Advertisement

ಮುಂಗಾರು ಮಳೆಯೇ…ಏನು ನಿನ್ನ ಹನಿಗಳ ಲೀಲೆ

12:50 AM May 29, 2024 | Team Udayavani |

ಜೀವಸಂಕುಲಕ್ಕೆ ಅತ್ಯವಶ್ಯವಾಗಿರುವ ಮುಂಗಾರು ಮಳೆ ಭಾರತದಲ್ಲಿ ಶೇಷ ಪ್ರಾಮುಖ್ಯ ಹೊಂದಿದೆ. ಅಷ್ಟಕ್ಕೂ ಈ ಮುಂಗಾರು ಎಂದರೇನು, ಅದರಿಂದ ಮಳೆ ಹೇಗೆ ಆಗುತ್ತದೆ, ಮುಂಗಾರು ಹೇಗೆ, ಎಲ್ಲಿ ಸಂಚರಿಸಿ ಮಳೆ ತರುತ್ತದೆ, ಅದರ ಮಹತ್ವವೇನು, ಮುಂಗಾರು ಹೇಗೆ ವಿಳಂಬವಾಗುತ್ತದೆ ಇವೆಲ್ಲ ಕುತೂಹಲದ ಸಂಗತಿಗಳು. ಮುಂಗಾರು ಎಂಬ ಪ್ರಕೃತಿ ವಿಸ್ಮಯದ ಒಂದು ಕಿರುನೋಟ ನಿಮಗಾಗಿ.

Advertisement

ಜೀವಲೋಕದ ಜೀವನಾಡಿ ಮಳೆಗಾಲ. ವರ್ಷ ಋತುವಿಗೆ ಆರಂಭವಾಗಿ ಮುಂದಿನ 4 ಮಾಸಗಳ ವರೆಗೆ ಧರೆಗೆ ತಂಪನ್ನು ತರುವ ಮುಂಗಾರು ಮಳೆ ಭಾರತೀಯರ ಪಾಲಿಗೆ ಅತ್ಯಂತ ಪ್ರಮುಖ. ವೈಶಾಖ ಮಾಸದ ಬಿಸಿಲಿನ ಶಾಖಕ್ಕೆ ಬೇಸತ್ತ ಭೂಮಿಗೆ, ಜನ ಜಾನುವಾರುಗಳಿಗೆಲ್ಲ ಮುಂಗಾರನ್ನು ಬರಮಾಡಿಕೊಳ್ಳುವುದೇ ಒಂದು ಸಂಭ್ರಮ. ಮುಂಗಾರು ಆಗಮನವನ್ನು ಹಬ್ಬದಂತೆ ಆಚರಿಸುವುದು ಭಾರತೀಯರ ವಿಶೇಷತೆ. ತಂಪು ಸೂಸುವ ಹವಾಮಾನ, ಅದರಿಂದಾಗುವ ಭರಪೂರ ಮಳೆ, ಮಳೆಗಾಲದಿಂದ ಹಸುರು ಹೊದಿಕೆ ಹೊತ್ತುಕೊಳ್ಳುವ ಭೂತಾಯಿ ಎಲ್ಲವನ್ನೂ ಕಣ್ತುಂಬಿಕೊಂಡರೆ ಯಾರಿಗೇ ಆಗಲಿ ಮನಸ್ಸಿನಲ್ಲಿ ಹೊಸ ಸಂತಸ ಉಂಟಾಗದೆ ಇರುವುದಿಲ್ಲ.

