Advertisement

ಆಡಂಬರದ ಗೌಜಿ ನಡುವೆ ಮಾದರಿಯಾದ ಅವಿನಾಶ್ –ಅಕ್ಷತಾ ಮಂತ್ರಮಾಂಗಲ್ಯ..

09:17 PM May 25, 2018 | Karthik A |

     ಇವತ್ತಿನ ಈ ಲೇಖನ ನಾನು ಇತ್ತೀಚೆಗೆ ಸಾಕ್ಷಿಯಾದ ವಿಶಿಷ್ಠ ಮಾದರಿಯ ವಿವಾಹ ಕಾರ್ಯಕ್ರಮವೊಂದರ ಕುರಿತಾಗಿರುವಂತದ್ದು. ರಸಋಷಿ ಕುವೆಂಪು ಅವರು ರೂಪಿಸಿದ ಮಂತ್ರಮಾಂಗಲ್ಯ ಎಂಬ ಸರಳ ವಿವಾಹ ಪದ್ಧತಿ ಬಗ್ಗೆ ಹೇಳಲು ಇದು ಸಕಾಲವಾಗಿದೆ.

Advertisement

     ಕನ್ನಡದ ನೆಲದಲ್ಲಿ ಬಾಳಿ ಬದುಕಿ ಇಡೀ ಜಗತ್ತಿಗೇ ‘ವಿಶ್ವಮಾನವ ಸಂದೇಶ’ವನ್ನು ಸಾರಿದ ರಾಷ್ಟ್ರಕವಿ ಕುವೆಂಪು ಅವರ ಕನಸು ಮಂತ್ರ ಮಾಂಗಲ್ಯ ವಿವಾಹದ ಪರಿಕಲ್ಪನೆ. ಗಂಡು-ಹೆಣ್ಣಿನ ಸಂಬಂಧವನ್ನು ಬೆಸೆಯುವುದರ ಜೊತೆಗೆ ಆ ಎರಡು ಕುಟುಂಬಗಳ ನಡುವೆ ಪರಸ್ಪರ ವಿಶ್ವಾಸ, ಪ್ರೀತಿ, ಸಾಮರಸ್ಯ ಮೂಡುವ ಅಪೂರ್ವ ಘಳಿಗೆಯೇ ವಿವಾಹ ಸಮಾರಂಭ. ಆದರೆ ನಮ್ಮ ಸಮಾಜದಲ್ಲಿ ಇವತ್ತು ಈ ವಿವಾಹ ಸಮಾರಂಭವೆನ್ನುವುದು ಎರಡು ಕುಟುಂಬಗಳ ನಡುವೆ ಬಾಂಧವ್ಯವನ್ನು ಬೆಸೆಯುವುವದರ ಬದಲಿಗೆ ಪರಸ್ಪರ ಪ್ರತಿಷ್ಠೆಯ ಕಣವಾಗಿ ಬದಲಾಗಿರುವುದು ಎಲ್ಲಾ ಸಮುದಾಯಗಳಲ್ಲಿಯೂ ಕಂಡುಬರುತ್ತಿರುವ ಒಂದು ಸಮಸ್ಯೆಯಾಗಿದೆ ಎಂದರೆ ತಪ್ಪಾಗಲಾರದು. ಈ ಎಲ್ಲಾ ಸಮಸ್ಯೆಗಳಿಗೆ ಉತ್ತರ ರೂಪವೆಂಬಂತೆ ರಸಋಷಿ ಕುವೆಂಪು ಅವರು ‘ಮಂತ್ರ ಮಾಂಗಲ್ಯ’ ಎಂಬ ವಿಭಿನ್ನ ರೀತಿಯ ಸರಳ ವಿವಾಹ ಪರಿಕಲ್ಪನೆಯನ್ನು ರೂಪಿಸಿ, ಇವತ್ತಿನ ದಿನ ಸಾವಿರಾರು ಜೋಡಿಗಳು ಈ ಮಂತ್ರಮಾಂಗಲ್ಯ ವಿವಾಹ ಮಾದರಿಯ ಮೂಲಕ ದಾಂಪತ್ಯ ಜೀವನವನ್ನು ಪ್ರವೇಶಿಸಿ ಸಮಾಜಕ್ಕೆ ಮಾದರಿಯಾಗುವ ಜೀವನವನ್ನು ಸಾಗಿಸುತ್ತಿದ್ದಾರೆ.

