Advertisement

ಮನ್ಸೂರ್‌ ಜತೆಗಿರುವ ಮೈತ್ರಿ ನಾಯಕರ ಫೋಟೋ ವೈರಲ್

11:08 PM Jun 12, 2019 | Team Udayavani |

ಬೆಂಗಳೂರು: ಐಎಂಎ ಸಂಸ್ಥೆಯ ಮುಖ್ಯಸ್ಥ ಮನ್ಸೂರ್‌ ಖಾನ್‌, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ರಾಜಕೀಯ ನಾಯಕರ ಜತೆಯೂ ನಂಟು ಹೊಂದಿದ್ದ ಎಂಬ ವಿಚಾರ ಮೇಲ್ನೋಟಕ್ಕೆ ಕಂಡು ಬರುತ್ತಿರುವುದರಿಂದ ಈ ಪ್ರಕರಣ ಸಮ್ಮಿಶ್ರ ಸರ್ಕಾರಕ್ಕೆ ತಲೆ ನೋವಾಗುವ ಲಕ್ಷಣಗಳು ಕಂಡು ಬರುತ್ತಿವೆ.

Advertisement

ಕಾಂಗ್ರೆಸ್‌ ಶಾಸಕ ರೋಷನ್‌ ಬೇಗ್‌ ಹೈಕಮಾಂಡ್‌ ಹಾಗೂ ರಾಜ್ಯ ಕಾಂಗ್ರೆಸ್‌ ನಾಯಕರ ವಿರುದ್ಧ ವಾಗ್ಧಾಳಿ ನಡೆಸಿದ ಬೆನ್ನಲ್ಲೇ ವಂಚನೆ ಪ್ರಕರಣ ಹೊರ ಬಂದಿದ್ದು, ಐಎಂಎ ಸಂಸ್ಥೆ ಮಾಲೀಕ ಶಿವಾಜಿನಗರ ಶಾಸಕನಿಗೆ ಹಣ ನೀಡಿದ್ದೇನೆ ಎಂದು ಆಡಿಯೋ ಕ್ಲಿಪ್‌ನಲ್ಲಿ ಹೇಳಿದ್ದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿತ್ತು.

ಇದಾದ ನಂತರ ಮತ್ತೆ ಸಚಿವ ಜಮೀರ್‌ ಅಹಮದ್‌ ಅವರಿಂದ ಐಎಂಎ ಸಂಸ್ಥೆ ಮಾಲೀಕ ನಿವೇಶನ ಖರೀದಿಸಿ ಐದು ಕೋಟಿ ರೂ. ಮುಂಗಡ ಹಣ ನೀಡಿದ್ದಾರೆ ಎಂಬ ಮಾಹಿತಿಯೂ ಬಹಿರಂಗಗೊಂಡಿತು.

ಇದರ ನಡುವೆ ಸಿಎಂ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಮಾಜಿ ಸಿಎಂ ಸಿದ್ದರಾಮಯ್ಯ, ರೋಷನ್‌ ಬೇಗ್‌, ಜಮೀರ್‌ ಅಹಮದ್‌, ರಾಮಲಿಂಗಾ ರೆಡ್ಡಿ, ಸೌಮ್ಯಾರೆಡ್ಡಿ ಅವರೊಂದಿಗೆ ಐಎಂಎ ಮುಖ್ಯಸ್ಥ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ.

ಐಎಂಎ ಸಂಸ್ಥೆ ಶಾಲಾ ಅಭಿವೃದ್ಧಿಗೆ ನೆರವು ನೀಡಿರುವುದು ಹಾಗೂ ಕೆಲವು ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದರಿಂದ ಆಯಾ ಸಂದರ್ಭದ ಕಾರ್ಯಕ್ರಮದಲ್ಲಿ ರಾಜಕೀಯ ನಾಯಕರು ಪಾಲ್ಗೊಂಡಿರುವುದು ಸಹಜವಾದರೂ, ವಂಚನೆ ಪ್ರಕರಣ ಬಯಲಾದ ನಂತರ ಸಾರ್ವಜನಿಕ ವಲಯದಲ್ಲಿ ಬೇರೆಯದೇ ರೀತಿಯ ಶಂಕೆ ವ್ಯಕ್ತವಾಗುತ್ತಿದೆ.

Advertisement

ರೋಷನ್‌ ಬೇಗ್‌ ಬಿಜೆಪಿಯತ್ತ ಚಿತ್ತ ಹರಿಸಿದ್ದಾರೆ ಎಂಬ ಗುಮಾನಿ ಮೇರೆಗೆ ರಾಜಕೀಯವಾಗಿ ಹಣಿಯಲು ಐಎಂಎ ಪ್ರಕರಣವನ್ನು ಬಯಲು ಮಾಡಲಾಯಿತು. ಇದಕ್ಕೆ ಅವರದೇ ಸಮುದಾಯದ ನಾಯಕರ ಕೈವಾಡ ಇದೆ ಎಂದು ಹೇಳಲಾಗುತ್ತಿದೆ. ಆದರೆ, ಒಟ್ಟಾರೆ ಪ್ರಕರಣ ಸಮ್ಮಿಶ್ರ ಸರ್ಕಾರಕ್ಕೆ ತಲೆ ಬಿಸಿ ತಂದಿರುವುದಂತೂ ಹೌದು.

ರಾಜ್ಯ ಸರ್ಕಾರ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಿದ್ದರೂ ಪ್ರತಿಪಕ್ಷ ಬಿಜೆಪಿ ಸಿಬಿಐ ತನಿಖೆಗೆ ವಹಿಸಿ ಎಂದು ಪಟ್ಟು ಹಿಡಿದಿದೆ. ಜಿಂದಾಲ್‌ ಭೂಮಿ ಪರಭಾರೆ ವಿಚಾರದಲ್ಲಿ ಸರ್ಕಾರದ ವಿರುದ್ಧ ಮುಗಿ ಬಿದ್ದಿದ್ದ ಬಿಜೆಪಿ, ಇದೀಗ ಐಎಂಎ ಪ್ರಕರಣವನ್ನು ಅಸ್ತ್ರವಾಗಿಸಿಕೊಂಡಿದೆ.

ಈ ಮಧ್ಯೆ, ರೋಷನ್‌ ಬೇಗ್‌ ಹಾಗೂ ಜಮೀರ್‌ ಅಹಮದ್‌ ಅವರು ಪತ್ರಿಕಾಗೋಷ್ಠಿ ನಡೆಸಿ, ಐಎಂಎ ಸಂಸ್ಥೆಯ ಜತೆ ತಮಗೆ ನಂಟಿಲ್ಲ. ಆ ಸಂಸ್ಥೆಯಿಂದ ಹಣ ಪಡೆದಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ಆದರೆ, ಪ್ರತಿಪಕ್ಷ ಬಿಜೆಪಿ ಈ ವಿಷಯವನ್ನು ಇಷ್ಟಕ್ಕೇ ಬಿಡುವಂತೆ ಕಾಣುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next