ಚೆನ್ನೈ: ಮಾರಣಾಂತಿಕ ಕೊರೊನಾ ವೈರಸ್ ಚೀನಾನ್ನು ತತ್ತರಿಸುವಂತೆ ಮಾಡಿದೆ. ಈ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡದಂತೆ ತಡೆಯಲು ಜನರು ಮಾಸ್ಕ್ ಗಳನ್ನು (ಮುಖ ಗವಸು) ಬಳಸುತ್ತಿದ್ದಾರೆ. ಇದೀಗ ತಮಿಳುನಾಡಿನ ಮಧುರೈನಲ್ಲಿ ತಯಾರಿಸಲಾಗುತ್ತಿರುವ ಎನ್.95 ಹೆಸರಿನ ಮಾಸ್ಕ್ ಗಳಿಗೆ ಚೀನಾದಿಂದ ಭಾರೀ ಬೇಡಿಕೆ ಬರಲಾರಂಭಿಸಿದೆ.
ಚೀನಾದ ಆರೋಗ್ಯ ಇಲಾಖೆಯು ತನ್ನ ಕಾರ್ಯಕರ್ತರಿಗೆ ಈ ಮಾಸ್ಕ್ ಗಳನ್ನು ಭಾರೀ ಸಂಖ್ಯೆಯಲ್ಲಿ ವಿತರಿಸುತ್ತಿದೆ ಮಾತ್ರವಲ್ಲದೇ ಕೊರೋನಾ ಕಾಟದಿಂದ ನಲುಗಿರುವ ವುಹಾನ್ ಪ್ರಾಂತ್ಯದ ನಿವಾಸಿಗಳಿಗೂ ಸಹ ಈ ಮಾಸ್ಕ್ ಗಳನ್ನು ವಿತರಿಸಲಾಗುತ್ತಿದೆ.
ಚೀನಾದಿಂದ ಈ ಮಾಸ್ಕ್ ಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಇದರ ಬೆಲೆಯೂ ಅರ್ಧಕ್ಕರ್ಧ ಏರಿಕೆ ಕಂಡಿದೆ. ಇದರಿಂದಾಗಿ ಮಾಸ್ಕ್ ತಯಾರಕರು ಮತ್ತು ಮಾರಾಟಗಾರರು ಉತ್ತಮ ಆದಾಯವನ್ನು ಪಡೆದುಕೊಳ್ಳಲಿದ್ದಾರೆ. ಇದೀಗ ಎನ್.95 ಮಾಸ್ಕ್ ಗಳಿಗೆ ಚಿನಾದಿಂದ ಹೆಚ್ಚಿನ ಬೇಡಿಕೆ ಸಿಕ್ಕಿರುವುದರಿಂದ ಭಾರತದಲ್ಲಿ ಅದರ ಉತ್ಪಾದನೆಯೂ ಹೆಚ್ಚಾಗಿದೆ.
ಈ ಕುರಿತಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಎ.ಎಂ. ಮೆಡಿವೇರ್ ಸಂಸ್ಥೆಯ ಆಡಳಿತ ನಿರ್ದೇಶಕ ಅಭಿಲಾಷ್ ಅವರು ಹೇಳಿದ್ದಿಷ್ಟು,
‘ಮಾಸ್ಕ್ ಗಳನ್ನು ಚೀನಾಕ್ಕೆ ರಫ್ತು ಮಾಡುತ್ತಿರುವ ಭಾರತೀಯ ರಫ್ತುದಾರರಿಂದ ನಮಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಇದೀಗ ನಾವು ನಮ್ಮ ಉತ್ಪಾದನೆಯನ್ನು ದ್ವಿಗುಣಗೊಳಿಸಿದ್ದೇವೆ.’
ಎನ್.95 ಮಾಸ್ಕ್ ಗಳು ಬಾಯಿ ಮತ್ತು ಮೂಗನ್ನು ಮುಚ್ಚುವ ರೀತಿಯಲ್ಲಿ ತಯಾರಾಗಿದ್ದು ಇದರ ಸುಧಾರಿತ ಗುಣಮಟ್ಟವು ಗಾಳಿಯಿಂದ ಅಥವಾ ಮನುಷ್ಯರ ಉಸಿರಿನ ಸಂಪರ್ಕದಿಂದ ಉಸಿರಾಟದ ಮೂಲಕ ಬ್ಯಾಕ್ಟೀರಿಯಾಗಳು ಹಾಗೂ ಧೂಳಿನ ಕಣಗಳು ನಮ್ಮ ದೇಹವನ್ನು ಪ್ರವೇಶಿಸುವುದನ್ನು ತಡೆಯುತ್ತವೆ.