ರಾಯಚೂರು: ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್ ಜಾರಿಗೊಳಿಸಿದರೂ ಭಕ್ತರಿಂದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಸೇವೆಗೆ ಅಡ್ಡಿಯಾಗಿಲ್ಲ. ಆನ್‌ಲೈನ್‌ನಲ್ಲೇ ನಿರೀಕ್ಷೆ ಮೀರಿ ಸೇವೆ ಸಮರ್ಪಣೆಯಾಗಿದ್ದು, 2 ತಿಂಗಳುಗಳಲ್ಲಿ 2.40 ಕೋಟಿ ರೂ. ಸಂಗ್ರಹವಾಗಿದೆ.
ಮಂತ್ರಾಲಯಕ್ಕೆ ದೇಶ -ವಿದೇಶ ಗಳಿಂದ ಭಕ್ತರು ನಡೆದುಕೊಳ್ಳುತ್ತಾರೆ. ಪ್ರತೀ ವರ್ಷ ಇಲ್ಲಿ ನಡೆಯುವ ರಾಯರ ಆರಾಧನೆ, ವರ್ಧಂತ್ಯುತ್ಸವ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಜನಸಾಗರವೇ ಹರಿದು ಬರುತ್ತದೆ. ಆದರೆ ವರ್ಷದಿಂದ ಭಕ್ತರು ಬರುವುದಕ್ಕೆ ಕೊರೊನಾ ಅಡ್ಡಿಯಾಗಿದೆ. ಕಳೆದ ವರ್ಷ ಆರಾಧನೆಯನ್ನೂ ಕೈ ಬಿಡಲಾಗಿತ್ತು. ಭಕ್ತರು ಆನ್‌ಲೈನ್‌ನಲ್ಲೇ ರಾಯರ ವೈಭವ ಕಣ್ತುಂಬಿಕೊಂಡಿದ್ದರು.
ಹಿಂದೆ ಪ್ರತೀ ತಿಂಗಳು ರಾಯರ ಹುಂಡಿ ಎಣಿಕೆ ಮಾಡಿದಾಗ 1.20 ಕೋಟಿ ರೂ.ಗೂ ಅಧಿ ಕ ಹಣ ಸಂಗ್ರಹವಾಗುತ್ತಿತ್ತು. ಈಗ ಭಕ್ತರು ದೇಣಿಗೆ, ಸೇವೆಗಳನ್ನು ಆನ್‌ಲೈನ್‌ನಲ್ಲೇ ಸಮರ್ಪಿಸಿದ್ದಾರೆ. ಅನೇಕರು ಮಠದ ಖಾತೆಗೆ ಹಣ ಸಂದಾಯ ಮಾಡಿದ್ದರೆ ಹಲವರು ಡಿ.ಡಿ.ಗಳ ಮೂಲಕ ಕಳುಹಿಸಿದ್ದಾರೆ. ಈಗ ಸಂಗ್ರಹವಾಗಿರುವ ಮೊತ್ತದಲ್ಲಿ ಶೇ. 50 ಅನ್ನದಾನಕ್ಕೆ ಬಂದಿದೆ ಎಂದು ಮಠದ ವ್ಯವಸ್ಥಾಪಕರು ತಿಳಿಸಿದ್ದಾರೆ.
ಲಾಕ್‌ಡೌನ್ ಜಾರಿಯಾಗಿ ದರ್ಶನ ಅವಕಾಶ ಸ್ಥಗಿತಗೊಂಡಾಗ ಸಾಕಷ್ಟು ಭಕ್ತರು ಆನ್‌ಲೈನ್ ಆಗಿ ಸೇವೆ ಸಲ್ಲಿಸಿದ್ದಾರೆ. ಎರಡು ತಿಂಗಳುಗಳಲ್ಲಿ 2.40 ಕೋಟಿ ರೂ. ಸಂಗ್ರಹವಾಗಿದೆ. ಆನ್‌ಲೈನ್ ಸೇವೆಗಳನ್ನು ಈಗಲೂ ಮುಂದುವರಿಸಲಾಗುತ್ತಿದೆ.
– ವೆಂಕಟೇಶ ಜೋಶಿ, ಮಂತ್ರಾಲಯ ಮಠದ ವ್ಯವಸ್ಥಾಪಕರು