Advertisement

ಗುಣಮಟ್ಟದ ಶಿಕ್ಷಣದಿಂದ ಗಮನ ಸೆಳೆಯುವ ಮಣೂರು-ಪಡುಕರೆ ಶಾಲೆ

08:53 PM Aug 07, 2021 | Team Udayavani |

ಕೋಟ:  ಜಿಲ್ಲೆಯ ಕೆಲವೊಂದು ಸರಕಾರಿ ಸಂಸ್ಥೆಗಳು ಖಾಸಗಿಗೆ ಸೆಡ್ಡು ಹೊಡೆಯುವ ರೀತಿ ಯಲ್ಲಿ ಬೆಳೆಯುತ್ತಿದೆ. ಹಾಗಾಗಿ ವಿದ್ಯಾರ್ಥಿಗಳು ಖಾಸಗಿ ತೊರೆದು ಸರಕಾರಿ ಶಾಲೆಗಳಿಗೆ ಸೇರ್ಪಡೆ ಗೊಳ್ಳುವುದು, ಸೀಟಿಗಾಗಿ ಪೈಪೋಟಿ ನಡೆಸುವುದು ಅಲ್ಲಲ್ಲಿ  ವರದಿಯಾಗುತ್ತಿವೆ.  ಬ್ರಹ್ಮಾವರ ವಲಯದ ಮಣೂರು-ಪಡುಕರೆ ಸ.ಹಿ.ಪ್ರಾ. ಶಾಲೆಯಲ್ಲೂ ಈಗ ಪ್ರವೇಶಕ್ಕಾಗಿ ಪೈಪೊಧೀಟಿ ಹೆಚ್ಚಾಗಿದೆ.

Advertisement

1943ರಲ್ಲಿ ಸ್ಥಾಪನೆಗೊಂಡ ಈ ಶಾಲೆ  ಆರಂಭ ದಿಂದಲೂ ಸ್ಥಳೀಯ ಪರಿಸರದಲ್ಲಿ ಉತ್ತಮ ಶಿಕ್ಷಣದ ಮೂಲಕ ಗಮನಸೆಳೆದಿತ್ತು. ಪ್ರಸ್ತುತ  ಇಲ್ಲಿ 1ರಿಂದ 7ನೇ ತರಗತಿ ತನಕ 469 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಬಾರಿ 1ನೇ ತರಗತಿಗೆ 104 ವಿದ್ಯಾರ್ಥಿಗಳು ಹಾಗೂ 2ರಿಂದ 7ನೇ ತರಗತಿ ತನಕ 64 ಹೊಸ ವಿದ್ಯಾರ್ಥಿಗಳು ದಾಖಲಾಗಿದ್ದು ಸೀಟಿಗಾಗಿ ಇನ್ನೂ ಕೂಡ ಬೇಡಿಕೆ ಇದೆ. ಜಿಲ್ಲೆಯಲ್ಲಿ ಅತೀ ಹೆಚ್ಚಿನ  ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿ ಇದೂ ಒಂದು.

ಶಾಲೆಯಲ್ಲಿ ಈ ವರ್ಷದಿಂದ ಎಲ್‌.ಕೆ.ಜಿ. ವಿಭಾಗವನ್ನು ಆರಂಭಿಸಿದ್ದು  ಈಗಾಗಲೇ 100 ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ.   4 ಮತ್ತು 5ನೇ ತರಗತಿ ಹೊರತುಪಡಿಸಿ 1-10ನೇ ತರಗತಿ ತನಕ ಎಲ್ಲ ತರಗತಿಗಳಿಗೂ  ಪ್ರತ್ಯೇಕ ಆಂಗ್ಲ ಮಾಧ್ಯಮ ವಿಭಾಗ ವಿದ್ದು ಈ ಕಾರಣಕ್ಕೆ ಶಾಲೆಗೆ ಹೆಚ್ಚಿನ ಬೇಡಿಕೆ ಇದೆ.