ಮುಂಗಾರು ಮಳೆ ಬಂತೆಂದರೆ ಸಾಕು ಕೃಷಿ ಚಟುವಟಿಕೆಗಳು ವೇಗಗೊಳ್ಳುವುದರ ಜತೆಗೆ ಜನಪದರಲ್ಲಿ ವಿಶಿಷ್ಟ ಹಬ್ಬ, ಧಾರ್ಮಿಕ ಆಚರಣೆ, ಆಹಾರ ಕ್ರಮ, ಜೀವನ ಶೈಲಿಯಲ್ಲಿ ಬದಲಾ ವಣೆಯನ್ನೂ ಸಹ ಕಾಣಬಹುದು. ಮುಂಗಾರು ಒಮ್ಮೊಮ್ಮೆ ಅತಿಯಾಗಿ ಸುರಿದಾಗ ನೆರೆ ಬರುವ ಸಂಭವವೂ ಉಂಟು. ಅತಿ ವೃಷ್ಟಿಯ ವಿಕೋಪಗಳಿಗೆ ಸಾಕಷ್ಟು ಸಾವು, ನೋವುಗಳಾಗುವುದು ವಿಪರ್ಯಾಸ. ಹೀಗೆ ಮುಂಗಾರು ಮಳೆ ಎರಡು ಮುಖಗಳನ್ನು ಹೊಂದಿದೆ. ಎಷ್ಟೇ ಪ್ರವಾಹ, ಹಾನಿಯಾದರೂ ಮುಂಗಾರು ಮಾತ್ರ ಜೀವ ಸಂಕುಲಕ್ಕೆ ಅತ್ಯವಶ್ಯಕ.

ಮುಂಗಾರು ಎಂದರೇನು?
ಸಮುದ್ರದಿಂದ ಭೂಮಿಯ ಕಡೆ ಚಲಿಸುವ ಮಾರುತಗಳನ್ನೇ ಮುಂಗಾರು ಎಂದು ಕರೆಯಲಾಗುತ್ತದೆ. ಇದಕ್ಕೆ ಮಾನ್ಸೂನ್‌ ಎಂದೂ ಸಹ ಕರೆಯುತ್ತಾರೆ. ಇದು ಅರೇಬಿಕ್‌ ಭಾಷೆಯ “ಮೌಸಿಂ’ ಶಬ್ದದಿಂದ ಉತ್ಪತ್ತಿಯಾಗಿದೆ. ಮಾನ್ಸೂನ್‌ ಎಂದರೆ ಚಲಿ ಸುವ ಗಾಳಿ, ಕಾಲಕ್ಕೆ ತಕ್ಕಂತೆ ದಿಕ್ಕು ಬದಲಿಸುವುದು ಎಂದರ್ಥ

ಮುಂಗಾರು ಮಳೆ ಹೇಗೆ ಸಂಭವಿಸುತ್ತದೆ?
ನೈಋತ್ಯ ದಿಕ್ಕಿನಿಂದ ಬರುವ ಮಾರುತಗಳು ಹೆಚ್ಚು ಒತ್ತಡದಿಂದ ಕಡಿಮೆ ಒತ್ತಡದ ಪ್ರದೇಶಕ್ಕೆ ಚಲಿಸುತ್ತವೆ. ಗಾಳಿ ಅತ್ಯಂತ ಚಿಕ್ಕ ಚಿಕ್ಕ ಮಾಲಿಕ್ಯೂಲ್‌(ಕಣ)ಗಳಿಂದ ನಿರ್ಮಾಣವಾಗಿದ್ದು, ಸದಾ ಚಲಿಸುತ್ತಲೇ ಇರುತ್ತದೆ. ಗಾಳಿಯ ಸಾಂದ್ರತೆ ಹೆಚ್ಚಾದಷ್ಟು ಒತ್ತಡವೂ ಜಾಸ್ತಿಯಾಗುತ್ತದೆ. ಈ ಗಾಳಿಯಲ್ಲಿ ಸಮುದ್ರಗಳ ಆವಿಯಿಂದ ಉಂಟಾದ ತೇವಾಂಶವೂ ಇರುತ್ತದೆ. ಸಮುದ್ರದಿಂದ ಭೂಪ್ರದೇಶಕ್ಕೆ ಸಂಚರಿಸುವ ಸಮಯದಲ್ಲಿ ಬೆಟ್ಟ, ಪರ್ವತ ಶ್ರೇಣಿಗಳಿಗೆ ಅಡ್ಡ ಬಂದು, ಗಾಳಿ ಮೇಲಕ್ಕೆ ಏರಿದಷ್ಟು ತಂಪಾಗುತ್ತದೆ. ಅನಂತರ ತೇವಾಂಶದಲ್ಲಿದ್ದ ನೀರು ಮಳೆ ಹನಿಯಾಗಿ ಭೂಮಿಯ ಮೇಲೆ ಸುರಿಯುತ್ತದೆ. ಹೀಗೆ ಮುಂಗಾರು ಮಳೆ ಸಂಭವಿಸುತ್ತದೆ.

