ಬೆಂಗಳೂರು: ಮಂತ್ರಿ ಡೆಲವಪರ್ಸ್‌ಗೆ ಸೇರಿದ 300.4 ಕೋಟಿ ರೂ. ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ(ಇ.ಡಿ.) ಅಧಿಕಾರಿಗಳು ಶುಕ್ರವಾರ ಜಪ್ತಿ ಮಾಡಿದ್ದಾರೆ.
ಮಂತ್ರಿ ಸೆರೆನಿಟಿ, ಮಂತ್ರಿ ವೆಬ್‌ಸಿಟಿ ಮತ್ತು ಮಂತ್ರಿ ಎನ್ರಿಗಿಯಾ ಎಂಬ ರೆಸಿಡೆಟಲ್ ಪ್ರಾಜೆಕ್ಟ್ ಗೆ ಸೇರಿದ 300.4 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಜಪ್ತಿ ಮಾಡಲಾಗಿದೆ ಎಂದು ಇ.ಡಿ. ತಿಳಿಸಿದೆ.
ಕಡಿಮೆ ಮೊತ್ತಕ್ಕೆ ಉತ್ತಮ ಫ್ಲ್ಯಾಟ್ ಕೊಡಿಸುವುದಾಗಿ ನಂಬಿಸಿ ನೂರಾರು ಗ್ರಾಹಕರಿಂದ ಕೋಟ್ಯಂತರ ರೂ. ಪಡೆದುಕೊಂಡಿದ್ದ ಮಂತ್ರಿ ಗ್ರೂಪ್‌ನ ಎಂಡಿ ಸುನೀಲ್ ಪಾಂಡುರಂಗ ಏಳು ವರ್ಷವಾದರೂ ಫ್ಲ್ಯಾಟ್ ನಿರ್ಮಾಣ ಮಾಡದೆ ವಂಚಿಸಿದ್ದರು. ಈ ಸಂಬಂಧ ಕಬ್ಬನ್ ಪಾರ್ಕ್ ಮತ್ತು ಸುಬ್ರಹ್ಮಣ್ಯನಗರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಮತ್ತೂಂದೆಡೆ ವಿಚಾರಣೆಯಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿ ಬಂದಿದ್ದರಿಂದ ಜೂನ್ 24ರಂದು ವಂಚನೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಮಂತ್ರಿ ಡೆವಲಪರ್ಸ್‌ನ ಎಂಡಿ ಸುನೀಲ್ ಪಾಂಡರಂಗರನ್ನು ಬಂಧಿಸಿದ್ದರು.
ವಿಚಾರಣೆಯಲ್ಲಿ ಗ್ರಾಹಕರಿಂದ ಹಣ ಪಡೆದು ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ 300 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಜಪ್ತಿ ಮಾಡಲಾಗಿದೆ ಎಂದು ಇ.ಡಿ. ತಿಳಿಸಿದೆ.
370 ಕೋಟಿ ರೂ.ಮೌಲ್ಯದ ಡಿಜಿಟಲ್ ಕರೆನ್ಸಿ ಜಪ್ತಿ: ಮತ್ತೂಂದು ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿ ಕಾರಿಗಳು, ನಗರದಲ್ಲಿರುವ ಯಲ್ಲೋ ಟ್ಯೂನ್ ಟೆಕ್ನಾಲಜಿಸ್ ಪ್ರೈವೇಟ್ ಲಿ.ಗೆ ಸೇರಿದ ಕಂಪನಿಗಳ ಮೇಲೆ ಶುಕ್ರವಾರ ದಾಳಿ ನಡೆಸಿದ್ದಾರೆ. ಅಲ್ಲದೆ, ಕಂಪನಿಗೆ 370 ಕೋಟಿ ರೂ. ಮೌಲ್ಯದ ಡಿಜಿಟಲ್ ಕರೆನ್ಸಿಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿತ ಕಂಪನಿಯ ಬ್ಯಾಂಕ್ ಬ್ಯಾಲೆನ್ಸ್, ಪೇಮೆಂಟ್ ಗೇಟ್‌ವೇ ಬ್ಯಾಲೆನ್ಸ್, ಕ್ರಿಪ್ಟೋ ಬ್ಯಾಲೆನ್ಸ್, ಫ್ಲೀಪ್‌ವೋಲ್ಟ್ ಕ್ರಿಪ್ಟೋ ಕರೆನ್ಸಿ ಸೇರಿ 370 ಕೋಟಿ ರೂ. ಮೌಲ್ಯದ ಡಿಜಿಟಲ್ ಕರೆನ್ಸಿ ಜಪ್ತಿ ಮಾಡಲಾಗಿದೆ ಎಂದು ಇ.ಡಿ. ತಿಳಿಸಿದೆ.
ಚೀನಾ ಮೂಲದ ವ್ಯಕ್ತಿಗಳು ಆರೋಪಿ ಕಂಪನಿಯನ್ನು ಭಾರತದಲ್ಲಿ ಸ್ಥಾಪಿಸಿದ್ದು, ಆರ್‌ಬಿಐ ನಿಯಮ ಉಲ್ಲಂ ಸಿ ಸಣ್ಣ ಪ್ರಮಾಣದಲ್ಲಿ ವ್ಯವಹಾರ ಮಾಡುತ್ತಿದ್ದರು. ಅಲ್ಲದೆ, ನಕಲಿ ಸಹಿ, ಡಿಜಿಟಲ್ ದಾಖಲಾತಿಗಳ ಮೂಲಕ ಯೆಲ್ಲೋ ಟ್ಯೂನ್ ಕಂಪನಿ ತೆರೆಯಲಾಗಿದ್ದು, 2020ರಲ್ಲಿ ಕಂಪನಿ ಮಾಲೀಕರು ಭಾರತ ಬಿಟ್ಟು ಹೋಗಿದ್ದರು. ಈ ಮಾಹಿತಿ ಮೇರೆಗೆ ಇತ್ತೀಚೆಗೆ ಬೆಂಗಳೂರು ಸೇರಿ ದೇಶದ ವಿವಿಧೆಡೆ ದಾಳಿ ನಡೆಸಲಾಗಿತ್ತು. ಇದೀಗ ಶುಕ್ರವಾರ ಕೂಡ ದಾಳಿ ನಡೆಸಿ 370 ಕೋಟಿ ರೂ. ಮೌಲ್ಯದ ಡಿಜಿಟಲ್ ಕರೆನ್ಸಿ ಜಪ್ತಿ ಮಾಡಲಾಗಿದೆ ಎಂದು ಇಡಿ ತಿಳಿಸಿದೆ.