Advertisement

Fraud: ಹಣಕ್ಕಾಗಿ 30 ಮಹಿಳೆಯರಿಗೆ ಮದುವೆ ವಂಚನೆ!

11:02 AM Apr 12, 2024 | Team Udayavani |

ಬೆಂಗಳೂರು: ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ ಗಳಲ್ಲಿ ನಕಲಿ ಖಾತೆ ತೆರೆದು ವಿಚ್ಛೇದಿತ ಹಾಗೂ ವಿಧವೆ ಯರನ್ನು ಪರಿಚಯಿಸಿಕೊಂಡು ಮದುವೆ ಯಾಗುವುದಾಗಿ ನಂಬಿಸಿ, ಅವರಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ತುಮಕೂರು ಮೂಲದ ದೀಪಕ್‌(42) ಬಂಧಿತ. ಆರೋಪಿ ಜೆ.ಪಿ.ನಗರದ 41 ವರ್ಷದ ಮಹಿಳೆಗೆ ಮದುವೆಯಾಗುವುದಾಗಿ ನಂಬಿಸಿ 30 ಸಾವಿರ ರೂ. ಪಡೆದು ವಂಚಿಸಿದ್ದ. ಈ ಸಂಬಂಧ ಆಕೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.

ತುಮಕೂರು ಜಿಲ್ಲೆಯ ಹುಳಿಯಾರಿನ ದೀಪಕ್‌, ದ್ವಿತೀಯ ಪಿಯುಸಿ ಓದಿದ್ದಾನೆ. ನಿರುದ್ಯೋಗಿಯಾದ ಆತ ಹಣ ಸಂಪಾದನೆಗಾಗಿ ಬೆಂಗಳೂರಿಗೆ ಬಂದಿದ್ದಾನೆ. ಆದರೆ, ಮ್ಯಾಟ್ರಿಮೋನಿಯಲ್‌ ಮೂಲಕ ವಂಚನೆ ಮಾಡುವುದನ್ನು ಅರಿತುಕೊಂಡು ಕೃತ್ಯ ಎಸಗುತ್ತಿದ್ದಾನೆ. ಮ್ಯಾಟ್ರಿಮೋನಿಯಲ್‌ನಲ್ಲಿ ನಕಲಿ ಖಾತೆ ತೆರೆದು, ತಾನೂ ಬ್ಯಾಂಕ್‌ ಮ್ಯಾನೇಜರ್‌, ಎಂಜಿನಿಯರ್‌ ಹೀಗೆ ದೊಡ್ಡ ಹುದ್ದೆಗಳನ್ನು ನೋಂದಾಯಿಸಿ ಹತ್ತಾರು ಪ್ರೊಫೈಲ್‌ ಸೃಷ್ಟಿಸಿದ್ದಾನೆ. ಇತ್ತೀಚೆಗೆ ಜೆ.ಪಿ.ನಗರದ ಅವಿವಾಹಿತ ಮಹಿಳೆ ವರನ ಅನ್ವೇಷಣೆಗಾಗಿ ಮ್ಯಾಟ್ರಿಮೋನಿ ವೆಬ್‌ಸೈಟ್‌ ನಲ್ಲಿ ಕಳೆದ ಫೆಬ್ರವರಿಯಲ್ಲಿ ಖಾತೆ ತೆರೆದಿದ್ದಾರೆ. ಅದೇ ವೆಬ್‌ಸೈಟ್‌ನಲ್ಲಿ ದೀಪಕ್‌ ಸಹ ಖಾತೆ ತೆರೆದಿದ್ದ.

ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ದೀಪಕ್‌ನ ಪ್ರೊಫೈಲ್‌ ನೋಡಿದ್ದ ದೂರುದಾರೆ ಆತನನ್ನು ಸಂಪರ್ಕಿಸಿದ್ದರು. ಆಗ ಆರೋಪಿ ದೀಪಕ್‌, “ತಮಿಳುನಾಡಿನ ಮದುರೈ ಮೂಲದ ನಾನು ನಗರದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಮ್ಯಾನೇಜರ್‌ ಆಗಿದ್ದೇನೆ’ ಎಂದು ಹೇಳಿಕೊಂಡಿದ್ದ. ಅದನ್ನು ನಂಬಿದ್ದ ಮಹಿಳೆ, ಆತನ ಜತೆ ವಾಟ್ಸ್‌ಆ್ಯಪ್‌ ಚಾಟಿಂಗ್‌ ಆರಂಭಿಸಿದ್ದು, ತನ್ನ ವೈಯಕ್ತಿಕ ವಿಚಾರಗಳನ್ನು ಆತನ ಬಳಿ ಹಂಚಿಕೊಂಡಿದ್ದರು. ಆ ನಂತರ ದೀಪಕ್‌, ಮಹಿಳೆಯನ್ನು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿದ್ದ. ಈ ಮಧ್ಯೆ ದೀಪಕ್‌, ತನ್ನ ಪರ್ಸ್‌ ಕಳೆದು ಹೋಗಿದ್ದು ತುರ್ತಾಗಿ ಹಣ ಬೇಕಿದೆ ಎಂದು ಮಹಿಳೆಯಿಂದ 30 ಸಾವಿರ ರೂ. ಪಡೆದುಕೊಂಡಿದ್ದಾನೆ. ಅಲ್ಲದೆ, ಇಬ್ಬರು ವೈಯಕ್ತಿಕವಾಗಿ ಮಾತನಾಡಲು ಸಿಮ್‌ಕಾರ್ಡ್‌ ಬೇಕೆಂದು ಕೇಳಿಕೊಂಡಿದ್ದ.

ಈ ಸಿಮ್‌ಕಾರ್ಡ್‌ ಪಡೆಯಲು ಆಫೀಸ್‌ ಬಾಯ್‌ ಕಳುಹಿಸುತ್ತೇನೆ ಎಂದು ಹೇಳಿ, ತಾನೇ ಆಕೆಯ ಕಚೇರಿ ಬಳಿ ಹೋಗಿ ಸಿಮ್‌ ಕಾರ್ಡ್‌ ಪಡೆದುಕೊಂಡಿದ್ದ. ಅದೇ ಸಿಮ್‌ ಕಾರ್ಡ್‌ನಲ್ಲಿ ಕೆಲ ದಿನಗಳ ಕಾಲ ಆಕೆ ಜತೆ ಮಾತಾಡಿ, ನಂತರ ಮೊಬೈಲ್‌ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾನೆ. ಅದರಿಂದ ಅನುಮಾನಗೊಂಡ ಮಹಿಳೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.‌

Advertisement

 ವಂಚನೆಯನ್ನೇ ವೃತ್ತಿಯಾಗಿಸಿಕೊಂಡಿದ್ದ ಆರೋಪಿ: ಆರೋಪಿ ಯಾವುದೇ ಕೆಲಸಕ್ಕೆ ಹೋಗದೆ, ಮ್ಯಾಟ್ರಿಮೋನಿಯಲ್‌ ಮೂಲಕ ವಂಚಿಸುವುದನ್ನೇ ವೃತ್ತಿಯ ನ್ನಾಗಿಸಿಕೊಂಡಿದ್ದಾನೆ. ವಿಧವೆಯರು, ವಿಚ್ಛೇದಿತ ಮಹಿಳೆಯರು ಹಾಗೂ ದೀರ್ಘ‌ ಕಾಲದವರೆಗೆ ಮದುವೆಯಾಗದ ಮಹಿಳೆಯರನ್ನು ಟಾರ್ಗೆಟ್‌ ಮಾಡಿಕೊಂಡು ಯಾಮಾರಿಸುತ್ತಿದ್ದ ದೀಪಕ್‌, ಹುಬ್ಬಳ್ಳಿ, ಧಾರವಾಡ, ಬಾದಾಮಿ, ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಇದೇ ರೀತಿ 30ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿರುವುದು ತನಿಖೆಯ ವೇಳೆ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next