Advertisement

ಕೇರಳದಿಂದ ಕಾಶ್ಮೀರದ ವರೆಗೆ ಪಯಣ
ಸಹಜವಾಗಿ ಬೇಸಗೆಯಲ್ಲಿ ಮುಂಗಾರು ಮಾರುತಗಳು ಸಮುದ್ರದಿಂದ ಭೂಮಿಗೆ ಚಲಿಸಿದರೆ, ಚಳಿಗಾಲದಲ್ಲಿ ದಿಕ್ಕು ಬದಲಿಸಿ, ಭೂಮಿಯಿಂದ ಸಮುದ್ರದೆಡೆಗೆ ಹೋಗುತ್ತವೆ. ನೈರುತ್ಯ ದಿಕ್ಕಿನಿಂದ ಬರುವ ಮುಂಗಾರು ಮಾರುತಗಳು ಅರಬ್ಬಿ ಸಮುದ್ರದಿಂದ ತೇವಾಂಶ ಹೊತ್ತು ಭಾರತದ ಭೂ ಪ್ರದೇಶದ ಮೇಲೆ ಚಲಿಸುವಾಗ ಗರಿಷ್ಠ ಪ್ರಮಾಣದ ಮಳೆ ಸುರಿಸುತ್ತದೆ. ಹೀಗೆ ಸುರಿದ ಮಳೆಯನ್ನೇ ಮುಂಗಾರು ಮಳೆ ಎಂದು ಕರೆಯಲಾಗುತ್ತದೆ. ದಕ್ಷಿಣದ ಕೇರಳದಿಂದ ಆರಂಭವಾಗಿ ಉತ್ತರದ ಜಮ್ಮು – ಕಾಶ್ಮೀರದವರೆಗೂ ಚಲಿಸುತ್ತವೆ ಈ ಮುಂಗಾರು ಮಾರುತಗಳು.

ಎರಡು ದಿಕ್ಕಿನಲ್ಲಿ ಚಲಿಸುವ ಮಾರುತಗಳು
ನೈಋತ್ಯ ದಿಕ್ಕಿನಿಂದ ಬರುವ ಮುಂಗಾರು ಮಾರುತಗಳು ದಕ್ಷಿಣದಿಂದ ಉತ್ತರಕ್ಕೆ ಸಾಗುವಾಗ ಸಹಜವಾಗಿ ಜೂನ್‌-ಸೆಪ್ಟಂಬರ್‌ ಅವಧಿಯಲ್ಲಿ ಮಳೆ ಸುರಿಸುತ್ತದೆ. ಅದೇ ರೀತಿ ಈಶಾನ್ಯ ಮಾರುತಗಳು ಉತ್ತರದಿಂದ ದಕ್ಷಿಣಕ್ಕೆ ಸಾಗುವಾಗ ಸೆಪ್ಟಂಬರ್‌-ಜನವರಿ ಅವಧಿಯಲ್ಲಿ ಸುರಿಸುವ ಮಳೆಯನ್ನು ಹಿಂಗಾರು ಮಳೆ ಎಂದು ಕರೆಯುತ್ತಾರೆ. ಹೀಗೆ ಮಾರುತಗಳು ಎರಡು ದಿಕ್ಕಿನಲ್ಲಿ ಚಲಿಸಿ, ಮಳೆ ಸುರಿಸುತ್ತವೆ.

