Advertisement

ಭೂಮಿಗೆ ಮನುಷ್ಯನ ಕೊಡುಗೆ ಶೂನ್ಯ; ಸಿವಿಲ್‌ ನ್ಯಾಯಾಧೀಶ ಎಂ.ಶ್ರೀಧರ

05:54 PM Jun 06, 2022 | Team Udayavani |

ಚಾಮರಾಜನಗರ: ಎಲ್ಲಾ ಜೀವಿಗಳಂತೆ ಮನುಷ್ಯ ಕೂಡ ಒಬ್ಬ. ಭೂಮಿಗೆ ನಾವು ಅನಿವಾರ್ಯವಲ್ಲ, ಆದರೆ, ಅದು ನಮಗೆ ಬೇಕಿದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಶ್ರೀಧರ ಅಭಿಪ್ರಾಯಪಟ್ಟರು.

Advertisement

ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾನುವಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನೆಹರು ಯುವ ಕೇಂದ್ರ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ವರಮಹಾಲಕ್ಷ್ಮೀ ಸಾಂಸ್ಕೃತಿಕ ಕ್ರೀಡಾ ಸೇವಾ ಸಂಸ್ಥೆ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಭೂಮಿಯಲ್ಲಿ ಅರಣ್ಯ, ಜೀವ ಸಂಕುಲಗಳಂತೆ ಮನುಷ್ಯ ಕೂಡ ಸೃಷ್ಟಿಯ ಒಂದು ಭಾಗ. ಇತಿಹಾಸದಲ್ಲಿ ಭೂಮಿಗೆ ಮನುಷ್ಯನ ಕೊಡುಗೆ ಶೂನ್ಯವಾಗಿದೆ. ಮಾನವನ ದುರಾಸೆ ಹಾಗೂ ಕೈಗಾರಿಕಾ ಕ್ರಾಂತಿಯಿಂದಾಗಿ ಪ್ರಕೃತಿ ಮೇಲೆ ದೌರ್ಜನ್ಯ ಎಗ್ಗಿಲ್ಲದೇ ನಡೆಯುತ್ತಿದೆ.ಹಳ್ಳಿಗಳೆಲ್ಲ ಪಟ್ಟಣಗಳನ್ನಾಗಿ, ನಗರೀಕರಣಗೊಳಿಸಿ ಅರಣ್ಯಗಳನ್ನು ನಾಶಮಾಡಿ ಕೇವಲ ಕಾಂಕ್ರೀಟ್‌ ಉದ್ಯಾನ ನೋಡುವಂತಾಗಿದೆ ಎಂದು ವಿವರಿಸಿದರು.

ವಿಶ್ವ ಪರಿಸರ ದಿನಾಚರಣೆ ಕೇವಲ ಕಾರ್ಯಕ್ರಮಕ್ಕೆ ಸೀಮಿತಗೊಳಿಸದೇ ಪ್ರತಿಯೊಬ್ಬರು ಗಿಡಗಳನ್ನು ನೆಡುವುದಷ್ಟೇ ಅಲ್ಲದೇ, ಅದನ್ನು ಸಂರಕ್ಷಿಸುವ ಕಾಯಕವನ್ನು ವಿದ್ಯಾರ್ಥಿಗಳು ಮಾಡಬೇಕು. ಪ್ರಜ್ಞಾವಂತ ನಾಗರೀಕರು, ಅಧಿಕಾರಿಗಳು ಭೂಮಿ ಮೇಲಿನ ಹಾನಿ ತಡೆಗಟ್ಟಿ ಮುಂದಿನ ಪೀಳಿಗೆಗೆ ಸುಂದರ ಪರಿಸರವನ್ನು ಉಳಿಸಬೇಕು. ಪರಿಸರ ಸಂರಕ್ಷಣೆಯು ಸಂವಿಧಾನದ ಪ್ರಕಾರ ಮೂಲಭೂತ ಕರ್ತವ್ಯವಾಗಿದೆ ಎಂದು ಎಂ. ಶ್ರೀಧರ ತಿಳಿಸಿದರು.

ಉಸಿರಾಡಲು ಸಹ ಕಷ್ಟದ ಪರಿಸ್ಥಿತಿ: ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಸ್‌.ಸುಂದರ್‌ರಾಜ ಮಾತನಾಡಿ, ಮಾನವನ ಆಸೆಗೆ ಮಿತಿ ಇಲ್ಲ, ತನ್ನ
ಗೌರವದ ಸಂಕೇತವಾಗಿ ವಾಹನಗಳನ್ನು ಅವಶ್ಯಕತೆಗಿಂತ ಹೆಚ್ಚಾಗಿ ಉಪಯೋಗಿಸುತ್ತಿದ್ದು, ಇದರಿಂದ ಹೊರಸೂಸುವ ವಿಷಾನಿಲದಿಂದ ವಾಯುಮಾಲಿನ್ಯ ಉಂಟಾಗಿ ದೊಡ್ಡ ನಗರಗಳಲ್ಲಿ ಉಸಿರಾಡಲು ಸಹ ಕಷ್ಟದ ಪರಿಸ್ಥಿತಿ ಎದುರಾಗಿದೆ ಎಂದು ವಿವರಿಸಿದರು.

