Advertisement
ಮದುವೆ ಚಪ್ಪರ ಹಾಕಿದಂತೆ, ಮೋಡವು ಆಕಾಶಕ್ಕೆ ಮರೆಯಾಗಿ ನಿಂತಾಗಲೆಲ್ಲ, ಒಂದು ಚಿಂತೆ ನನ್ನನ್ನು ತಬ್ಬುತ್ತದೆ. ಜೋರು ಮಳೆ ಹೊಯ್ದು, ಎಲ್ಲೋ ಏನೋ ಕೊಚೊRಂಡ್ ಹೋಗುತ್ತೆ, ಏನೋ ಅವಾಂತರ ಆಗುತ್ತೆ ಎನ್ನುವ ಕಳವಳಗಳು ನನ್ನವಲ್ಲ. ಟೆರೇಸಿನ ಮೇಲೆ ಹಾಕಿದ ಬಟ್ಟೆ, ಮಳೆ-ಗಾಳಿಗೆ ಹಾರಿ ಪಕ್ಕದ್ಮನೆ ಕಾಂಪೌಂಡೊಳಗೆ ಬೀಳುತ್ತೆ ಎನ್ನುವ ಚಿಂತೆಯೂ ಇಲ್ಲ. ಬಿಳುಪಾದ ಕಾಲಿಗೆ ಕೊಚ್ಚೆ ಮೆತ್ಕೊಂಡ್ರೆ ಕತೆಯೇನಪ್ಪಾ ಎಂಬ ಆತಂಕವೂ ಅಲ್ಲ. “ಬಾ ಮಳೆಯೇ ಬಾ…’ ಎನ್ನುವ ಹಾಡಿಗೆ ತಲೆದೂಗುವ ನನಗೆ, ಮಳೆ ಅಂಥ ಭಯವನ್ನೇ ಹುಟ್ಟಿಸಿಲ್ಲ. ನಾನು ಹೆದರಿ, ಕಂಪಿಸುವುದು, ನನ್ನ ಮೂರು ವರುಷದ ಮಗನನ್ನು ನೋಡಿ. ಮೋಡ ಕವಿದು, ಚಂದಿರ ಕಾಣದ ದಿನ, ಅವನು ಆಚರಿಸುವ ಏಕಾದಶಿ ಇದೆಯಲ್ಲ, ಅದು ನಮ್ಮ ಕ್ಯಾಲೆಂಡರಿನಲ್ಲಿ ತಿಥಿ-ನಕ್ಷತ್ರ ನೋಡಿ ಬರುವುದೇ ಇಲ್ಲ. ಮೋಡ ಕವಿದ ದಿನಗಳಲ್ಲಿ ಆತ ಒಂದು ತುತ್ತನ್ನೂ ಬಾಯಿಗಿಳಿಸದೇ, ಕೃಷ್ಣನಂತೆ ಅವನು ಓಡಿಹೋದಾಗ, ಯಶೋಧೆಯಂತೆ ಪೇಚಿಗೆ ಸಿಲುಕುತ್ತೇನೆ.
Related Articles
Advertisement
ಟೆರೇಸಿಗೆ ಹೋಗಿ, ಚಂದ್ರನಿಗೆ ಅವನು ತನ್ನ ರೈಮ್ಸ್ ಅನ್ನು ಒಪ್ಪಿಸುವಾಗ, ನಾನು ಥರ್ಮಾಮೀಟರ್ ಹಿಡಿದು, ಅವನ ಟೆಂಪರೇಚರ್ ಚೆಕ್ ಮಾಡಿದ್ದೂ ಇದೆ.
ಮೊನ್ನೆ ಇದ್ದಕ್ಕಿದ್ದಂತೆ ಆಕಾಶ ಗುಡುಗುತ್ತಿತ್ತು. “ಕೆಳಗೆ ಬಾರೋ ಪುಟ್ಟಾ, ಗುಡುಗುಡು ಗುಮ್ಮ ಬಂತು. ಚಂದಮಾಮ ಇವತ್ ಬರೋಲ್ಲ’ ಅಂತ ತಟ್ಟೆಯಲ್ಲಿ ಮ್ಯಾಗಿ ಇಟ್ಕೊಂಡು ಕರೆದೆ. “ಇಲ್ಲ ನಾ ಬರೋಲ್ಲ… ಆಕಾಶ ಫೋಟೋ ಹೊಡೀತಿದೆ. ಚಂದಮಾಮನಿಗೆ ಹೇಳಿದ್ದೀನಿ, ಒಟ್ಟಿಗೆ ಫೋಟೋ ಹೊಡೆಸ್ಕೊಳ್ಳೋಣ ಅಂತ’ ಅಂದ. ಅದನ್ನು ಕೇಳಿ, ನನ್ನ ಹೊಟ್ಟೆಯಲ್ಲೇ ಗುಡುಗಲು ಶುರುವಾಗಿತ್ತು.
ಹುಣ್ಣಿಮೆ ದಿನ ಹುಟ್ಟಿದ ಮಗನಿಗೆ, ಚಂದ್ರ ಬೇರೆ ರೀತಿಯ ಪ್ರಭಾವ ಬೀರಿದ್ದಾನಾ ಅಂತ ಒಬ್ಬರು ಜ್ಯೋತಿಷಿ ಬಳಿಯೂ ಕೇಳಿಸಿದೆವು. ಅಂಥದ್ದೇನೂ ಇಲ್ಲವೆಂದು ಕೇಳಿತಿಳಿದಾಗ, ನಿಟ್ಟುಸಿರುಬಿಟ್ಟೆವು. ಈ ನನ್ನ ಮಗ ಮುಂದೆ ಏನಾಗಬಹುದು ಅಂತ ಕೇಳಬಾರದ ಪ್ರಶ್ನೆಯನ್ನೇ ಕೇಳಿದೆವು. ಅವರು, “ನಾಲ್ಕನೇ ಮನೇಲಿ ಚಂದ್ರ ಇರೋದ್ರಿಂದ…’ ಅಂತ ಮುಂದುವರಿಸಿದ್ದನ್ನು ಕೇಳಿ, ಮತ್ತೆ ನನ್ನ ಮನೆಯವರ ಮುಖ ನೋಡಿದ್ದೆ.
ಇನ್ನೇನು ಮಳೆಗಾಲ ಶುರುವಾಗುತಿದೆ. ನನ್ನ ಮಗನನ್ನು ಹೇಗೆ ಸಂಭಾಳಿಸಲಿ ಎನ್ನುವ ಚಿಂತೆ ಕಾಡುತ್ತಿದೆ. ಯೂಟ್ಯೂಬ್ ಹಾಕಿಕೊಟ್ಟರೆ, ಮೊಬೈಲ್ ಹುಚ್ಚು ಹಿಡಿಯುತ್ತೆ ಎನ್ನುವ ತಲೆಬಿಸಿ. ಪ್ರತಿದಿನ ರಾತ್ರಿ ಚಂದ್ರ ನಕ್ಕರಷ್ಟೇ ನನ್ನ ಗಮನ ಹೊಟ್ಟೆ ತಂಪು. ಜೋರು ಮಳೆಯಲ್ಲಿ ಆ ಚಂದ್ರನನ್ನು ಹುಡುಕುತ್ತಾ, ಎಲ್ಲಿಗೆ ಓಡಿಹೋಗಲಿ? ಚಂದ್ರಲೋಕ ಬಿಟ್ಟು ಬೇರೆ ಜಾಗವಿದ್ದರೆ, ಹೇಳಿ…
– ಚಾಂದನಿ