Advertisement

ತ.ನಾಡು ಕಳ್ಳಭಟ್ಟಿ ದುರಂತ: ಸರಕಾರದ ಘೋರ ವೈಫ‌ಲ್ಯ

10:45 PM Jun 20, 2024 | Team Udayavani |

ತಮಿಳುನಾಡಿನ ಕಲ್ಲಕುರುಚಿ ಜಿಲ್ಲೆಯಲ್ಲಿ ಕಳ್ಳಭಟ್ಟಿ ಸೇವಿಸಿ 38 ಮಂದಿ ಸಾವನ್ನಪ್ಪಿದ ದಾರುಣ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ. ಈ ದುರಂತದಲ್ಲಿ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು ತಮಿಳುನಾಡಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ. ತಮಿಳುನಾಡಿನಲ್ಲಿ ಕಳ್ಳಭಟ್ಟಿ ಸೇವಿಸಿ ಜನರು ಅದರಲ್ಲೂ ಕೂಲಿ ಕಾರ್ಮಿಕರು ಸಾವನ್ನಪ್ಪುತ್ತಿರುವ ಘಟನೆಗಳು ಪದೇಪದೆ ವರದಿಯಾಗುತ್ತಲೇ ಇದ್ದು, ಕಳ್ಳಭಟ್ಟಿ ಮತ್ತು ಅಕ್ರಮ ಮದ್ಯ ತಯಾರಿಕ ದಂಧೆಗೆ ಕಡಿವಾಣ ಹಾಕುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫ‌ಲವಾಗಿದೆ.

Advertisement

ವರ್ಷದ ಹಿಂದೆ ಅಂದರೆ ಕಳೆದ ವರ್ಷದ ಮೇಯಲ್ಲಿ ವಿಲ್ಲುಪುರಂನಲ್ಲಿ ಇಂತಹುದೇ ದುರಂತ ಸಂಭವಿಸಿ 20ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಈ ವೇಳೆ ರಾಜ್ಯದೆಲ್ಲೆಡೆ ಅಕ್ರಮ ಸಾರಾಯಿ ದಂಧೆಯ ವಿರುದ್ಧ ತೀವ್ರ ಜನಾಕ್ರೋಶ ವ್ಯಕ್ತವಾಗಿತ್ತಲ್ಲದೆ ರಾಜ್ಯ ಸರಕಾರ ಕೂಡ ಅಕ್ರಮ ಸಾರಾಯಿ ಮಾರಾಟ ಜಾಲವನ್ನು ಮಟ್ಟ ಹಾಕುವ ಭರವಸೆ ನೀಡಿತ್ತು. ಆದರೆ ರಾಜ್ಯದಲ್ಲಿ ಅದರಲ್ಲೂ ಗ್ರಾಮೀಣ ಪ್ರದೇ ಶ ಗಳಲ್ಲಿ ಅಕ್ರಮ ತಯಾರಿ ಮತ್ತು ಮಾರಾಟ ಎಗ್ಗಿಲ್ಲದೆ ನಡೆಯುತ್ತಲೇ ಬಂದಿದೆ. ಕಲ್ಲಿಕುರುಚಿಯಲ್ಲಿ ಕೂಲಿ ಕಾರ್ಮಿಕರ ಸಂಖ್ಯೆ ಅಧಿಕವಾಗಿದ್ದು, ಅವರಿಗೆ ಅಗ್ಗದ ಬೆಲೆಯಲ್ಲಿ ಅಕ್ರಮ ಸಾರಾಯಿಯನ್ನು ಪೂರೈಸಲಾಗುತ್ತಿತ್ತು. ಇಲ್ಲಿನ ಎರಡು ಗುಡಿಸಲುಗಳಲ್ಲಿ ಮಾರಾಟ ಮಾಡಲಾಗುತ್ತಿದ್ದ ಕಳ್ಳಭಟ್ಟಿಯನ್ನು ಮಂಗಳವಾರ ರಾತ್ರಿ ಸೇವಿಸಿದ ನೂರಾರು ಮಂದಿ ಬುಧವಾರ ಸಂಜೆ ವೇಳೆ ತೀವ್ರ ಅನಾರೋಗ್ಯಕ್ಕೀಡಾಗಿ ಇಲ್ಲಿನ ವಿವಿಧ ಆಸ್ಪತ್ರೆಗಳಿಗೆ ದಾಖಲಾದರು. ವೈದ್ಯಕೀಯ ಪರೀಕ್ಷೆ ವೇಳೆ ಕಳ್ಳಭಟ್ಟಿ ಸೇವಿಸಿದ ಪರಿಣಾಮ ಕಾರ್ಮಿಕರು ಏಕಾಏಕಿ ಅನಾರೋಗ್ಯಕ್ಕೀಡಾದುದು ಬೆಳಕಿಗೆ ಬಂದಿತ್ತು. ಈ ದುರಂತದಲ್ಲಿ ಸಾವನ್ನಪ್ಪಿದ ಬಹುತೇಕರು ಆಸ್ಪತ್ರೆಗೆ ಕರೆತರುವ ವೇಳೆಗಾಗಲೇ ಮಾರಣಾಂತಿಕ ಸ್ಥಿತಿಯಲ್ಲಿದ್ದರು. ಅಕ್ರಮ ಮದ್ಯವನ್ನು ಪ್ಯಾಕೆಟ್‌ನಲ್ಲಿ ಮಾರಾಟ ಮಾಡಲಾಗಿದ್ದು ಇದರಲ್ಲಿ ಮಾರಣಾಂತಿಕ ಮೆಥನಾಲ್‌ ಅನ್ನು ಸೇರಿಸಲ್ಪಟ್ಟಿರುವ ಅಂಶ ಪರೀಕ್ಷೆಯ ವೇಳೆ ದೃಢಪಟ್ಟಿದೆ. ಹಣದಾಸೆಗಾಗಿ ದಂಧೆಕೋರರು ಮದ್ಯ ತಯಾರಿ ವೇಳೆ ಇಂತಹ ವಿವಿಧ ವಿಷಕಾರಿ ರಾಸಾಯನಿಕ ಗಳನ್ನು ಮದ್ಯಕ್ಕೆ ಸೇರಿಸಿ ಮಾರಾಟ ಮಾಡುತ್ತಿರುತ್ತಾರೆ.

