Advertisement

ಜಮೀರ್‌ಗೆ ಮನ್ಸೂರ್‌ ಖಾನ್‌ ಕಪ್ಪು ಹಣ

07:05 AM Jun 30, 2019 | Team Udayavani |

ಬೆಂಗಳೂರು: ಸಚಿವ ಜಮೀರ್‌ ಅಹಮದ್‌ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ನಿವೇಶವನ್ನು ಬಹುಕೋಟಿ ಹಗರಣದ ರೂವಾರಿ ಐಎಂಎನ ಮುಖ್ಯಸ್ಥ ಮನ್ಸೂರ್‌ ಖಾನ್‌ಗೆ ಮಾರಾಟ ಮಾಡಿದ್ದು, 80 ಕೋಟಿ ರೂ.ನಷ್ಟು ಕಪ್ಪು ಹಣ ಪಡೆದಿದ್ದಾರೆ ಎಂದು ಬಿಜೆಪಿ ವಕ್ತಾರ ಎನ್‌.ಆರ್‌.ರಮೇಶ್‌ ಆರೋಪಿಸಿದರು.

Advertisement

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ರಿಚ್ಮಂಡ್‌ ಟೌನ್‌ನ ಸಪೆಂಟೈನ್‌ ರಸ್ತೆಯ 38 ಮತ್ತು 39ನೇ ಸಂಖ್ಯೆಯ ಒಟ್ಟು 14,984 ಚ. ಅಡಿ ವಿಸ್ತೀರ್ಣದ ನಿವೇಶನವನ್ನು ಷಾ ನವಾಜ್‌ ಬೇಗಂ ಅವರಿಂದ ಕಾನೂನು ಬಾಹಿರವಾಗಿ ಪಡೆದಿದ್ದಾರೆ. ಈ ನಿವೇಶನದ ಬಗ್ಗೆ ಷಾ ನವಾಜ್‌ ಬೇಗಂ ಮತ್ತು ಅವರ ಸಹೋದರ ಅಗಾಜಾನ್‌ ಆಸ್ಕರ್‌ ಆಲಿ ನಡುವೆ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿತ್ತು.

“2018ರ ಮಾರ್ಚ್‌ನಲ್ಲಿ ಅಗಾಜಾನ್‌ ಆಸ್ಕರ್‌ ಆಲಿ ಅವರ ಪತ್ನಿ ಸಪ್ನ ಅವರು ನ್ಯಾಯಾಲಕ್ಕೆ ಸೂಕ್ತ ಸಮಯದಲ್ಲಿ ಹಾಜರಾಗದ ಹಿನ್ನೆಲೆಯಲ್ಲಿ ಷಾ ನವಾಜ್‌ ಬೇಗಂ ಪರವಾಗಿ ಕೋರ್ಟ್‌ ಆದೇಶ ನೀಡಿತ್ತು. ಆದರೆ, ಸಿವಿಲ್‌ ಕೋರ್ಟ್‌ ಆದೇಶ ನೀಡಿದ 17 ದಿನದಲ್ಲಿ ಬಿಬಿಎಂಪಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು 38 ಮತ್ತು 39ನೇ ಸಂಖ್ಯೆಯ ನಿವೇಶನವನ್ನು ಖಾತಾ ಮಾಡಿಸಿಕೊಟ್ಟಿದ್ದಾರೆ.

ಈ ನಿವೇಶನವನ್ನು ಜಮೀರ್‌ ಅಹಮದ್‌ ಮನ್ಸೂರ್‌ ಖಾನೆಗೆ ಮಾರಾಟ ಮಾಡಿದ್ದು, ಕ್ರಯ ಪತ್ರದಲ್ಲಿ 9.38 ಕೋಟಿ ರೂ. ಮಾತ್ರ ತೋರಿಸಲಾಗಿದೆ. ಉಳಿದ 80 ಕೋಟಿ ರೂ. ಕಪ್ಪು ಹಣ ಪಡೆದಿದ್ದಾರೆ. ಇದರ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಸುಳ್ಳು ಅಫಿಡವಿಟ್‌: 2018ರ ವಿಧಾನಸಭೆ ಚುನಾವಣೆಯಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿ ಘೋಷಣಾ ಪತ್ರದಲ್ಲಿ ಮಾಜಿ ಸಚಿವ ಚೆಲುವರಾಯ ಸ್ವಾಮಿ ಅವರಿಂದ 42 ಲಕ್ಷ ರೂ. ಪಡೆದಿರುವುದಾಗಿ ಜಮೀರ್‌ ಅಹಮದ್‌ ಮಾಹಿತಿ ನೀಡಿದ್ದಾರೆ.