       ಕರಾವಳಿ ಭಾಗದವನಾದ ನನಗೆ ಈ ಮಂತ್ರ ಮಾಂಗಲ್ಯ ವಿವಾಹದ ಕುರಿತಾಗಿ ಕೇಳಿ – ಓದಿ ಗೊತ್ತಿತ್ತೇ ಹೊರತು ಇದುವರೆಗೂ ಈ ವಿಶಿಷ್ಠ ವಿವಾಹ ಕಾರ್ಯಕ್ರಮಕ್ಕೆ ಪ್ರತ್ಯಕ್ಷ ಸಾಕ್ಷಿಯಾಗುವ ಅವಕಾಶ ಒದಗಿ ಬಂದಿರಲಿಲ್ಲ. ಆದರೆ ಇತ್ತೀಚೆಗೆ, ಉಡುಪಿ ಪರಿಸರದಲ್ಲಿ ‘ಬೀಯಿಂಗ್ ಸೋಷಿಯಲ್’ ಸಂಘಟನೆಯ ಮೂಲಕ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತ ಬಂದಿರುವ ಮಿತ್ರ ಅವಿನಾಶ್ ಕಾಮತ್ ಅವರು ಈ ಮಂತ್ರಮಾಂಗಲ್ಯ ವಿಧಾನದ ಮೂಲಕವೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂಬ ವಿಷಯ ತಿಳಿದಾಗ ಈ ವಿವಾಹ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ ಒದಗಿ ಬಂದಿತ್ತು, ಅದೂ ಕುವೆಂಪು ಅವರ ಕರ್ಮಭೂಮಿ ಕುಪ್ಪಳ್ಳಿಯ ನೆಲದಲ್ಲಿ..!

       ಕರಾವಳಿ ಭಾಗದ ಶಾಸಕರೊಬ್ಬರು ಈ ಹಿಂದೆ ಸಾಮೂಹಿಕ ವಿವಾಹ ಸಮಾರಂಭದ ಮೂಲಕ ದಾಂಪತ್ಯ ಜೀವನವನ್ನು ಪ್ರವೇಶಿಸಿದ ಘಟನೆಯಿಂದ ಪ್ರೇರೇಪಿತರಾಗಿ ಅವಿನಾಶ್ ಅವರು ತಾನು ಮದುವೆಯಾದರೆ ಇದೇ ಮಾದರಿಯಲ್ಲಿ ಆಗಬೇಕು ಅಂದುಕೊಂಡಿದ್ದರು, ಈ ನಡುವೆ ಸ್ನೇಹಿತರೊಂದಿಗೆ ಕುಪ್ಪಳ್ಳಿಗೆ ತೆರಳಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಈ ‘ಮಂತ್ರ ಮಾಂಗಲ್ಯ’ ವಿವಾಹ ವಿಚಾರದ ಕುರಿತಾಗಿ ತಿಳಿದುಕೊಂಡರು. ಆಗ್ಲೇ ಕಾಮತರು ತಮ್ಮ ವಿವಾಹ ಮಂತ್ರ ಮಾಂಗಲ್ಯ ಮಾದರಿಯಲ್ಲೇ ಎಂಬುದನ್ನು ನಿರ್ಧರಿಸಿಯಾಗಿತ್ತು.

ಕೂಡಿ ಬಂದಿತು ಶುಭ ಘಳಿಗೆ…:


