Advertisement

Mysore: ಮಂತ್ರಮಾಂಗಲ್ಯ ಮದುವೆಯಾದ ಎಡೀಸಿ

10:24 AM Nov 27, 2023 | Team Udayavani |

ಮೈಸೂರು: ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಚಾಮರಾಜನಗರದ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಹಾಗೂ ಎಲ್‌ಎಲ್‌ಬಿ ಓದುತ್ತಿರುವ ಎಂ.ಆರ್‌. ಹರೀಶ್‌ ಕುಮಾರ್‌ ಮಂತ್ರಮಾಂಗಲ್ಯ ವಿವಾಹವಾಗಿ ಗಮನ ಸೆಳೆದರು.

Advertisement

ವಧು-ವರರಿಬ್ಬರೂ ಬುದ್ಧ, ಬಸವ, ಅಂಬೇಡ್ಕರ್‌ ಹಾಗೂ ಕುವೆಂಪು ಭಾವಚಿತ್ರಗಳಿಗೆ ಪುಷ್ಪಾರ್ಪಣೆ ನೆರವೇರಿಸಿದ ನಂತರ ಹಾರ ಬದಲಾಯಿಸಿಕೊಂಡರು.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕೆಂಗಲ್‌ ಗ್ರಾಮದಲ್ಲಿ ಶಿಕ್ಷಕರಾಗಿದ್ದ ಈ ಇಬ್ಬರ ಪರಿಚಯ ಸ್ನೇಹವಾಗಿ, ಪ್ರೇಮಿಗಳಾಗಿ ಮದುವೆಯಾಗುವ ಮೂಲಕ ಒಂದಾದರು. ಗೀತಾ ಅವರ ಹೆತ್ತವರಿಲ್ಲದ ಕಾರಣ ಅವರ ಚಿಕ್ಕಪ್ಪ, ನಿವೃತ್ತ ಸೈನಿಕ ಚೆನ್ನಬಸಪ್ಪ ಹುಡೇದ ಹಾಗೂ ಅವರ ಚಿಕ್ಕಮ್ಮ ಲಕ್ಷ್ಮೀ, ಹರೀಶ್‌ ಕುಮಾರ್‌ ಅವರ ತಂದೆ ಜಿ.ರುದ್ರಪ್ಪ ಹಾಗೂ ತಾಯಿ ಪಾರ್ವತಮ್ಮ ವೇದಿಕೆ ಮೇಲಿದ್ದು ಮದುಮಕ್ಕಳನ್ನು ಆಶೀರ್ವದಿಸಿದರು.

ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಅವರು ಮಂತ್ರ ಮಾಂಗಲ್ಯದ ಪ್ರತಿಜ್ಞಾವಿಧಿಯನ್ನು ಮದುಮಕ್ಕಳಿಗೆ ಹಾಗೂ ನೆರೆದವರಿಗೆ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ನಂತರ ಅವರು ಮಾತನಾಡಿ, 1983ರಲ್ಲಿ ಪುರೋಹಿತರ ನೆರವಿಲ್ಲದೆ ರಾಹುಕಾಲದಲ್ಲಿ ಮದುವೆಯಾದೆ. ನನ್ನ ಮೂರು ಮಕ್ಕಳ ಮದುವೆಯನ್ನು ವಚನ ಹಾಗೂ ಮಂತ್ರ ಮಾಂಗಲ್ಯ ಮೂಲಕ ಮದುವೆ ಮಾಡಿದೆ. ಎಲ್ಲರೂ ಚೆನ್ನಾಗಿದ್ದೇವೆ. ವಚನ ಇಲ್ಲವೆ ಮಂತ್ರ ಮಾಂಗಲ್ಯ ಮೂಲಕ ಮದುವೆ ಮಾಡಿ. ಈ ಮೂಲಕ ವೈದಿಕ ಪರಂಪರೆ ಧಿಕ್ಕರಿಸಿ ಎಂದು ಸಲಹೆ ನೀಡಿದರು.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕೊಂಚಗೇರಿ ಗ್ರಾಮದ ಗೀತಾ ಹುಡೇದ ಹಾಗೂ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮರಡಿಹಳ್ಳಿಯ ಹರೀಶ್‌ ಕುಮಾರ್‌ ಅವರು ಮದುವೆಯಾಗುವ ಮೂಲಕ ಪ್ರಾದೇಶಿಕ ಅಂತರ ಕಡಿಮೆ ಮಾಡಿದ್ದಾರೆ ಎಂದು ಮೆಚ್ಚುಗೆ ಆಡಿದರು.

Advertisement

ಜಿ.ಪ್ರಭು ಹಾಗೂ ವಸಂತ್‌ ಮಾಧವ ಅವರು ಮದುವೆಗೆ ಸಂಬಂಧಿಸಿದ ಹಾಡುಗಳನ್ನು ಹಾಡಿದರು. ಶಾಸಕರಾದ ಕೃಷ್ಣಮೂರ್ತಿ, ಗಣೇಶ್‌ ಪ್ರಸಾದ್‌, ಮಾಜಿ ಶಾಸಕರಾದ ಎನ್‌.ಮಹೇಶ್‌, ಬಾಲರಾಜ್‌, ನಿರಂಜನ್‌, ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್‌, ಮೈಸೂರು ಜಿಪಂ ಸಿಇಒ ಕೆ.ಎಂ.ಗಾಯತ್ರಿ, ಶಂಕರ ದೇವನೂರ, ಡಾ.ಮಾದೇವ ಭರಣಿ, ಶಾಸ್ತ್ರೀಯ ಅತ್ಯುನ್ನತ ಕನ್ನಡ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಡಾ.ನೀಲಗಿರಿ ತಳವಾರ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next