ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದ ಶೂಟರ್ ಮನು ಭಾಕರ್ (Manu Bhaker) ಅವರ ಬ್ರಾಂಡ್ ಮೌಲ್ಯ 20 ಲಕ್ಷ ರೂ.ನಿಂದ 1.5 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ವರದಿಯಾಗಿದೆ.
ಶೂಟಿಂಗ್ ನಲ್ಲಿ 2 ಕಂಚಿನ ಪದಕಗಳನ್ನು ಗೆದ್ದ ಬಳಿಕ ಭಾಕರ್‌ಗೆ ಭಾರೀ ಬೇಡಿಕೆ ಬಂದಿದ್ದು, ಕಳೆದ ಮೂರೇ ದಿನಗಳಲ್ಲಿ 40ಕ್ಕೂ ಹೆಚ್ಚು ಕಂಪನಿಗಳು ಮನು ಅವರನ್ನು ಸಂಪರ್ಕಿಸಿವೆ ಎನ್ನಲಾಗಿದೆ.
22 ವರ್ಷದ ಮನು ಭಾಕರ್, ಕಳೆದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರಾದರೂ ಅವರಿಗೆ ಪದಕ ಲಭಿಸಿರಲಿಲ್ಲ. ಆದರೆ ಪ್ಯಾರಿಸ್ ನಲ್ಲಿ ಸಿಕ್ಕಿರುವ ಎರಡು ಪದಕಗಳು ಭಾಕರ್ ಬದುಕನ್ನೇ ಬದಲಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.
ಕಳೆದ ವರ್ಷ ಅಜರ್ಬೈಜಾನ್ ನ ಬಾಕುವಿನಲ್ಲಿ ನಡೆದಿದ್ದ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಮತ್ತು 2022ರ ಏಷ್ಯನ್ ಗೇಮ್ಸ್‌ನಲ್ಲಿ ಮನು ಚಿನ್ನ ಗೆದ್ದಿದ್ದರು.
ಮನು ಭಾಕರ್ ಒಂದೇ ಒಲಿಂಪಿಕ್ಸ್ ಅಭಿಯಾನದಲ್ಲಿ ಎರಡು ಶೂಟಿಂಗ್ ಪದಕಗಳನ್ನು ಗೆದ್ದ ಏಕೈಕ ಭಾರತೀಯ ಎಂಬ ಇತಿಹಾಸವನ್ನು ಬರೆದಿದ್ದಾರೆ. ಅವರು 10 ಮೀಟರ್ ಏರ್ ಪಿಸ್ತೂಲ್ ಕೂಟದಲ್ಲಿ ಕಂಚು ಗೆದ್ದಿದ್ದರು. ನಂತರ ಮಿಶ್ರ ತಂಡ 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ ಕಂಚು ಗೆದ್ದರು. 25 ಮೀ ಪಿಸ್ತೂಲ್ ಸ್ಪರ್ಧೆಯ ಅರ್ಹತಾ ಹಂತದಲ್ಲಿ 2ನೇ ಸ್ಥಾನ ಪಡೆದು ಫೈನಲ್ ತಲುಪಿದ್ದ ಮನು ಹ್ಯಾಟ್ರಿಕ್ ಪದಕದ ಆಸೆ ಮೂಡಿಸಿದ್ದರು. ಆದರೆ ನಾಲ್ಕನೇ ಸ್ಥಾನಿಯಾಗಿ ನಿರಾಸೆ ಅನುಭವಿಸಿದರು.