     
ಹೀಗಿರುತ್ತಾ ಅವಿನಾಶ್ ಕಾಮತ್ ಅವರ ವಿವಾಹವು ಶಿರಸಿಯ ಅಕ್ಷತಾ ಅವರೊಂದಿಗೆ ನಿಶ್ಚಯಗೊಳ್ಳುತ್ತದೆ. ಈಗ ಅವಿನಾಶ್ ಮುಂದಿದ್ದ ಸವಾಲೆಂದರೆ ಮಂತ್ರ ಮಾಂಗಲ್ಯ ವಿಧಾನಕ್ಕೆ ತಮ್ಮ ಮನೆಯವರನ್ನು ಹಾಗೂ ಅಕ್ಷತಾ ಮನೆಯವರನ್ನು ಒಪ್ಪಿಸುವುದಾಗಿತ್ತು, ಈ ಸವಾಲನ್ನು ಅವಿನಾಶ್ ಅವರು ಯಶಸ್ವಿಯಾಗಿ ನಿಭಾಯಿಸುತ್ತಾರೆ. ಇನ್ನು ಮಂತ್ರ ಮಾಂಗಲ್ಯ ಎಂಬ ಈ ಸರಳ ವಿವಾಹವನ್ನು ಇನ್ನಷ್ಟು ವಿಭಿನ್ನವಾಗಿ ವೈಶಿಷ್ಟ್ಯಪೂರ್ಣವಾಗಿ ಮಾಡಬೇಕೆಂಬ ಯೋಚನೆಯೂ ಇವರಿಗಿತ್ತು. ಇದಕ್ಕಾಗಿ ಮದುವೆಗೆ ಬಂದ ಸ್ನೇಹಿತರಿಗೆ ಪುಸ್ತಕ ಉಡುಗೊರೆ, ಮದುವೆಯ ಸವಿನೆನಪಿಗೆ ದಂಪತಿಗಳು ಗಿಡ ನೆಡುವುದು, ಮದುವೆಯ ಸವಿನೆನಪಿಗಾಗಿ ರಕ್ತದಾನ.. ಹೀಗೆ ಮಂತ್ರಮಾಂಗಲ್ಯಕ್ಕೆ ಪೂರಕವಾಗಿ ಈ ಎಲ್ಲಾ ಸಮಾಜಮುಖಿ ಕಾರ್ಯಕ್ರಮಗಳು ಇನ್ನಷ್ಟು ವಿಭಿನ್ನವಾಗಿಸಿತು. ಮಾತ್ರವಲ್ಲದೇ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದ ಸಾಲುಮರದ ತಿಮ್ಮಕ್ಕ, ಮಂಜಮ್ಮ ಜೋಗತಿ, ಜಯಂತ್ ಕಾಯ್ಕಿಣಿ ಸೇರಿದಂತೆ ಇನ್ನುಳಿದ ಗಣ್ಯರ ಸಮ್ಮುಖದಲ್ಲಿ ಬಡ ಮಕ್ಕಳಿಗೆ ಶಿಕ್ಷಣಕ್ಕೆ ಸಹಕಾರಿಯಾಗುವ ‘ಬಾಂಧವ್ಯ ಬೆಳಕು’ ಎಂಬ ವಿಶಿಷ್ಠ ಯೋಜನೆಗೆ ಈ ವಿವಾಹ ಸಮಾರಂಭ ಮತ್ತು ಕುಪ್ಪಳ್ಳಿ ಸಾಕ್ಷಿಯಾಯಿತು.