Advertisement

ಅರಣ್ಯ ರಕ್ಷಣೆಗೆ ಪಣತೊಡಬೇಕು: ಪ್ರತಿಯೊಬ್ಬರೂ ಅರಣ್ಯವನ್ನು ಸಂರಕ್ಷಿಸುವ ಕೆಲಸ ಮಾಡಬೇಕು, ಈ ನಿಟ್ಟಿನಲ್ಲೇ ಸಾಲುಮರದ ತಿಮ್ಮಕ್ಕ ನಮಗೆಲ್ಲರಿಗೂ ಕೂಡ ಮಾದರಿ. ಸರ್ಕಾರವು ಅರಣ್ಯ ಸಂರಕ್ಷಿಸುವ ಯೋಜನೆಗಳನ್ನು ರೂಪಿಸಬೇಕು. ಎನ್‌ಜಿಒಗಳು ಪರಿಸರದ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು. ಅರ್ಥ ಪೂರ್ಣವಾಗಿ ಅರಣ್ಯ ರಕ್ಷಣೆಗೆ ಪಣತೊಡಬೇಕು ಎಂದು ಸುಂದರ್‌ರಾಜು ಹೇಳಿದರು.

ಅರಣ್ಯವನ್ನು ಸಂರಕ್ಷಿಸೋಣ: ಸಾಮಾಜಿಕ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಭ್ಯಶ್ರೀ ಮಾತನಾಡಿ, ಜೀವ ಸಂಕುಲಕ್ಕೆ ಆಮ್ಲಜನಕ
ಎಷ್ಟು ಮುಖ್ಯ ಎಂಬುದು ಎಲ್ಲರಿಗೂ ತಿಳಿದಿದೆ. ಈ ನಿಟ್ಟಿನಲ್ಲಿ ಸರ್ಕಾರವು ಸಮೂಹ ಅರಣ್ಯಗಳನ್ನು ಬೆಳೆಸಲು ಪ್ರೋತ್ಸಾಹಿಸುತ್ತಾ ಬಂದಿದೆ. ಸೂರ್ಯನ ನೇರಳಾತೀತ ಕಿರಣಗಳಿಂದ ನಮ್ಮನ್ನು ರಕ್ಷಿಸುತ್ತಿರುವ ಓಝೊನ್‌ ಪದರವನ್ನು ರಕ್ಷಿಸಲು ವಾತಾವರಣಕ್ಕೆ ಹೆಚ್ಚು ಆಮ್ಲಜನಕ ಪೂರೈಕೆಯಾಗಬೇಕು. ಹಾಗಾಗಿ ಪ್ರತಿಯೊಬ್ಬರು ಕೂಡ ಅರಣ್ಯವನ್ನು ಸಂರಕ್ಷಿಸೋಣ ಎಂದು ವಿವರಿಸಿದರು.

ಉತ್ತಮ ಪರಿಸರ ಕೊಡೋಣ: ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಎಂ.ಆರ್‌.ಸುಮತಿ ಮಾತನಾಡಿ, ಮನುಷ್ಯ ಆಸ್ತಿ ವಾಮೋಹದಿಂದ ಪರಿಸರವನ್ನೇ ನಾಶ ಮಾಡುತ್ತಿದ್ದಾನೆ. ಅದೇ ವ್ಯಾಮೋಹ ಪರಿಸರ ಸಂರಕ್ಷಣೆಯಲ್ಲೂ ಕೂಡ ಇರಬೇಕು. ನಮ್ಮ ಮುಂದಿನ ತಲೆಮಾರಿಗೆ ಆಸ್ತಿ ಕೊಡುವ ಬದಲು ಉತ್ತಮ ಪರಿಸರವನ್ನು ಕೊಡಲು ಮುಂದಾಗೋಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಬಿ.ಆರ್‌.ಜಯಣ್ಣ, ವರಮಹಾಲಕ್ಷ್ಮೀ ಸಾಂಸ್ಕೃತಿಕ ಕ್ರೀಡಾ ಸೇವಾ ಸಂಸ್ಥೆ ಅಧ್ಯಕ್ಷ ಜಿ.ಬಂಗಾರು, ನೆಹರು ಯುವಜನ ಕೇಂದ್ರದ ದಾಕ್ಷಾಯಿಣಿ, ಎನ್‌.ಎಸ್‌. ಎಸ್‌. ಸ್ವಯಂ ಸೇವಕರು, ಕಾಲೇಜಿನ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಈ ವೇಳೆ ನಗರದ ಸಾಲುಮರದ ಸಿ.ಎಂ. ವೆಂಕಟೇಶ್‌ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಉಚಿತ ಸಸಿ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next