ನವದೆಹಲಿ:ದೇಶದ ಹೈ ಪ್ರೊಫೈಲ್ ಕ್ರೈಮ್ ಪ್ರಕರಣಗಳಲ್ಲಿ ಒಂದಾದ ಜೆಸ್ಸಿಕಾ ಲಾಲ್ ಹಂತಕ ಮನು ಶರ್ಮಾನನ್ನು ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ. ಜೈಲು ನಿಯಮಾನುಸಾರ ಕೈದಿಯ ನಡವಳಿಕೆ ಆಧಾರದ ಮೇಲೆ ಶರ್ಮಾ ಸೇರಿದಂತೆ 18 ಕೈದಿಗಳನ್ನು ದಿಲ್ಲಿಯ ತಿಹಾರ್ ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ದಿಲ್ಲಿ ಸೆಂಟೆನ್ಸ್ ರಿವ್ಯೂ ಬೋರ್ಡ್ ನ ಶಿಫಾರಸ್ಸಿನ ಆಧಾರದ ಮೇಲೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ಈ ನಿರ್ಧಾರಕ್ಕೆ ಸಹಿ ಹಾಕಿರುವುದಾಗಿ ವರದಿ ಹೇಳಿದೆ. ದೆಹಲಿಯ ಗೃಹ ಸಚಿವ ಸತ್ಯೇಂದ್ರ ಜೈನ್ ಅವರ ಅಧ್ಯಕ್ಷತೆಯಲ್ಲಿ ಕಳೆದ ತಿಂಗಳು ನಡೆದ ಸಭೆಯಲ್ಲಿ ಮನು ಶರ್ಮಾ ಬಿಡುಗಡೆಗೆ ಒಮ್ಮತದ ಒಪ್ಪಿಗೆ ಮೇರೆಗೆ ಮಂಡಳಿ ಶಿಫಾರಸು ಮಾಡಿತ್ತು.
ಸುಮಾರು 17 ವರ್ಷಗಳ ಶಿಕ್ಷೆ ಅನುಭವಿಸಿದ್ದ 43 ವರ್ಷದ ಮನು ಶರ್ಮಾ ಇದೀಗ ಬಿಡುಗಡೆಯಾಗುತ್ತಿರುವುದಾಗಿ ವರದಿ ತಿಳಿಸಿದೆ. ಕೈದಿಯ ಉತ್ತಮ ನಡವಳಿಕೆ ಆಧಾರದ ಮೇಲೆ ಬಿಡುಗಡೆ ಮಾಡುವಂತೆ ಶರ್ಮಾ ಪರ ವಕೀಲರು ಕಳೆದ ನವೆಂಬರ್ ನಲ್ಲಿ ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದದರು. ಆದರೆ ಸೆಂಟೆನ್ಸ್ ರಿವ್ಯೂ ಬೋರ್ಡ್ ನಾಲ್ಕು ಬಾರಿ ಬಿಡುಗಡೆಯನ್ನು ತಿರಸ್ಕರಿಸಿತ್ತು.
ಕೇಂದ್ರದ ಮಾಜಿ ಸಚಿವ ವಿನೋದ್ ಶರ್ಮಾ ಪುತ್ರ ಮನು ಶರ್ಮಾ 1999ರ ಏಪ್ರಿಲ್ 30ರಂದು ಮದ್ಯ ಸರಬರಾಜು ಮಾಡಲು ನಿರಾಕರಿಸಿದ್ದಕ್ಕೆ ರೂಪದರ್ಶಿ ಜೆಸ್ಸಿಕಾ ಲಾಲ್ ಅವರನ್ನು ಗುಂಡಿಕ್ಕಿ ಹತ್ಯೆಗೈದಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶರ್ಮಾ 2006ರಲ್ಲಿ ದೋಷಿ ಎಂದು ಕೋರ್ಟ್ ತೀರ್ಪು ನೀಡಿತ್ತು. ವಿಚಾರಣಾಧೀನ ಕೋರ್ಟ್ ಮನು ಶರ್ಮಾನನ್ನು ನಿರ್ದೋಷಿ ಎಂದು ಆದೇಶ ನೀಡಿತ್ತು. ಆದರೆ ಈ ಪ್ರಕರಣ ದೇಶಾದ್ಯಂತ ಪ್ರತಿಭಟನೆ, ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿತ್ತು. ಹೈಕೋರ್ಟ್ ಮನುಶರ್ಮಾಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು, ಸುಪ್ರೀಂಕೋರ್ಟ್ ಕೂಡಾ 2010ರಲ್ಲಿ ಶಿಕ್ಷೆಯನ್ನು ಎತ್ತಿಹಿಡಿದಿತ್ತು.