Advertisement

ಆದರೆ, 2018ರಲ್ಲಿ ನಾಗಮಂಗಲ ಕ್ಷೇತ್ರದಿಂದ ಸ್ಪರ್ಧಿಸಿದ್ದ ಚೆಲುವರಾಯ ಸ್ವಾಮಿ, ಅಧಿಕೃತ ಆಸ್ತಿ ಘೋಷಣಾ ಪತ್ರದಲ್ಲಿ ಎಲ್ಲಿಯೂ ಸಾಲ ನೀಡಿರುವ ಬಗ್ಗೆ ಉಲ್ಲೇಖೀಸಿಲ್ಲ. ಈ ಸಂಬಂಧ ಮಂಗಳವಾರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ತಿಳಿಸಿದರು.

ಜೈಲಿಗೆ ಹೋದ ಪಕ್ಷದವರಿಂದ ನೈತಿಕತೆ ಕಲಿಯಬೇಕಿಲ್ಲ: “ನಾನು ನನ್ನ ಸ್ವಂತ ಆಸ್ತಿಯನ್ನು ಕಾನೂನು ಬದ್ಧವಾಗಿ ಮಾರಾಟ ಮಾಡಿದ್ದೇನೆ. ಆದರೆ, ಮನ್ಸೂರ್‌ ಅಂತಹ ವ್ಯಕ್ತಿಗೆ ಮಾರಾಟ ಮಾಡಿದ್ದರ ಬಗ್ಗೆ ನನಗೆ ನೋವಿದೆ. ಐಎಂಎ ಪ್ರಕರಣ ಕುರಿತು ಎಸ್‌ಐಟಿ ತನಿಖೆ ನಡೆಯುತ್ತಿದೆ. ಇ.ಡಿ ನೋಟಿಸ್‌ ಜಾರಿ ಮಾಡಿದ್ದು, ಸಮರ್ಪಕ ದಾಖಲೆ ನೀಡಲಿದ್ದೇನೆ ಎಂದು ಸಚಿವ ಜಮೀರ್‌ ಅಹನದ್‌ ತಿರುಗೇಟು ನೀಡಿದ್ದಾರೆ.

ಬಿಜೆಪಿಯವರು ಈ ವಿಚಾರದಲ್ಲಿ ರಾಜಕೀಯ ಮಾಡುವುದು ಬಿಡಲಿ. ನಾನು ಸರ್ಕಾರದ ಖಜಾನೆ ಕೊಳ್ಳೆ ಹೊಡೆದಿಲ್ಲ. ಬಿಜೆಪಿ ಸರ್ಕಾರ ಇದ್ದಾಗ ಮುಖ್ಯಮಂತ್ರಿಯಾಗಿದ್ದವರ ಸಹಿತ 11 ಜನ ಭ್ರಷ್ಟಾಚಾರ ಆರೋಪದ ಮೇಲೆ ಜೈಲಿಗೆ ಹೋಗಿದ್ದಾರೆ. ಇವರಿಂದ ನಾನು ನೈತಿಕತೆ ಕಲಿಯಬೇಕಿಲ್ಲ. ಪ್ರಮಾಣಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ್ದರೆ ಅದಕ್ಕೆ ಕ್ರಮ ಕೈಗೊಳ್ಳಲು ಬೇರೆಯವರಿದ್ದಾರೆ ಎಂದಿದ್ದಾರೆ.

ಐಎಂಎ ವಂಚನೆ ಪ್ರಕರಣದಲ್ಲಿ ಸಚಿವ ಜಮೀರ್‌ ಅಹಮದ್‌ ಅವರಿಗೆ ಇ.ಡಿ ನೀಡಿರುವ ನೋಟಿಸ್‌ಗೆ ಅವರು ಉತ್ತರ ನೀಡುತ್ತಾರೆ. ಹಿಂದೆ ಕೆಲ ಪ್ರಕರಣಗಳಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಸೇರಿ ಹಲವರಿಗೆ ನೋಟಿಸ್‌ ಕೊಡಲಾಗಿತ್ತು.
-ಡಾ.ಜಿ.ಪರಮೇಶ್ವರ್‌, ಉಪ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next