ಪ್ರಸಕ್ತ ವರ್ಷ ಮುಂಗಾರು ಋತುವಿನಲ್ಲಿ ಎಲ್ ನಿನೋ ಕಾರಣದಿಂದಾಗಿ ವಾಡಿಕೆಗಿಂತ ಕಡಿಮೆ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಮುನ್ಸೂಚನೆ ನೀಡಿದ ಬೆನ್ನಲ್ಲೇ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಲ್ ನಿನೋ ಹೊರತಾಗಿಯೂ ದೇಶದಲ್ಲಿ ಪ್ರಸಕ್ತ ವರ್ಷ ವಾಡಿಕೆಯಷ್ಟು ಮಳೆಯಾಗಲಿದೆ ಎಂದು ತಿಳಿಸಿದೆ. ಈಗಾಗಲೇ ತಾಪಮಾನ ಹೆಚ್ಚಳ ಮತ್ತು ನೀರಿನ ಅಭಾವದಿಂದ ಕಂಗೆಟ್ಟಿರುವ ದೇಶದ ಜನತೆಯ ಅದರಲ್ಲೂ ರೈತರ ಮೊಗದಲ್ಲಿ ಐಎಂಡಿ ನೀಡಿರುವ ಈ ಮುನ್ಸೂಚನೆ ಆಶಾವಾದವನ್ನು ಮೂಡಿಸಿದೆ.
ಸೋಮವಾರವಷ್ಟೇ ಸ್ಕೈಮೆಟ್ ಪ್ರಸಕ್ತ ವರ್ಷದ ಮುಂಗಾರಿನ ಕುರಿತಂತೆ ತನ್ನ ಮೊದಲ ಮುನ್ಸೂಚನೆಯನ್ನು ಬಿಡುಗಡೆ ಮಾಡಿ ಮುಂಗಾರು ಋತುವಿನಲ್ಲಿ ಎಲ್ ನಿನೋ ಪರಿಣಾಮವಾಗಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಲಿದ್ದು, ದೇಶದಲ್ಲಿ ಶೇ. 20ರಷ್ಟು ಬರಗಾಲ ಉಂಟಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಿತ್ತು. ದೇಶದ ಕೃಷಿ ಕ್ಷೇತ್ರ ಅದರಲ್ಲೂ ಮುಖ್ಯವಾಗಿ ಆಹಾರ ಬೆಳೆಗಳು ಮುಂಗಾರನ್ನೇ ಅವಲಂಬಿಸಿದ್ದು ಈ ವರದಿ ರೈತರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಅಷ್ಟು ಮಾತ್ರವಲ್ಲದೆ ಮುಂಗಾರು ಕೈಕೊಟ್ಟದ್ದೇ ಆದಲ್ಲಿ ಆಹಾರ ಉತ್ಪಾದನೆ ಕುಂಠಿತಗೊಂಡು ಮತ್ತೆ ಬೆಲೆಏರಿಕೆಯ ಬಿಸಿ ತಟ್ಟಿ ಹಣದುಬ್ಬರ ಹೆಚ್ಚಾಗಲಿದೆ. ಇದು ದೇಶದ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುವುದರಿಂದ ಒಟ್ಟಾರೆಯಾಗಿ ದೇಶದ ಜನತೆಯಲ್ಲಿ ಒಂದಿಷ್ಟು ಕಳವಳ ಮೂಡಿಸಿತ್ತು.
ಆದರೆ ಕೇಂದ್ರ ಸರಕಾರದ ಅಧೀನದಲ್ಲಿರುವ ಭಾರತೀಯ ಹವಾಮಾನ ಇಲಾಖೆ ಮಂಗಳವಾರ ತನ್ನ ಮುನ್ಸೂಚನೆಯನ್ನು ಬಿಡುಗಡೆ ಮಾಡಿ, ಪ್ರಸಕ್ತ ಮುಂಗಾರು ಅವಧಿಯಲ್ಲಿ ಎಲ್ ನಿನೋ ಕಾಣಿಸಿಕೊಂಡರೂ ದೇಶದಲ್ಲಿ ವಾಡಿಕೆಯಷ್ಟು ಮಳೆಯಾಗಲಿದೆ. ಸೆಪ್ಟಂಬರ್ ತಿಂಗಳಲ್ಲಿ ಎಲ್ ನಿನೋ, ನೈಋತ್ಯ ಮಾರುತಗಳ ಮೇಲೆ ಕೊಂಚ ಪ್ರಭಾವ ಬೀರಲಿದೆಯಾದರೂ ಬರ ಪರಿಸ್ಥಿತಿ ಸೃಷ್ಟಿಯಾಗಲಾರದು. ಮುಂಗಾರಿನ ದೀರ್ಘಾವಧಿಯ ಸರಾಸರಿ ಶೇ.87ರಷ್ಟಾಗಿದ್ದು ಈ ಬಾರಿ ಈ ಅವಧಿಯಲ್ಲಿ ಶೇ.96ರಷ್ಟು ಮಳೆಯಾಗಲಿದೆ ಎಂದು ಅಂದಾಜಿಸಿದೆ. ಈ ಬಾರಿ ಸಾಮಾನ್ಯ ಅಥವಾ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ಸಂಭಾವ್ಯತೆ ಶೇ.67ರಷ್ಟಿದೆ ಎಂದು ಇಲಾಖೆ ತಿಳಿಸಿದೆ.