ಕಳೆದ ಹಲವಾರು ವರ್ಷಗಳಿಂದ ತಮಿಳುನಾಡಿನಲ್ಲಿ ಅಕ್ರಮ ಮದ್ಯ ದಂಧೆ ಸಕ್ರಿಯವಾಗಿ ನಡೆಯುತ್ತಿದ್ದರೂ ಆಡಳಿತ ವ್ಯವಸ್ಥೆ ಈ ಬಗ್ಗೆ ತಲೆಕೆಡಿಸಿಕೊಳ್ಳದಿರುವುದು ತೀವ್ರ ಅಚ್ಚರಿಗೆ ಕಾರಣವಾಗಿದೆ. ಇಷ್ಟೊಂದು ರಾಜಾರೋಷವಾಗಿ ದಂಧೆ ಸಾಗುತ್ತಿತ್ತು ಎಂದಾದರೆ ಇದರಲ್ಲಿ ಅಬಕಾರಿ ಮತ್ತು ಪೊಲೀಸ್‌ ಇಲಾಖೆಯೂ ಶಾಮೀಲಾಗಿರುವ ಅನುಮಾನ ಕಾಡುತ್ತಿದೆ. ಈ ಕಾರಣದಿಂದಾಗಿಯೇ ಸರಕಾರ ಮತ್ತು ಆಡಳಿತದ ವಿರುದ್ಧ ಸ್ಥಳೀಯರು ತೀವ್ರ ತೆರನಾದ ಪ್ರತಿಭಟನೆ ನಡೆಸಿದ್ದಾರೆ. ಈ ದುರಂತದ ತೀವ್ರತೆಯನ್ನು ಗಮನಿಸಿದಾಗ ಈ ಅಕ್ರಮ ದಂಧೆ ಸರಕಾರಿ ಅಧಿಕಾರಿಗಳ ಮೂಗಿನಡಿಯಲ್ಲಿಯೇ ನಡೆಯುತ್ತಿದ್ದುದು ಸ್ಪಷ್ಟ.

ತಮಿಳುನಾಡಿನಲ್ಲಿ ನಡೆದಿರುವ ಈ ಕಳ್ಳಭಟ್ಟಿ ದುರಂತವು ಕೇರಳ, ಕರ್ನಾಟಕ, ಪುದುಚೇರಿ ಸಹಿತ ನೆರೆಯ ರಾಜ್ಯಗಳಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ. ಈ ದಂಧೆಯನ್ನು ಬೇರುಸಮೇತ ಕಿತ್ತೂಗೆಯದಿದ್ದಲ್ಲಿ ಇಂತಹ ದುರಂತಗಳನ್ನು ತಡೆಯಲು ಸಾಧ್ಯವಿಲ್ಲ. ಹೀಗಾಗಿ ರಾಜ್ಯ ಸರಕಾರಗಳು ಕಳ್ಳಭಟ್ಟಿ, ಅಕ್ರಮ ಮದ್ಯ ತಯಾರಿ, ಮಾರಾಟ ಜಾಲವನ್ನು ಮಟ್ಟ ಹಾಕಲು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಇದೇ ವೇಳೆ ಜನತೆ ಕೂಡ ಇಂತಹ ವಿಷಯಗಳಲ್ಲಿ ಒಂದಿಷ್ಟು ವಿವೇಚನೆಯಿಂದ ವರ್ತಿಸಬೇಕಾಗಿದೆ. ಅಗ್ಗದ ಬೆಲೆಯಲ್ಲಿ ಲಭಿಸುತ್ತದೆ ಎಂದು ಕದ್ದುಮುಚ್ಚಿ ಮಾರಾಟ ಮಾಡಲಾಗುವ ಕಳಪೆ ಗುಣಮಟ್ಟದ ಮದ್ಯಗಳ ದಾಸರಾಗಿ ತಮ್ಮ ಆರೋಗ್ಯ, ಪ್ರಾಣಕ್ಕೆ ಕುತ್ತು ತಂದುಕೊಳ್ಳದಂತೆ ಎಚ್ಚರ ವಹಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next