Advertisement

ಪರಿಕ್ಕರ್‌ ಆರೋಗ್ಯ ಗಂಭೀರ ; ಆದ್ರೂ ಅವರೇ ಗೋವಾ ಸಿ.ಎಂ. : ಬಿಜೆಪಿ

01:03 PM Mar 18, 2019 | Karthik A |

ಪಣಜಿ: ಅನಾರೋಗ್ಯಪೀಡಿತರಾಗಿರುವ ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ಅವರ ದೇಹಾರೋಗ್ಯ ಸ್ಥಿತಿಯು ಕಳೆದ ಕೆಲವು ದಿನಗಳಿಂದ ತೀರಾ ಹದಗೆಟ್ಟಿದೆ. ಈ ವಿಚಾರವಾಗಿ ಚರ್ಚಿಸಲು ಗೋವಾದಲ್ಲಿ ಇಂದು ಸಭೆ ಸೇರಿದ್ದ ಪಕ್ಷದ ಹಿರಿಯ ನಾಯಕರು ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಯಿಸುವ ವಿಚಾರವನ್ನು ತಳ್ಳಿಹಾಕಿದ್ದಾರೆ. ‘ಸದ್ಯಕ್ಕೆ ನಾಯಕತ್ವ ಬದಲಾಯಿಸುವ ಯಾವುದೇ ಪ್ರಶ್ನೆಯಿಲ್ಲ. ಪರ್ರಿಕರ್‌ ಅವರು ಶೀಘ್ರ ಗುಣಮುಖರಾಗಲೆಂದು ನಾವು ಪ್ರಾರ್ಥಿಸುತ್ತಿದ್ದೇವೆ. ಈ ವಿಚಾರದಲ್ಲಿ ಕಾಂಗ್ರೆಸ್‌ ಅನಗತ್ಯವಾಗಿ ಮೂಗು ತೂರಿಸುತ್ತಿದೆ’ ಎಂದು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ವಿನಯ್‌ ತೆಂಡೂಲ್ಕರ್‌ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

Advertisement

‘ಮನೋಹರ್‌ ಪರ್ರಿಕರ್‌ ಅವರ ಆರೋಗ್ಯಸ್ಥಿತಿ ಗಂಭಿರವಾಗಿರುವುದು ನಿಜ. ನನಗೂ ಅವರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಅವರನ್ನು ಭೇಟಿಯಾಗಲು ಕಾಯುತ್ತಿದ್ದೇನೆ’ ಎಂದು ಉಪಮುಖ್ಯಮಂತ್ರಿ ಲಕ್ಷ್ಮೀಕಾಂತ್‌ ಪರ್ಸೆಕರ್‌ ಅವರು ತಿಳಿಸಿದ್ದಾರೆ. ಇನ್ನು ಮಾಜೀ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ ನಾಯಕ ದಿಗಂಬರ ಕಾಮತ್‌ ಅವರು ಬಿ.ಜೆ.ಪಿ. ಸೇರುತ್ತಿದ್ದಾರೆ ಎಂಬ ವಿಚಾರದ ಕುರಿತಾಗಿ ಪ್ರತಿಕ್ರಿಯಿಸಲು ಪರ್ಸೆಕರ್‌ ಅವರು ನಿರಾಕರಿಸಿದ್ದಾರೆ. ಈ ಕುರಿತಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪರ್ಸೆಕರ್‌ ಅವರ ‘ಮುಗುಳ್ನಗೆ’ಯೇ ಉತ್ತರವಾಗಿತ್ತು. ಒಂದು ಮೂಲಗಳ ಪ್ರಕಾರ ದಿಗಂಬರ ಕಾಮತ್‌ ಅವರು ಬಿ.ಜೆ.ಪಿ.ಗೆ ಸೇರಲಿದ್ದು ಪರ್ರಿಕರ್‌ ಅನುಪಸ್ಥಿತಿಯಲ್ಲಿ ಅವರು ಗೋವಾ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ.

ಓರ್ವ ಶಾಸಕರ ಸಾವು ಮತ್ತು ಕಾಂಗ್ರೆಸ್‌ ನ ಇಬ್ಬರು ಶಾಸಕರ ರಾಜೀನಾಮೆಯಿಂದಾಗಿ ಗೋವಾ ವಿಧಾನ ಸಭೆಯ ಸಂಖ್ಯಾಬಲವು 40ರಿಂದ 37ಕ್ಕೆ ಕುಸಿದಿದೆ. ಇಲ್ಲಿ ಕಾಂಗ್ರೆಸ್‌ ಬಲ ಸದ್ಯಕ್ಕೆ 14 ಇದೆ. ಬಿಜೆಪಿ ಮೈತ್ರಿಕೂಟದ ಸಂಖ್ಯಾಬಲ 16 ಆಗಿದೆ. ಇಲ್ಲಿನ ಮೂರು ಸ್ಥಾನಗಳಿಗೆ ಚುನಾವಣೆ ಎಪ್ರಿಲ್‌ 23ರಂದು ಲೋಕಸಭಾ ಚುನಾವಣೆಯ ಜೊತೆಗೇ ನಡೆಯಲಿದೆ. ಮನೋಹರ್‌ ಪರ್ರಿಕರ್‌ ಅವರ ಖಾಸಗಿ ನಿವಾಸವು ಇದೀಗ ಬಿಗಿ ಭದ್ರತೆಯಲ್ಲಿದ್ದು ಯಾರನ್ನೂ ಮನೆ ಒಳಗೆ ಬಿಡದಂತೆ ಮತ್ತು ಮನೆಯ ಆವರಣದ ಬಳಿ ಜಮಾಯಿಸದಂತೆ ಭದ್ರತಾ ಸಿಬ್ಬಂದಿಗಳಿಗೆ ಆದೇಶ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next