ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ನಡೆಯುವ ಕರಾವಳಿ ಉತ್ಸವ ಸಂದರ್ಭ ನೀಡಲಾಗುವ “ಕರಾವಳಿ ಗೌರವ ಪ್ರಶಸ್ತಿ’ಗೆ ಈ ವರ್ಷ (2019-20) ಉದಯವಾಣಿ ಪತ್ರಿಕೆಯ ಸಹಾಯಕ ಸಂಪಾದಕ ಮನೋಹರ ಪ್ರಸಾದ್ ಆಯ್ಕೆಯಾಗಿದ್ದಾರೆ.
ಪತ್ರಿಕೋದ್ಯಮ ಕ್ಷೇತ್ರಕ್ಕೆ ಸಲ್ಲಿಸಿದ ಗಮನಾರ್ಹ ಸಾಧನೆ ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ರವಿವಾರ ಸಂಜೆ 5.30ಕ್ಕೆ ಪಣಂಬೂರು ಬೀಚ್‌ನಲ್ಲಿ ನಡೆಯುವ ಕರಾವಳಿ ಉತ್ಸವದ ಸಮಾರೋಪದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ತಿಳಿಸಿದ್ದಾರೆ.
ಮೂಲತಃ ಕಾರ್ಕಳ ತಾ| ಕರುವಾಲು ಗ್ರಾಮದವರಾದ ಮನೋಹರ ಪ್ರಸಾದ್ ಮಂಗಳೂರಿನಲ್ಲಿ ಕಾಲೇಜು ಪದವಿ ಶಿಕ್ಷಣ ಪೂರ್ತಿಗೊಳಿಸಿ “ನವ ಭಾರತ’ ಪತ್ರಿಕೆಯಲ್ಲಿ ಪತ್ರಿಕಾ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ “ಉದಯವಾಣಿ’ಗೆ ಮಂಗಳೂರು ವರದಿಗಾರರಾಗಿ ಸೇರ್ಪಡೆಗೊಂಡಿದ್ದರು. ಅಲ್ಲಿಂದ ಮೊದಲ್ಗೊಂಡು ಮುಖ್ಯ ವರದಿಗಾ ರರಾಗಿ, ಬಳಿಕ ಬ್ಯೂರೋ ಚೀಫ್ ಮತ್ತು ಪ್ರಸ್ತುತ ಸಹಾಯಕ ಸಂಪಾದಕರ ಹುದ್ದೆಯವರೆಗೆ ಸತತ 36 ವರ್ಷಗಳ ಸೇವೆ ಸಲ್ಲಿಸಿದ್ದಾರೆ.
ಸೃಜನಶೀಲ ಬರಹಗಾರರಾಗಿ, ಅನೇಕ ಕಥೆ, ಕವನಗಳನ್ನು ಬರೆದಿದ್ದು, ಬೊಗಾಣೆ (ಕೊಂಕಣಿ), ಸೀತಾನದಿ (ಕನ್ನಡ), ದಬಕ್ ದಬಕ್ ಐಸಾ (ತುಳು), ಐಸ್‌ಕ್ರೀಂ (ತುಳು) ಮುಂತಾದ ಚಿತ್ರಗಳಲ್ಲಿ ನಟಿಸುವ ಮೂಲಕ ಬಹುಮುಖ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಕರ್ನಾಟಕ ಕರಾವಳಿ ಇತಿಹಾಸದ ಕುರಿತು 608 ಸಂಶೋಧನ ಲೇಖನಗಳನ್ನು ಬರೆದು ಉದಯವಾಣಿಯ ಮೂಲಕ ಪ್ರಕಟಿಸಿದ್ದಾರೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ, ಸಂದೇಶ ಪ್ರತಿಷ್ಠಾನದ ರಾಜ್ಯ ಪ್ರಶಸ್ತಿ, ಕೆನರಾ ಬ್ಯಾಂಕ್ ಅಮೃತೋತ್ಸವ ಪುರಸ್ಕಾರ ಮೊದಲಾದ ಹಲವು ಗೌರವ ಗಳಿಗೆ ಭಾಜನರಾಗಿದ್ದಾರೆ.