮತ್ತು ಕೃಷಿ ಉತ್ಪನ್ನ ಖರೀದಿಸಿದ ಮರುದಿನವೇ ರೈತರಿಗೆ ಹಣ ಪಾವತಿಸಲು ಆಗ್ರಹಿಸಿ ಕರ್ನಾಟಕ ರೈತ ಸಂಘ ತಾಲೂಕು ಸಮಿತಿ ಸದಸ್ಯರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ತಾಲೂಕಿನಾದ್ಯಂತ ರೈತರು ಬೆಳೆಯುತ್ತಿರುವ ಸೋನಾ ಮಸೂರಿ ಭತ್ತಕ್ಕೆ ಭಾರೀ ಬೇಡಿಕೆ ಇದೆ. ಇತರೆ ಕೃಷಿ ಉತ್ಪನ್ನಗಳಾದ ಜೋಳ, ತೊಗರಿ, ಕಡಲೆ ಬೆಳೆಗಳನ್ನು ಈ ಭಾಗದ ರೈತರು ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಆದರೆ ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದಾಗಿದೆ. ಸರ್ಕಾರ ನಿಗದಿ ಮಾಡಿದ ಬೆಲೆಗಳು ರೈತರಿಗೆ ಸಿಗುತ್ತಿಲ್ಲ. ಇದರಿಂದ ತಾಲೂಕಿನ ರೈತರು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಭತ್ತಕ್ಕೆ ಕ್ವಿಂಟಲ್‌ಗೆ 1,835 ರೂ. ಬೆಂಬಲ ಬೆಲೆ ನಿಗ ದಿ ಮಾಡಿದ್ದು, ಇದು ಅವೈಜ್ಞಾನಿಕ ವಾಗಿದೆ. ರೈತರಿಗೆ ಮಾಡಿದ ದ್ರೋಹವಾಗಿದೆ. ರಾಜ್ಯ ಸರ್ಕಾರದಿಂದ 200 ರೂ. ಪ್ರೋತ್ಸಾಹ ಧನ ಸೇರಿ ಒಂದು ಕ್ವಿಂಟಲ್ ಭತ್ತಕ್ಕೆ 2,035 ರೂ. ಸಿಗಬೇಕು. ಆದರೆ ಮಾರುಕಟ್ಟೆಯಲ್ಲಿ ಕ್ವಿಂಟಲ್ ಭತ್ತಕ್ಕೆ 1500 ರೂ. ಮಾತ್ರ ನೀಡಲಾಗುತ್ತಿದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ.
ತೊಗರಿ ಬೆಳೆಗೆ ಕ್ವಿಂಟಲ್‌ಗೆ 5,800 ರೂ. ಪ್ರೋತ್ಸಾಹ ಬೆಲೆ 6,200 ರೂ. ಒಟ್ಟು 12000 ರೂ. ರೈತರಿಗೆ ದೊರೆಯಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬೆಂಬಲ ಬೆಲೆ ಘೋಷಣೆ ಮಾಡಿ ಕೈ ತೊಳೆದುಕೊಂಡರೆ ಪ್ರಯೋಜನವಿಲ್ಲ. ಸರಕಾರ ನಿಗದಿ ಮಾಡಿದ ಬೆಲೆಗೆ ಖರೀದಿ ಮಾಡಲೇಬೇಕೆಂದು ಖಾಸಗಿ ಮಧ್ಯವರ್ತಿಗಳಿಗೆ ಮತ್ತು ವರ್ತಕರಿಗೆ, ಖರೀದಿದಾರರಿಗೆ ಕಟ್ಟುನಿಟ್ಟಿನ ಆದೇಶ ನೀಡುವ ಕಾಯ್ದೆ ಜಾರಿಗೆ ತರಬೇಕು. ಪ್ರಧಾನಿ ಮೋದಿ ಘೋಷಿಸಿದಂತೆ ಎಂ.ಎಸ್. ಸ್ವಾಮಿನಾಥನ್ ವರದಿಯಂತೆ ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡಬೇಕು. ಮಧ್ಯವರ್ತಿಗಳು ಮತ್ತು ವರ್ತಕರು, ಸರಕಾರ ನಿಗದಿ ಮಾಡಿದ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿಸದಂತೆ ತಾಕೀತು ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾವಾರು ಕೃಷಿ ಉತ್ಪನ್ನದ ಆವಕ ಆಧರಿಸಿ ಒಂದು ತಿಂಗಳ ಮುಂಚಿತವಾಗಿ ಹಣವನ್ನು ಜಿಲ್ಲಾಧಿಕಾರಿ ಖಾತೆಗೆ ಜಮಾ ಮಾಡಬೇಕು. ರಾಜ್ಯ ಸರಕಾರ ಹೊರಡಿಸಿದ ಪ್ರಸ್ತಾವನೆಯಲ್ಲಿ ಭತ್ತಕ್ಕೆ ಪ್ರೋತ್ಸಾಹ ಧನದ ಉಲ್ಲೇಖ ಮಾಡಿಲ್ಲ. ತ್ವರಿಗತಿಯಲ್ಲಿ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಕೆಆರ್‌ಎಸ್ ತಾಲೂಕು ಅಧ್ಯಕ್ಷ ಮುದುಕಪ್ಪ ನಾಯಕ, ತಾಲೂಕು ಪ್ರಧಾನ ಕಾರ್ಯದರ್ಶಿ ಅಶೋಕ ನೀಲಗಲ್, ಹುಲಿಗೆಪ್ಪ ಸಿರವಾರ, ಆನಂದ ಭೋವಿ, ಮಲ್ಲಯ್ಯ ಗುಡದಿನ್ನಿ, ದಿಲೀಪ್ ಮಾನ್ವಿ, ಲಾಲಪ್ಪ ನಾಯ್ಕಕುರ್ಡಿ, ಯಲ್ಲಪ್ಪ ನಾಯಕ, ಈರೇಶ ಗುಡದಿನ್ನಿ, ರಮೇಶ ಸಿರವಾರ, ಹನುಮಂತ ನಾಯಕ, ಮುದುಕಪ್ಪ ನಾಯಕ ಗಣದಿನ್ನಿ ಇದ್ದರು.