ರಾಯಚೂರು: ಮಂತ್ರಾಲಯವನ್ನು ಕಣ್ತುಂಬಿಕೊಳ್ಳುತ್ತಿದ್ದರೆ ಇದೊಂದು ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ಭಾವ ಮೂಡುತ್ತಿದೆ ಎಂದು ಆಂಧ್ರಪ್ರದೇಶದ ರಾಜ್ಯಪಾಲ ಸಿ.ಎಸ್.ಅಬ್ದುಲ್ ನಜೀರ್ ಅಭಿಪ್ರಾಯಪಟ್ಟರು.
ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಯೋಗೀಂದ್ರ ಸಭಾಮಂಟಪದಲ್ಲಿ ಗುರುವಾರ ಸಂಜೆ ನಡೆದ ರಾಘವೇಂದ್ರಾನುಗ್ರಹ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮಂತ್ರಾಲಯವು ಇಂದು ವಿಶ್ವದ ಪ್ರಸಿದ್ಧ ಧಾರ್ಮಿಕ ತಾಣವಾಗಿದೆ. ಇಲ್ಲಿ ಶತಶತಮಾನಗಳಿಂದ ನೆಲೆಸಿರುವ ರಾಯರು ವಿಶೇಷ ಶಕ್ತಿ ಹೊಂದಿದ ದೈವೀಪುರುಷರಾಗಿದ್ದಾರೆ. ಶ್ರೀಮಠವು ಇಂದು ಸಾಕಷ್ಟು ಕೆಲಸಗಳನ್ನು ಮಾಡುತ್ತಿದೆ. ಸಮಾಜ ಸೇವಾ ಕಾರ್ಯ ದೇವರ ಕೆಲಸಕ್ಕೆ ಸಮವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಕೂಡ ಮಂತ್ರಾಲಯವನ್ನು ಬಣ್ಣಿಸಿದ್ದಾರೆ. ಪೀಠಾ ಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಇಂಥ ಕ್ಷೇತ್ರವನ್ನು ಇನ್ನಷ್ಟು ಸುಂದರಗೊಳಿಸಿದ್ದಾರೆ ಎಂದರು.
ಇದನ್ನೂ ಓದಿ: Mantralayam; ಆಂಧ್ರ ಗವರ್ನರ್ ಅಬ್ದುಲ್ ನಜೀರ್ ರಿಂದ ರಾಯರಿಗೆ ವಿಶೇಷ ಪೂಜೆ
ಮುಂಬೈನ ಟಾಟಾ ಸನ್ಸ್‌ನ ಮುಖ್ಯಸ್ಥ ನಟರಾಜನ್ ಚಂದ್ರಶೇಖರನ್, ವಿದ್ವಾನ್ ರಾಮವಿಠಲಾಚಾರ್ಯ, ಖ್ಯಾತ ಪ್ರವಚನಕಾರ ಗರಿಕೆಪಾಟಿ ನರಸಿಂಹರಾವ್, ವಿಶ್ವ ಶಾಂತಿ ವಿಶ್ವವಿದ್ಯಾಲಯದ ಸಂಸ್ಥಾಪಕ ಪ್ರೊ| ವಿಶ್ವನಾಥ್ ಅವರಿಗೆ ಶ್ರೀ ರಾಘವೇಂದ್ರಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶ್ರೀಮಠದ ಪೀಠಾ ಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಅನುಗ್ರಹ ಸಂದೇಶ ನೀಡಿ, ಸಾಧಕರು ಇನ್ನೂ ಹೆಚ್ಚು ಸೇವೆ ಮಾಡಲಿ ಎನ್ನುವ ಉತ್ತಮ ಚಿಂತನೆಯೊಂದಿಗೆ ಶ್ರೀ ರಾಘವೇಂದ್ರಾನುಗ್ರಹ ಪ್ರಶಸ್ತಿ ನೀಡಿ ಅನುಗ್ರಹಿಸಲಾಗುತ್ತಿದೆ. ರಾಯರು ಜಾತ್ಯತೀತ, ಭಾಷಾತೀತ, ಪ್ರಾಂತ್ಯಾತೀತರಾಗಿ ಭಕ್ತರನ್ನು ಆಶೀರ್ವದಿಸುತ್ತಿದ್ದಾರೆ. ಮನುಕುಲ ಒಳಿತಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಎಲ್ಲ ಮಾನಸ ಮಂದಿರದಲ್ಲಿ ಶಾಶ್ವತವಾಗಿ ನೆಲೆ ನಿಂತಿದ್ದಾರೆ ಎಂದು ಹೇಳಿದರು.
ಭಕ್ತರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವ ಗುರುಗಳಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳು ಪ್ರಮುಖರು. ವಿರಳಾತಿವಿರಳಾದ ಗುರುಗಳಲ್ಲಿ ಗುರುತ್ವವಿದೆ ಎಂದು ಬಣ್ಣಿಸಿದರು. ದೇಶದಲ್ಲಿ ಶಾಂತಿ ನೆಲೆಸಲಿ, ಮಳೆ ಬೆಳೆ ಚೆನ್ನಾಗಿ ಬಂದು ರೈತರು ಸುಖ-ಶಾಂತಿಯಿಂದ ಬಾಳುವಂತಾಗಲಿ ಎಂದು ರಾಯರು ಹಾರೈಸಲಿ ಎಂದರು.
ವಿದ್ವಾನ್ ಗಿರಿಯಾಚಾರ್, ಜಸ್ಟೀಸ್ ಶ್ರೀಶಾನಂದ ಸೇರಿ ಇತರರು ಪಾಲ್ಗೊಂಡಿದ್ದರು. ಶ್ರೀಮಠದ ವ್ಯವಸ್ಥಾಪಕ ಎಸ್.ಕೆ. ಶ್ರೀನಿವಾಸರಾವ್ ಸ್ವಾಗತಿಸಿದರು.