Advertisement

ಶ್ರೀ ಸುರೇಂದ್ರ ತೀರ್ಥರ ಬೃಂದಾವನ ಸ್ಥಳಕ್ಕೆ ಮಂತ್ರಾಲಯ ಶ್ರೀ ಭೇಟಿ

01:00 PM Oct 15, 2018 | Team Udayavani |

ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯ ವಿಜಯವಿಠ್ಠಲ ದೇವಸ್ಥಾನ ಸಮೀಪದಲ್ಲಿ ಮಂತ್ರಾಲಯ ರಾಯರ ಮಠದ ಪೀಠಾಧಿಪತಿಗಳಾಗಿದ್ದ ಶ್ರೀ ಸುರೇಂದ್ರ ತೀರ್ಥರ ಬೃಂದಾವನ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮಂತ್ರಾಲಯ ಮಠಾಧೀಶರಾದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ರವಿವಾರ ಹಂಪಿಗೆ ಭೇಟಿ ನೀಡಿ ಪರಿಶೀಲಿಸಿದರು.

Advertisement

ವಿಜಯವಿಠ್ಠಲ ದೇವಸ್ಥಾನದ ಸಮೀಪದಲ್ಲಿ ಪತ್ತೆಯಾದ ಶ್ರೀ ಸುರೇಂದ್ರ ತೀರ್ಥರ ಬೃಂದಾವನ ಸ್ಥಳಕ್ಕೆ ತೆರಳಿ ಪರಿಶೀಲಿಸಿ, ಸುತ್ತಮುತ್ತಲಿನ ಪ್ರದೇಶದ ಮಂಟಪಗಳನ್ನು ವೀಕ್ಷಿಸಿದರು.
 
ನಂತರ ಶ್ರೀ ಸುರೇಂದ್ರ ತೀರ್ಥರಿಗೆ ವಿಜಯನಗರ ಸಾಮ್ರಾಜ್ಯದ ಅರಸ ರಾಮರಾಯ ನೀಡಿದ ತಾಮ್ರ ಶಾಸನ, ಹಲವು ದಾಖಲೆಗಳನ್ನು ಬಿಡುಗಡೆಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ರಾಯರ ಗುರುಗಳಾದ ಶ್ರೀ ಸುರೇಂದ್ರ ತೀರ್ಥರ ಬೃಂದಾವನ ಹಲವು
ದಶಕಗಳಿಂದ ಪತ್ತೆಯಾಗಿರಲಿಲ್ಲ. ಭಾರತೀಯ ಪುರಾತತ್ವ ಹಾಗೂ ರಾಜ್ಯ ಪುರಾತತ್ವ ಇಲಾಖೆ ಹಂಪಿಯಲ್ಲಿ ಉತನನ ಕೈಗೊಂಡ ಸಂದರ್ಭದಲ್ಲಿ ಹಲವು ಕುರುಹುಗಳು ಪತ್ತೆಯಾಗಿದ್ದು, ಬೃಂದಾವನವೂ ಪತ್ತೆಯಾಗಿರುವುದು ಸಂತಸ ತಂದಿದೆ ಎಂದರು. 

ಶ್ರೀಸುರೇಂದ್ರ ತೀರ್ಥರು ವಿಜಯನಗರ ಸಾಮ್ರಾಜ್ಯದ ರಾಜಗುರುಗಳಾಗಿದ್ದ ಶ್ರೀ ವ್ಯಾಸರಾಜರ ಸಮಕಾಲೀನರಾಗಿದ್ದು, ಶ್ರೀ ಸುರೇಂದ್ರ ತೀರ್ಥರಿಗೆ ವಿಜಯನಗರದ ಅರಸ ರಾಮರಾಯ ನೀಡಿದ ಹಲವು ಭೂಮಿಗಳು ಇಂದಿಗೂ ಶ್ರೀಮಠದ ಅಧೀನದಲ್ಲಿವೆ. ಜತೆಗೆ ಶ್ರೀ ಸುರೇಂದ್ರ ತೀರ್ಥರ ಮಠ, ಬೃಂದಾವನದ ಬಗ್ಗೆ ಡಾ| ಇಂದಿರಾರವರು ಸಂಶೋಧನೆ ನಡೆಸಿ ಮಹಾಪ್ರಬಂಧ ಬರೆದಿದ್ದು ಇದರಲ್ಲೂ ಹಲವು ದಾಖಲೆಗಳ ಉಲ್ಲೇಖವಿದೆ.