ಮಾರುತ ಅನುಸರಿಸಿ ರೋಮನ್ನರು ಬಂದಿದ್ದರು!
ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಮುಂಗಾರು ಮಳೆಗೆ ವಿಶೇಷ ಪ್ರಾಮುಖ್ಯ ನೀಡಲಾಗಿದೆ. ಮುಂಗಾರು ಮಾರುತ ಗಳನ್ನೇ ಅನುಸರಿಸಿ ನಾವಿಕರು, ವ್ಯಾಪಾರಿಗಳು ಸಮುದ್ರದಲ್ಲಿ ಪಯಣಿಸುತ್ತಿದ್ದರು. ಇದೇ ಮಾರುತಗಳನ್ನು ಅನುಸರಿಸಿ ರೋಮನ್ನರು ಭಾರತಕ್ಕೆ ವ್ಯಾಪಾರ ಮಾಡಲು ಬಂದಿದ್ದರು ಎಂದು ಹೇಳಲಾಗುತ್ತದೆ. ಆಫ್ರಿಕಾ, ಮಧ್ಯ ಪ್ರಾಚ್ಯ, ಆಗ್ನೇಯ ಏಷ್ಯಾ ದೇಶಗಳಲ್ಲೂ ಮುಂಗಾರು ಮಾರುತಗಳು ಪ್ರವೇಶಿ ಸಿದರೂ, ಭಾರತದಲ್ಲಿ ಇದರ ಪ್ರಭಾವ ಹೆಚ್ಚಾಗಿ ಕಾಣುತ್ತೇವೆ. ಮುಂಗಾರು ಮಾರುತಗಳು ಗರಿಷ್ಠ ಪ್ರಮಾಣದ ಮಳೆ ಸುರಿಸುವ ಕಾರಣ, ಕೃಷಿಕರಿಗೆ ಈ ಮಳೆಯೆಂದರೆ ಎಲ್ಲಿಲ್ಲದ ಸಂತಸ. ಬೀಜ ಬಿತ್ತನೆ ಮಾಡಿದ ನಂತರ ಮುಂಗಾರು ಮಳೆಯಾದರೇನೆ ಫ‌ಸಲು ಬರುವುದು. ಮಳೆಗಾಲದ ಶೇ. 70ರಷ್ಟು ಪ್ರಮಾಣದ ಮಳೆ ಈ ಸಮಯದಲ್ಲೇ ಸುರಿಯುವುದು. ಹಾಗಾಗಿ ಅನ್ನದಾತ ಮುಂಗಾರು ಯಾವಾಗ ಬರಬಹುದೆಂದು ಆಗಸದತ್ತ ಮುಖ ಮಾಡುತ್ತಾನೆ. ಜತೆಗೆ ನದಿ, ಕೆರೆ, ಹಳ್ಳ ಮುಂತಾದ ಜಲ ಸಂಪನ್ಮೂಲಗಳಿಗೆ ಮುಂಗಾರು ಮಳೆಯೇ ಪ್ರಮುಖ ಆಧಾರ. ಅದು ಚೆನ್ನಾಗಿ ಆದರೆ, ನದಿಗಳೆಲ್ಲ ಮೈದುಂಬಿ ಹರಿಯುತ್ತವೆ. ಕೆರೆ, ಹಳ್ಳ ಜತೆಗೆ ಅಂತರ್ಜಲದಲ್ಲೂ ನೀರಿನ ಸಮೃದ್ಧಿ ಕಾಣಬಹುದು. ಕೃಷಿ ಪ್ರಧಾನವಾಗಿರುವ ಭಾರತದಲ್ಲಿ ಮುಂಗಾರು ಮಳೆಯ ಮಹತ್ವ ಅತ್ಯಂತ ಗಣನೀಯವಾಗಿದೆ.