ಶಾಲೆಯ ವಿಶೇಷತೆ:

ಪ್ರತ್ಯೇಕ ಆಂಗ್ಲಮಾಧ್ಯಮ ವಿಭಾಗ, ಸ್ಮಾರ್ಟ್‌ ಕ್ಲಾಸ್‌, ನ್ಪೋಕನ್‌ ಇಂಗ್ಲಿಷ್‌ ಕ್ಲಾಸ್‌, ವಾಹನ ವ್ಯವಸ್ಥೆ, ವಿಜ್ಞಾನ ಪ್ರಯೋಗಾಲಯ, 10 ಮಂದಿ ಖಾಯಂ ಶಿಕ್ಷಕರು ಹಾಗೂ 2-4 ಗೌರವ ಶಿಕ್ಷಕರು, ಆಧುನಿಕ ಶಿಕ್ಷಣ ವಿಧಾನಗಳನ್ನು ಒಳಗೊಂಡ ತರಗತಿ ಕೋಣೆಗಳು,  ಪಠ್ಯೇತರ ಚಟುವಟಿಕೆಗೆ ವಿಶೇಷ ಒತ್ತು, ರಾಷ್ಟ್ರ-ರಾಜ್ಯಮಟ್ಟದ ಕ್ರೀಡಾ ಸ್ಪರ್ಧೆಗೆ ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿರುವುದು ಹಾಗೂ ಕ್ರೀಡೆಗೆ ಒತ್ತು ನೀಡುತ್ತಿದೆ.  ಗೀತಾನಂದ ಫೌಂಡೇಶನ್‌ ಪ್ರವರ್ತಕ ಆನಂದ್‌ ಸಿ.ಕುಂದರ್‌ ಅವರು ಎಲ್ಲ ವಿದ್ಯಾರ್ಥಿಗಳಿಗೆ  ನೋಟ್‌ ಬುಕ್‌ ಮತ್ತು ಅಗತ್ಯ ಸೌಕರ್ಯಗಳನ್ನು  ಉಚಿತವಾಗಿ ನೀಡುತ್ತಿದ್ದಾರೆ. ಹೀಗೆ ದಾನಿಗಳ ಸಹಕಾರದಿಂದ ಗುಣಮಟ್ಟದ ಶಿಕ್ಷಣಕ್ಕೆ ಹಲವಾರು ಸೌಕರ್ಯಗಳನ್ನು ಅಳವಡಿಸಲಾಗಿದೆ.

Advertisement

ಶಾಲಾ ಬಹುಮಹಡಿ  ಕಟ್ಟಡವೂ ಆಕರ್ಷಕವಾಗಿದ್ದು ಕಳೆದ ವರ್ಷ ಇದರ ಉದ್ಘಾಟನೆಗೆ ಆಗಮಿಸಿದ ಮಾಜಿ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ಈ ಕಟ್ಟಡ ಶ್ರೀಮಂತ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೆಡ್ಡು ಹೊಡೆಯುವಂತಿದೆ ಹಾಗೂ ಇಲ್ಲಿನ ಶೈಕ್ಷಣಿಕ ಗುಣಮಟ್ಟ ಕೂಡ ಅದ್ಭುತವಾಗಿದೆ ಎಂದು ಶ್ಲಾಘಿಸಿದ್ದರು.

ಗುಣಮಟ್ಟದ ಶಿಕ್ಷಣ ನೀಡಿದರೆ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ  ಬೆಳೆಯಬಹುದು ಎನ್ನುವುದಕ್ಕೆ  ಗ್ರಾಮಾಂತರ ಭಾಗದ  ಮಣೂರು ಪಡುಕರೆ  ಶಾಲೆ ಉತ್ತಮ ಉದಾಹರಣೆಯಾಗಿದೆ.

ಆಂಗ್ಲಮಾಧ್ಯಮದಿಂದ 47 ವಿದ್ಯಾರ್ಥಿಗಳು ಸೇರ್ಪಡೆ :

ಇಲ್ಲಿ ಶಿಕ್ಷಣ ಪಡೆಯುವ ಸಲುವಾಗಿ ಖಾಸಗಿ ಆಂಗ್ಲಮಾಧ್ಯಮ ಶಾಲೆಗಳನ್ನು ತೊರೆದು ಬರುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಈ ಬಾರಿ ಸುಮಾರು 47 ವಿದ್ಯಾರ್ಥಿಗಳು ಈ ರೀತಿ ಸೇರ್ಪಡೆಗೊಂಡಿದ್ದಾರೆ.

ಶಾಲೆಯಲ್ಲಿ ಒಟ್ಟು 469 ವಿದ್ಯಾರ್ಥಿಗಳಿದ್ದು  ಸೀಟಿಗಾಗಿ ಇನ್ನೂ ಬೇಡಿಕೆಗಳು ಬರುತ್ತಿದೆ. ಸರಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ನೀಡಿದರೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳ್ಳಲಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.  – ಜಯಂತಿ, ಮುಖ್ಯ ಶಿಕ್ಷಕಿ ಸ.ಹಿ.ಪ್ರಾ. ಶಾಲೆ ಮಣೂರು-ಪಡುಕರೆ 

Advertisement

Udayavani is now on Telegram. Click here to join our channel and stay updated with the latest news.

Next