Advertisement
ತಿಲಂಗ್ ರಾಗ, ಆದಿತಾಳದ ಪುಷ್ಪಾಂಜಲಿಗೆ ಹೆಜ್ಜೆ ಹಾಕುತ್ತಾ ಕಾರ್ಯಕ್ರಮವನ್ನು ಆರಂಭಿಸಿದ ನೇಹಾ, ಧವಳಾ ಮತ್ತು ಅನಘಾ ಸುಂದರವಾದ ಅಡವುಗಳಿಂದ ಸಂಯೋಜಿಸಲ್ಪಟ್ಟ ನೃತ್ಯ ಪ್ರಸ್ತುತಿಯೊಂದಿಗೆ ಕಾರ್ಯಕ್ರಮಕ್ಕೆ ಶುಭ ನಾಂದಿಯನ್ನು ಹಾಡಿದರು. ವಿ| ಸುಮಂಗಲಾ ರತ್ನಾಕರ್ ರಚನೆಯ ಈ ನೃತ್ಯ ಸೃಜನಶೀಲವಾಗಿದ್ದು, ದೇವ-ಗುರು-ಸಭೆಯ ವಂದನೆಯ ಸಂದರ್ಭದಲ್ಲಿ ಬಳಸಿದ ಗದ್ಯಭಾಗ ಆಕರ್ಷಕವಾಗಿತ್ತು. ಬಳಿಕ ಅವರದೇ ರಚನೆಯ ಶ್ರೀದೇವಿ ಮಹಾತ್ಮೆಯ ಕಥೆಯನ್ನಾಧರಿಸಿದ ಭಕ್ತಿರಸ ಪ್ರಧಾನ ಶಬ್ದಂ ರಾಗ ಮಾಲಿಕೆ- ಮಿಶ್ರಛಾಪು ತಾಳದಲ್ಲಿ ನೇಹಾ ಮತ್ತು ಧವಳಾ ಅವರಿಂದ ಸೊಗಸಾಗಿ ಹೊರಹೊಮ್ಮಿತು. ಇಲ್ಲಿ ಪ್ರಸ್ತುತಗೊಂಡ ಮಹಿಷ-ದೇವಿ ಭಾಗದ ವಿಸ್ತೃತ ಅಭಿನಯ ಪರಿಣಾಮಕಾರಿಯಾಗಿತ್ತು.
Related Articles
Advertisement
ಚುರುಕಾದ ಲಯಪಕ್ವತೆಯಿಂದ ಕೂಡಿದ ದ್ವಾರಕೀಕೃಷ್ಣಸ್ವಾಮಿ ರಚಿಸಿದ ವಲಚಿ ರಾಗ -ಆದಿತಾಳದ ತಿಲ್ಲಾನ, ಮಂಗಲಂ ನೃತ್ಯದೊಂದಿಗೆ ಕಾರ್ಯಕ್ರಮ ಬಹುಕಾಲ ನೆನಪಿನಲ್ಲಿ ಉಳಿಯುವಂತೆ ಕೊನೆಗೊಂಡಿತು. ಪ್ರತಿಭಾನ್ವಿತೆಯರಾದ ನಾಲ್ವರೂ ಸತತ ಅಭ್ಯಾಸವನ್ನು ಮುಂದುವರಿಸಿದಲ್ಲಿ ಪರಿಪಕ್ವ ಕಲಾವಿದೆಯರಾಗಿ ಬೆಳಗುವು ದರಲ್ಲಿ ಸಂದೇಹವಿಲ್ಲ. ನೃತ್ಯಕ್ಕೆ ಬಳಸಿದ ಸಾಹಿತ್ಯವೆಲ್ಲವೂ ಕನ್ನಡ ಹಾಗೂ ಕನ್ನಡದಲ್ಲಿಯೂ ಕನ್ನಡವಾಗಿ ಬಳಸುವ ಸಂಸ್ಕೃತ ಮೂಲ ಶಬ್ದಗಳಿಂದ ಕೂಡಿದ್ದು ವಿಶೇಷವಾಗಿತ್ತು. ನಟುವಾಂಗ ಮತ್ತು ನೃತ್ಯ ನಿರ್ದೇಶನದ ಜತೆಗೆ ಸಾಹಿತ್ಯ ರಚನೆಯ ಮೂಲಕ ಗುರು ವಿ| ಸುಮಂಗಲಾ ರತ್ನಾಕರ್ ತಮ್ಮ ಸಾಮರ್ಥ್ಯವನ್ನು ಪ್ರಚುರ ಪಡಿಸಿದರು. ಹಾಡುಗಾರಿಕೆಯಲ್ಲಿ ವಿ| ಶೀಲಾ ದಿವಾಕರ್ ತಮ್ಮ ಸುಶ್ರಾವ್ಯ ಕಂಠ ಮತ್ತು ಭಾವಪೂರ್ಣ ಗಾಯನದೊಂದಿಗೆ ಪ್ರೇಕ್ಷಕ ರನ್ನು ಸೆರೆಹಿಡಿದರು. ಮೃದಂಗದಲ್ಲಿ ವಿ| ಪಯ್ಯನ್ನೂರು ರಾಜನ್, ಕೊಳಲಿನಲ್ಲಿ ವಿ| ಮುರಳೀಧರ ಆಚಾರ್ಯ, ಉಡುಪಿ, ಖಂಜಿರ ಹಾಗೂ ಮೋರ್ಸಿಂಗ್‌ನಲ್ಲಿ ಕೃಷ್ಣ ಗೋಪಾಲ್ ಪುಂಜಾಲಕಟ್ಟೆ ಭಾವಕ್ಕನುಗುಣವಾದ ನುಡಿತ ದೊಂದಿಗೆ ತಮ್ಮ ಕಲಾಕೌಶಲವನ್ನು ಪ್ರತಿಬಿಂಬಿಸಿದರು. ಕಾರ್ಯಕ್ರಮ ಸಂಘಟಿಸಿದ ನಾಟ್ಯಾರಾಧನಾ ಕಲಾಕೇಂದ್ರ ಹಾಗೂ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಿರುವ ವಿದ್ಯಾರ್ಥಿನಿಯರ ಹೆತ್ತವರ ಶ್ರಮ ಪ್ರಶಂಸನೀಯ. ಮಿತ ವ್ಯಯದ ದೃಷ್ಟಿಯಲ್ಲಿ ಹೀಗೆ ಕೆಲವು ಮಕ್ಕಳು ಸೇರಿ ರಂಗ ಪ್ರವೇಶದಂಥ ಕಾರ್ಯಕ್ರಮ ನೀಡುವುದು ಅನುಸರಣೀಯ. ವಿ| ವಿದ್ಯಾ ಮನೋಜ್