ಕೇರಳಕ್ಕೆ ಬಂದು ವಾರದೊಳಗೆ ಕರ್ನಾಟಕಕ್ಕೆ
ಪ್ರತೀ ವರ್ಷ ಸಾಮಾನ್ಯವಾಗಿ ಮೇ ಕೊನೆ ವಾರದಲ್ಲಿ ಕೇರಳಕ್ಕೆ ಮುಂಗಾರು ಮಾರುತಗಳು ಪ್ರವೇಶಿಸುತ್ತವೆ. ಅದಾದ ಒಂದು ವಾರದೊಳಗೆ ಕರ್ನಾಟಕಕ್ಕೂ ಮುಂಗಾರು ಆಗಮಿಸುತ್ತದೆ. ನೈಋತ್ಯ ಮಾರುತಗಳು ಕೇರಳ, ಕರ್ನಾಟಕದಲ್ಲಿನ ಪಶ್ಚಿಮ ಘಟ್ಟಗಳ ಮೇಲೆ ಬಂದಾಗ, ಅಲ್ಲಿನ ತಂಪು ವಾತಾವರಣ ಮತ್ತು ಹೆಚ್ಚಿದ ತೇವಾಂಶ ಸಾಂದ್ರತೆ ಮಳೆ ಸುರಿಸಲು ಕಾರಣವಾಗುತ್ತದೆ. ಅದೇ ಮಾರುತಗಳು ತಮಿಳುನಾಡಿಗೆ ಸಂಚರಿಸಿದಾಗ ಮಾರುತ ಗಳಲ್ಲಿನ ತೇವಾಂಶದ ಸಾಂಧ್ರತೆ ಕಡಿಮೆಯಾಗಿರುತ್ತದೆ.

ಪ್ರಸಕ್ತ ವರ್ಷ ಜೂನ್‌ 1ರಂದು ಕೇರಳಕ್ಕೆ, ಜೂನ್‌ 6-7 ಹೊತ್ತಿಗೆ ಕರ್ನಾಟಕಕ್ಕೆ ಹಾಗೂ ಜೂನ್‌ 14ರ ಹೊತ್ತಿಗೆ ಕೇರಳ ಮತ್ತು ಕರ್ನಾಟಕದ ಎಲ್ಲ ಒಳನಾಡಿನ ಜಿಲ್ಲೆಗಳಿಗೆ ಮುಂಗಾರು ಮಾರುತಗಳು ವ್ಯಾಪಿಸಿ ಮಳೆ ಸುರಿಸುತ್ತವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ದಿನಾಂಕಗಳು ಎಂದಿಗೂ ನಿರ್ದಿಷ್ಟವಾಗಿರುವುದಿಲ್ಲ. ಆದರೆ ಜೂನ್‌ ಸಮಯದಲ್ಲೇ ಮುಂಗಾರು ಮಳೆ ಬರುವುದು ವಾಡಿಕೆ.