Advertisement


ಮಂತ್ರ ಮಾಂಗಲ್ಯದಲ್ಲಿ ಗಮನ ಸೆಳೆದ ಅಂಶಗಳು…:
ಕುವೆಂಪು ಅವರ ವಿಶ್ವಮಾನವ ಗೀತೆಯನ್ನು ವಿದ್ಯಾಶ್ರೀ ಆಚಾರ್ಯ ಅವರು ಹಾಡುವ ಮೂಲಕ ವಿವಾಹ ಸಮಾರಂಭ ಕಾರ್ಯಕ್ರಮ ಪ್ರಾರಂಭಗೊಂಡಿತು.
ನಾಡಿನ ಹಿರಿಯ ಚೇತನಗಳಾಗಿರುವ ಸಾಲುಮರದ ತಿಮ್ಮಕ್ಕ, ಮಂಜಮ್ಮ ಜೋಗತಿಯರ ಉಪಸ್ಥಿತಿ.
ಸಾಹಿತಿ ಮತ್ತು ಚಿತ್ರಗೀತ ರಚನೆಕಾರ ಜಯಂತ್ ಕಾಯ್ಕಣಿಯವರು ಮಂತ್ರ ಮಾಂಗಲ್ಯದ ಸಾರಥ್ಯ ವಹಿಸಿದ್ದು.
ಪತ್ರಿಕೋದ್ಯಮ, ವೈದ್ಯಕೀಯ, ರಂಗಭೂಮಿ, ಸಾಮಾಜಿಕ ಸಂಘಟನೆಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಈ ಸರಳ ವಿವಾಹ ಸಮಾರಂಭಕ್ಕೆ ಸಾಕ್ಷಿಯಾಗಿದ್ದು.
ಮಂತ್ರ ಮಾಂಗಲ್ಯ ಮಾದರಿಯಲ್ಲಿ ಹೆತ್ತವರು, ಸಂಬಂಧಿಕರು ಹಾಗೂ ನೆರೆದಿದ್ದ ಹಿತೈಷಿಗಳ ಸಮ್ಮುಖದಲ್ಲಿ ಹಾರ ಬದಲಾಯಿಸಿಕೊಂಡು ಸತಿ-ಪತಿಗಳಾದ ಬಳಿಕ ಅವಿನಾಶ್ ದಂಪತಿ ಹಿರಿಯ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಸ್ಮಾರಕದ ಬಳಿಯಲ್ಲಿ ಗಿಡ ನೆಟ್ಟು ತಮ್ಮ ವೈವಾಹಿಕ ಬದುಕಿನ ಆರಂಭವನ್ನು ಸ್ಮರಣೀಯವಾಗಿಸಿಕೊಂಡರು.
ಇತ್ತೀಚಿನ ದಿನಗಳಲ್ಲಿ ಎಲ್ಲೆಂದರಲ್ಲಿ ಫ್ಲೆಕ್ಸ್ ಬ್ಯಾನರ್ ಗಳೇ ರಾರಾಜಿಸುತ್ತಿರುವ ಸಂದರ್ಭದಲ್ಲಿ ಈ ವಿವಾಹ ಕಾರ್ಯಕ್ರಮದಲ್ಲಿ ಗಮನ ಸೆಳೆದ ಜನಾರ್ಧನ್ ಹಾವಂಜೆ ಅವರ ಕೈಬರಹದಲ್ಲಿ ರೂಪುಗೊಂಡ ಆಕರ್ಷಕ ಬಟ್ಟೆ ಬ್ಯಾನರ್.
ಕವಿ ಜಯಂತ್ ಕಾಯ್ಕಿಣಿ ಅವರು ಮಂತ್ರ ಮಾಂಗಲ್ಯ ಪುಸ್ತಕದಲ್ಲಿನ ಕೆಲವು ಆಯ್ದ ಮಂತ್ರ ಸಾಲುಗಳನ್ನು (ದಂಪತಿಗೆ ದಾಂಪತ್ಯ ಸಲಹಾ ರೂಪದ ಪ್ರತಿಜ್ಞಾ ವಾಕ್ಯಗಳು) ಉಚ್ಛರಿಸಿದ್ದು.
ಮದುವೆ ಮನೆಗಳಲ್ಲಿ ಸಾಮಾನ್ಯವಾಗಿ ಸಹಿ ತಿಂಡಿ ಹಂಚುವಿಕೆ ಇದ್ದರೆ ಈ ವಿವಾಹ ಸಮಾರಂಭದಲ್ಲಿ ಅನ್ನಪೂರ್ಣ ನರ್ಸರಿಯ ಪ್ರಸಾದ್ – ಪ್ರಸನ್ನ ದಂಪತಿ ತಂದಿದ್ದ ಜಂಬೂ ನೇರಳೆ ಹಣ್ಣನ್ನು ಹಂಚಲಾಯಿತು.
ನಿಶ್ಚಿತಾರ್ಥ, ಮೆಹಂದಿ ಇಲ್ಲ, ಬದಲಾಗಿ ಮದುವೆ ಹಿಂದಿನ ದಿನವೇ ಬಂಧುಗಳು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಕುಪ್ಪಳ್ಳಿಯಲ್ಲೇ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ಸರಳ ನಿಶ್ಚಿತಾರ್ಥ ನಡೆಸಲಾಯಿತು.
ಆಮಂತ್ರಣ ಪತ್ರಿಕೆ ಮುದ್ರಿಸಿರಲಿಲ್ಲ, ಇದರ ಬದಲಿಗೆ ಕೈ ಬರಹದ ಕರೆಯೋಲೆ ಮತ್ತು ವಾಟ್ಸ್ಯಾಪ್, ಫೇಸ್ಬುಕ್ ಮೂಲಕವೇ ಆಹ್ವಾನ.
ವಿರೂಪಾಕ್ಷ ದೇವರಮನೆಯವರ ‘ಸ್ವಲ್ಪ ಮಾತಾಡಿ ಪ್ಲೀಸ್’ ಅಜ್ಜಿಯ ಕುರಿತಾಗಿರುವ ‘ಸಾಲುಮರದ ಸರದಾರಿಣಿ’ ಮತ್ತು ಹಾಜಿ ಅಬ್ದಲ್ಲಾ ಸಾಹೇಬರ ಕುರಿತಾಗಿ ಮೂಡಿಬಂದಿರುವ ಕೃತಿಗಳನ್ನು ಅತಿಥಿ -ಗಣ್ಯರಿಗೆ ನೀಡಲಾಯಿತು.