ಇದೇ ವೇಳೆ ವಾಯುವ್ಯ ಭಾರತ, ಮಧ್ಯ ಭಾರತ ಮತ್ತು ಈಶಾನ್ಯ ಭಾರತದಲ್ಲಿ ನೈಋತ್ಯ ಮಾರುತಗಳು ಸಾಮಾನ್ಯ ಅಥವಾ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಸುರಿಸುವ ಸಾಧ್ಯತೆಗಳಿವೆ. ಇನ್ನು ಪರ್ಯಾಯ ದ್ವೀಪ ಪ್ರದೇಶ, ಪೂರ್ವ-ಮಧ್ಯ ಭಾಗಗಳಿಗೆ ತಾಗಿಕೊಂಡಿರುವ ಪ್ರದೇಶಗಳು, ಪೂರ್ವ, ಈಶಾನ್ಯ ಪ್ರದೇಶಗಳ ಹಲವೆಡೆ ಮತ್ತು ವಾಯುವ್ಯ ಭಾರತದ ಕೆಲವೊಂದು ಭಾಗಗಳಲ್ಲಿ ಸಾಮಾನ್ಯ ಮಳೆಯಾಗಲಿದೆ ಎಂದು ಐಎಂಡಿ ಅಂದಾಜಿಸಿದೆ. ಅಷ್ಟು ಮಾತ್ರವಲ್ಲದೆ ಈಶಾನ್ಯ ಮಾರುತಗಳು ಹಿಂಗಾರು ಋತುವಿನಲ್ಲಿ ದೇಶದಲ್ಲಿ ಉತ್ತಮ ಮಳೆ ಸುರಿಸುವ ಸಾಧ್ಯತೆಗಳಿದ್ದು, ಮುಂಗಾರು ಅವಧಿಯಲ್ಲಿನ ಕೊರತೆಯನ್ನು ನಿವಾರಿಸಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದೆ.
ಮುಂಗಾರು ಮಳೆಗೆ ಸಂಬಂಧಿಸಿದಂತೆ ಎರಡು ಹವಾಮಾನ ಸಂಸ್ಥೆಗಳು ಒಂದಿಷ್ಟು ವಿಭಿನ್ನವಾದ ಮುನ್ಸೂಚನೆಯನ್ನು ನೀಡಿವೆಯಾದರೂ ಪ್ರಸಕ್ತ ಸಾಲಿನ ಮುಂಗಾರು ಋತುವಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯುವ ವಿಶ್ವಾಸ ದೇಶದ ರೈತರದ್ದಾಗಿದೆ. ತಾಪಮಾನ ಒಂದೇ ಸಮನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಗಾರು ಅವಧಿಯಲ್ಲಿ ಉತ್ತಮ ಮಳೆಯಾಗಬಹುದು ಎಂಬುದು ಜನತೆಯ ನಿರೀಕ್ಷೆ. ಇದಕ್ಕೆ ಪೂರಕವಾಗಿ ಭಾರತೀಯ ಹವಾಮಾನ ಇಲಾಖೆ ಕೂಡ ವಾಡಿಕೆಯಷ್ಟು ಮಳೆ ಸುರಿಯಲಿದೆ ಎಂದು ಅಂದಾಜಿಸಿದ್ದು ಸಹಜವಾಗಿಯೇ ದೇಶದ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಮುಂಗಾರು ಆರಂಭಗೊಳ್ಳಲು ಇನ್ನೂ ಒಂದೂವರೆ ತಿಂಗಳು ಬಾಕಿ ಉಳಿದಿರುವುದರಿಂದ ಹಾಲಿ ಋತುವಿನಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆ ಸುರಿಯಲಿದೆ ಎಂದು ಅಂದಾಜಿಸುವುದು ಒಂದಿಷ್ಟು ಆತುರದ ನಡೆಯಾದೀತು. ಸರಿಸುಮಾರು ನಾಲ್ಕು ವರ್ಷಗಳ ವಿರಾಮದ ಬಳಿಕ ಈ ಬಾರಿ ಎಲ್ ನಿನೋ ವಿದ್ಯಮಾನ ಸಂಭವಿಸುವುದು ನಿಶ್ಚಿತವಾಗಿರುವುದರಿಂದ ಇಡೀ ದೇಶದ ಚಿತ್ತ ಈ ವಿದ್ಯಮಾನದ ತೀವ್ರತೆ ಮತ್ತು ಪರಿಣಾಮದ ಮೇಲೆ ನೆಟ್ಟಿದೆ.