ಮುಂಗಾರು ವಿಳಂಬ ಏಕಾಗುತ್ತದೆ‌?
ಹವಾಮಾನ ವೈಪರೀತ್ಯದಿಂದ ಮುಂಗಾರು ಮಳೆ ವಿಳಂಬವಾಗುವ ಸಂಭವ ಹೆಚ್ಚು. ಸಮುದ್ರಗಳಲ್ಲಿ ಚಂಡಮಾರುತ ಉಂಟಾದರೆ, ಸಮುದ್ರದ ಮೇಲ್ಮೆ„ಯಲ್ಲಿ ಉಷ್ಣತೆ ಅಧಿಕವಾಗುತ್ತದೆ. ಆಗ ಸಮುದ್ರ ಹಾಗೂ ಭೂಮಿಯ ಹವಾಮಾನ ತದ್ವಿರುದ್ಧವಾಗುತ್ತದೆ. ಇಂಥ ಸಮಯದಲ್ಲಿ ಮುಂಗಾರು ವಿಳಂಬವಾಗುತ್ತದೆ. ಚಂಡಮಾರುತಗಳು ಮುಂಗಾರು ಮಾರುತಗಳ ದಿಕ್ಕು ಬದಲಿಸಬಹುದು, ಮರಳಿ ಸಮುದ್ರದೆಡೆಗೆ ಸೆಳೆಯಬಹುದು. ಇಂಥ ಸಮಯದಲ್ಲೂ ಮುಂಗಾರು ಮಳೆ ತಡವಾಗುತ್ತದೆ. ಈ ವಿಳಂಬ ರಾಜ್ಯದಿಂದ ರಾಜ್ಯಕ್ಕೆ, ಜಿÇÉೆಯಿಂದ ಜಿÇÉೆಗೆ ವ್ಯತ್ಯಾಸವಾಗುತ್ತಿರುತ್ತದೆ. ಒಮ್ಮೊಮ್ಮೆ ತೇವಾಂಶ ಹೊಂದಿದ ಮಾರುತಗಳ ಮೇಲೆ ಬಿಸಿ ಗಾಳಿಯ ಒತ್ತಡ ಹೆಚ್ಚಾದಾಗ, ತೇವಾಂಶದ ಸಾಂದ್ರತೆ ಕಡಿಮೆಯಾಗಿ ಮುಂಗಾರು ದುರ್ಬಲಗೊಳ್ಳಬಹುದು. ವಾತಾವರಣದಲ್ಲಿ ತಾಪಮಾನ ಅಧಿಕವಾದಾಗಲೂ ಈ ರೀತಿ ಆಗುತ್ತದೆ. ಮುಂಗಾರಿನ ದೌರ್ಬಲ್ಯ ಹಾಗೂ ವಿಳಂಬಕ್ಕೆ ನಿರ್ದಿಷ್ಟ ಕಾರಣ ಇಲ್ಲ. ವಿವಿಧ ಬಗೆಯ ಹವಾಮಾನ ವೈಪರೀತ್ಯದಿಂದ ಮುಂಗಾರು ಮಳೆ ವಿಳಂಬ ಇಲ್ಲವೇ ದುರ್ಬಲವಾಗಬಹುದು.

ಕಳೆದ ವರ್ಷವೇ ಅತಿ ವಿಳಂಬ
2023ರಲ್ಲಿ ಜೂನ್‌ 1ರಂದು ಆಗಮಿಸಬೇಕಿದ್ದ ಮುಂಗಾರು 1 ವಾರ ತಡವಾಗಿ ಜೂನ್‌ 8ರಂದು ಆಗಮಿಸಿತ್ತು. 2019ರ ಅನಂತರ ಇದು ಅತ್ಯಂತ ವಿಳಂಬದ ಮುಂಗಾರು ಮಳೆ ಯಾಗಿದೆ. ಕಳೆದ ವರ್ಷ ಸಂಭವಿಸಿದ ಬಿಪರ್ಜಾಯ್‌ ಚಂಡ ಮಾರುತದಿಂದ ಮಳೆ ಆಗಮನದಲ್ಲಿ ವಿಳಂಬವಾಗಿತ್ತು. ಜತೆಗೆ ನಿರ್ದಿಷ್ಟ ಪ್ರಮಾಣಕ್ಕಿಂತ ಸಾಧಾರಣ ಮಳೆ ಸುರಿದಿತ್ತು. ಕಳೆದ ದಶಕದ 2009, 2012, 2014, 2019ರ ವರ್ಷಗಳಲ್ಲಿ ಮುಂಗಾ ರಿನ ವಿಳಂಬದಿಂದ ಕಡಿಮೆ ಪ್ರಮಾಣದ ಮಳೆ ದಾಖಲಾಗಿತ್ತು.

ನಿತೀಶ ಡಂಬಳ

Advertisement

Udayavani is now on Telegram. Click here to join our channel and stay updated with the latest news.

Next