ಕರಾವಳಿ ಭಾಗದಲ್ಲಿ ಅಷ್ಟೊಂದು ಪರಿಚಯವಿಲ್ಲದಿರುವ ಈ ಮಂತ್ರ ಮಾಂಗಲ್ಯ ವಿವಾಹ ಮಾದರಿಯನ್ನು ಒಪ್ಪಿಕೊಂಡು ರಸಋಷಿಯ ಕರ್ಮಭೂಮಿಯಲ್ಲೇ ಸರಳ ಮಾದರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅವಿನಾಶ್ ಹೇಳುವ ಪ್ರಕಾರ, ಈ ಕಾರ್ಯಕ್ರಮದ ಯಶಸ್ಸು ಎರಡೂ ಕುಟುಂಬ ಸದಸ್ಯರಿಗೆ ಹಾಗೂ ತನ್ನ ವಿಶಾಲ ಮಿತ್ರ ಬಳಗಕ್ಕೆ ಸಲ್ಲಬೇಕು ಎಂಬ ಮಾತುಗಳನ್ನಾಡುತ್ತಾರೆ. ಮದುವೆ ಎಷ್ಟು ಆಡಂಬರವಾಗಿ ಆಯಿತೆನ್ನುವುದು ಮುಖ್ಯವಲ್ಲ ಆ ಬಳಿಕ ದಾಂಪತ್ಯ ಜೀವನವನ್ನು ಎಷ್ಟು ಚೆನ್ನಾಗಿ ನಡೆಸುತ್ತೇವೆ ಎನ್ನುವದೇ ಮುಖ್ಯ ಎಂದು ಭಾವಿಸುವ ಯುವಜನತೆ ಹೆಚ್ಚೆಚ್ಚು ಈ ರೀತಿಯ ಸರಳ ವಿವಾಹಗಳಿಗೆ ಆಕರ್ಷಿತರಾಗುವ ಮೂಲಕ ನಮ್ಮ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಾಗಬೇಕು ಎಂಬುದು ಅವಿನಾಶ್ ದಂಪತಿ ಸಹಿತ ಈ ಮಂತ್ರಮಾಂಗಲ್ಯ ಮದುವೆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದವರ ಅಭಿಪ್ರಾಯವಾಗಿತ್ತು.


ಕುವೆಂಪು ಪ್ರತಿಪಾದಿಸಿದ ಮಂತ್ರ ಮಾಂಗಲ್ಯ ಸರಳ, ಸುಂದರ ಮತ್ತು ಅರ್ಥಪೂರ್ಣ. ಹಿಂದು, ಕ್ರೈಸ್ತ, ಮುಸಲ್ಮಾನ ಹೀಗೆ ಎಲ್ಲರೂ ಮಂತ್ರ ಮಾಂಗಲ್ಯ ರೀತಿ ಮದುವೆ ಆಗಬಹುದು. ನಿಮ್ಮೂರಲ್ಲೂ ಆಗಬಹುದು. ನಿಮಗೂ ಈ ರೀತಿ ಮದುವೆ ಆಗುವ ಮನಸಿದ್ದರೆ ನಿಮ್ಮೊಂದಿಗೆ ನಾನಿದ್ದೇನೆ. ನಿಮ್ಮ ಮನೆಯವರೊಂದಿಗೆ ಮಾತನಾಡಬೇಕೆಂದಿದ್ದರೆ ನಾನು ಬರುತ್ತೇನೆ, ಅಕ್ಷತಾಳೊಂದಿಗೆ…
      – ಅವಿನಾಶ್ ಕಾಮತ್

ಲೇಖನ: ಹರಿಪ್ರಸಾದ್ ನೆಲ್ಯಾಡಿ








 

Advertisement

Udayavani is now on Telegram. Click here to join our channel and stay updated with the latest news.

Next