ಒಟ್ಟಿನಲ್ಲಿ ಇಲ್ಲಿ ಪತ್ತೆಯಾಗಿರುವುದು ಶ್ರೀಸುರೇಂದ್ರ ತೀರ್ಥರದ್ದೇ ಬೃಂದಾವನ ಎಂದು ಸ್ಪಷ್ಟಪಡಿಸಿದರು. ಪತ್ತೆಯಾಗಿರುವ ಬೃಂದಾವನ ಶ್ರೀಸುರೇಂದ್ರ ತೀರ್ಥರದ್ದೇ ಎನ್ನುವುದಕ್ಕೆ ಹಲವು ಸಾಕ್ಷಿಗಳಿವೆ. ಇದರ ಸಮೀಪದಲ್ಲಿ ಇವರ ಆಶ್ರಮ ಗುರುಗಳಾದ ಶ್ರೀರಘುನಂದನ ತೀರ್ಥರ ಮೂಲ
ಬೃಂದಾವನವಿದೆ. ಜೊತೆಗೆ ಇದೇ ಸ್ಥಳದಲ್ಲಿಯೇ ಶ್ರೀವ್ಯಾಸರಾಜರ ಶಿಷ್ಯರಾಗಿದ್ದ ಶ್ರೀ ವಿಷ್ಣುತೀರ್ಥರನ್ನು ಶ್ರೀ ಸುರೇಂದ್ರ ತೀರ್ಥರಿಗೆ ದತ್ತು ನೀಡಿ ಆಶ್ರಮವಿತ್ತ ಕುರುಹುಗಳಿವೆ ಎಂದು ತಿಳಿಸಿದರು.

ಶ್ರೀ ಸುರೇಂದ್ರ ತೀರ್ಥರ ಮಠದ ಆವರಣದಲ್ಲಿ ಪತ್ತೆಯಾಗಿರುವ ಬೃಂದಾವನಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದರು.
 
ಹಂಪಿ ಅತ್ಯಂತ ಪವಿತ್ರ ಸ್ಥಳ. ಪುರಾತತ್ವ ಇಲಾಖೆ ನೀತಿ ನಿಯಮಗಳನ್ನು ಮೀರಿ ಇಲ್ಲಿ ಶ್ರೀ ಮಠದಿಂದ ಯಾವುದೇ ರೀತಿಯ ಕಾರ್ಯ ಕೈಗೊಳ್ಳುವುದಿಲ್ಲ. ಇಲ್ಲಿನ ನೀತಿ, ನಿಯಮಗಳಂತೆ ನಡೆದುಕೊಂಡು ನಮ್ಮಲ್ಲಿರುವ ದಾಖಲೆಗಳನ್ನು ಇಲಾಖೆಗೆ ಸಲ್ಲಿಸಿ ನಂತರ ಬೃಂದಾವನ ಪುನರ್‌ ಪ್ರತಿಷ್ಠಾಪನೆ ಸೇರಿದಂತೆ ಪೂಜಾಕೈಂಕರ್ಯ ನಡೆಸಲಾಗುವುದು. ಈ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದು ದಾಖಲೆಗಳನ್ನು ಕಳುಹಿಸಲಾಗುವುದು ಎಂದರು.

Advertisement

ಶ್ರೀಮಠದ ಮಹಾ ಮುಖ್ಯೋಪಾಧ್ಯಾಯ ರಾಜಾ ಎಸ್‌. ಗಿರಿ ಆಚಾರ್ಯ, ಮಂತ್ರಾಲಯ ಸಂಸ್ಕೃತ ವಿದ್ಯಾಪೀಠದ ಡಾ| ಎನ್‌. ವಾದಿರಾಜಾಚಾರ್ಯ, ಶ್ರೀ ಮಠದ ಶಿಷ್ಯರಾದ ಗುರುರಾಜ ದಿಗ್ಗಾವಿ, ಅನಂತ ಪುರಾಣಿಕ್‌, ನಾಗರಾಜ, ಮಂಜುನಾಥ, ಡಣಾಪುರ ವಿಜಯಕುಮಾರ, ಡಾ| ವಿದ್ಯಾಧರ ಕಿನ್ನಾಳ್‌, ವಿಷ್ಣುತೀರ್ಥ ಕಲ್ಲೂರಕರ್‌ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next